ADVERTISEMENT

ಸೊಬಗಿನ ಸಿರಿ ಸಿಡಿಲು ಮಲ್ಲಿಕಾರ್ಜುನ ಬೆಟ್ಟ

ಗಣಂಗೂರು ನಂಜೇಗೌಡ
Published 24 ಮೇ 2025, 23:35 IST
Last Updated 24 ಮೇ 2025, 23:35 IST
ಬೆಟ್ಟದಿಂದ ಕಾಣುವ ವಿಹಂಗಮ ನೋಟವನ್ನು ಆನಂದಿಸುತ್ತಿರುವ ಚಾರಣಿಗರು
ಬೆಟ್ಟದಿಂದ ಕಾಣುವ ವಿಹಂಗಮ ನೋಟವನ್ನು ಆನಂದಿಸುತ್ತಿರುವ ಚಾರಣಿಗರು   

ಮುಂಜಾನೆಯೇ ಎದ್ದು ಪಿರಿಯಾಪಟ್ಟಣಕ್ಕೆ 16 ಕಿ.ಮೀ. ದೂರದ ಬೆಟ್ಟದಪುರದ ಕಡೆಗೆ ಪಯಣ ಬೆಳೆಸಿದೆವು. ಸೂರ್ಯ ಕಣ್ಣು ಬಿಡುವ ಮುನ್ನವೇ ಬೆಟ್ಟ ಏರಲು ಶುರು ಮಾಡಿದೆವು. ಕೈಯಲ್ಲಿ ನೀರಿನ ಬಾಟಲಿ, ಬಿಸ್ಕತ್‌, ಆಸರೆಗೊಂದು ಕೋಲು ಹಿಡಿದು ಒಂದೊಂದೇ ಮೆಟ್ಟಿಲು ಹತ್ತುತ್ತಾ ಹೋದಂತೆ ಹೊಸ ಲೋಕವೊಂದು ತೆರೆದುಕೊಳ್ಳುತ್ತಿರುವಂತೆ ಭಾಸವಾಯಿತು.

ಮೇಲೇರುತ್ತಾ ಹೋದಂತೆ ನೂರಿನ್ನೂರು ಮೆಟ್ಟಿಲುಗಳಿಗೆ ಒಂದೊಂದು ಅರವಟ್ಟಿಗೆಗಳು, ಅರ್ಧ ಅಡಿ ಎತ್ತರದ ಕಲ್ಲು ಚಪ್ಪಡಿಗಳ ಮೆಟ್ಟಿಲುಗಳು, ಗತಕಾಲದ ಕಥೆ ಹೇಳುವ ಶಿಥಿಲ ದೇಗುಲಗಳು, ಹಾದಿಯ ಇಕ್ಕೆಲಗಳಲ್ಲಿ ನೆರಳು ನೀಡುವ ಮರಗಳು, ಪುರ್‍ರನೆ ಅತ್ತಿಂದಿತ್ತ ಹಾರುವ ಪಕ್ಷಿಗಳು, ಓತಿಕ್ಯಾತಗಳ ನೆಗೆದಾಟ, ಚಿಟ್ಟೆಗಳ ಹಾರಾಟ– ಇವು ನಮ್ಮ ಆಯಾಸವನ್ನು ದೂರ ಮಾಡಿ ಬೆಟ್ಟ ಹತ್ತಲು ಹುರುಪು ನೀಡಿದವು.

ಕೆಲವೇ ದಿನಗಳ ಹಿಂದೆ ಸುರಿದ ಮಳೆಗೆ ಬೆಟ್ಟದ ಕೊರಕಲುಗಳಲ್ಲಿ ತಿಳಿಗೆಂಪು ಬಣ್ಣದ ಲಿಲ್ಲಿ ಹೂಗಳು ಅರಳಿ ನಗುತ್ತಿದ್ದವು. ಬೇಸಿಗೆಯಲ್ಲಿ ಬೋಳಾಗಿದ್ದ ಮರ, ಗಿಡಗಳು ಹೊಚ್ಚ ಹೊಸ ಹಸಿರುಡುಗೆ ತೊಟ್ಟು, ಚಾಮರ ಬೀಸಿ ನಮ್ಮನ್ನು ಸ್ವಾಗತಿಸುತ್ತಿರುವಂತೆ ತೋರಿತು. ಮುಕ್ಕಾಲು ಬೆಟ್ಟ ಹತ್ತಿ ನಿಂತು ಹಿಂತಿರುಗಿ ನೋಡಿದಾಗ ಕಂಡ ನಯನ ಮನೋಹರ ದೃಶ್ಯ ನಮ್ಮನ್ನು ಪುಳಕಿತರನ್ನಾಗಿಸಿತು. ಬೆಟ್ಟ ಹತ್ತುವ ನಮ್ಮ ಹುಮ್ಮಸ್ಸನ್ನು ಇಮ್ಮಡಿಗೊಳಿಸಿತು.

ADVERTISEMENT
ಬೆಟ್ಟದ ಬುಡದಲ್ಲಿರುವ ವಿಜಯನಗರ ಶೈಲಿಯ ಗೋಪುರ ಮತ್ತು ಗುಡಿಗಳು

ಬಸವನ ಶಿಲಾ ಸ್ತಂಭ

ಬೆಟ್ಟದ ತುದಿಯಲ್ಲಿರುವ ಮಲ್ಲಿಕಾರ್ಜುನ ದೇವಾಲಯ ತಲುಪಲು ಇನ್ನು 300 ಮೆಟ್ಟಿಲು ಏರುವುದಷ್ಟೇ ಬಾಕಿ ಇರುವಾಗ ಎಡಕ್ಕೊಂದು ಕಲ್ಲು ಹಾಸಿನ ಬಂಡೆ, ಅದರ ಹೊಟ್ಟೆ ಕೊರೆದು ನೆಟ್ಟಿರುವ 15 ಅಡಿ ಎತ್ತರದ ಲಂಬಾಕಾರದ ಶಿಲಾಸ್ತಂಭ, ಅದರ ಮೇಲೊಂದು ಬಸವನ ಮೂರ್ತಿ ಕಾಣಿಸಿದವು. ಅದನ್ನು ಕಂಡಿದ್ದೇ ತಡ, ಏನೋ ಅದ್ಭುತ ಕಂಡಂತೆ ಗೆಳೆಯ ಕಿರು ದಾರಿ ಹಿಡಿದು ನಡಿಗೆಯ ವೇಗವನ್ನು ಮತ್ತಷ್ಟು ಚುರುಕುಗೊಳಿಸಿದರು. ನಾವೂ ಅವರನ್ನು ಹಿಂಬಾಲಿಸಿದೆವು. ಬಸವನ ಶಿಲಾಸ್ತಂಭ ತಲುಪುವ ಹೊತ್ತಿಗಾಗಲೇ ಚಾರಣಿಗರ ಗುಂಪೊಂದು ಅಲ್ಲಿಗೆ ತಲುಪಿತ್ತು. ಮೈಸೂರಿನಿಂದ ಬಂದಿದ್ದ ಗುಂಪು ಪ್ರಕೃತಿ ಸೌಂದರ್ಯ ಸವಿಯುತ್ತಾ ಆನಂದದ ಅಲೆಯಲ್ಲಿ ತೇಲುತ್ತಿತ್ತು. ನಾವೂ ಅವರ ಜತೆಗೂಡಿ ಹೃನ್ಮನ ತಣಿಸುವ ರಮಣೀಯ ದೃಶ್ಯವನ್ನು ಮನತುಂಬಿ ಆಸ್ವಾದಿಸಿದೆವು. ತಂಗಾಳಿಗೆ ಮೈಯೊಡ್ಡಿ ಸುಖಿಸಿದೆವು. ಬೆಟ್ಟವೇರಿದ್ದ ದಣಿವು ದೂರಾಗಿ, ನಿರಾಳ ಭಾವ ಮೂಡಿ ಹಾಯ್‌ ಎನಿಸಿತು.

ಬಸವನ ಸ್ತಂಭದ ಬಳಿ ನಿಂತು ನೋಡಿದರೆ ಹಿಮದಂತೆ ಮಂಜಿನ ಅಲೆಗಳು ತೇಲಿ ಬರುವಾಗ ಬೆಟ್ಟದ ಫಾಸಲೆ, ಸಹಸ್ರಾರು ಅಡಿಗಳಷ್ಟು ತಗ್ಗಿನಲ್ಲಿರುವ ಹಳ್ಳಿಗಳು, ತೋಟ–ತುಡಿಕೆಗಳು ಸಂಪೂರ್ಣ ಕಣ್ಮರೆಯಾಗುತ್ತಿದ್ದವು. ಕೆಲವೇ ನಿಮಿಷಗಳಲ್ಲಿ ಮಂಜು ಕರಗಿ ಹೋಗುತ್ತಿತ್ತು. ಆಗ ಮತ್ತೆ ಎಲ್ಲವೂ ಬಟಾ ಬಯಲು. ಮೇಲಿಂದ ಮೇಲೆ ನಡೆಯುತ್ತಿದ್ದ ಪ್ರಕೃತಿಯ ಈ ಮೋಜಿನಾಟ ವಿಸ್ಮಯದ ಜತೆಗೆ ಆಹ್ಲಾದವನ್ನೂ ಉಂಟುಮಾಡಿತು.

ಹಸಿರು ಮುಕ್ಕಳಿಸುವ ವನಸಿರಿ, ಹತ್ತಾರು ಮೈಲಿ ದೂರದವರೆಗೂ ಕಾಣುವ ಹಳ್ಳಿಗಳು, ಯಾರೋ ಕಡೆದಿಟ್ಟಂತೆ ಕಾಣುವ ಬೆಟ್ಟ–ಗುಡ್ಡಗಳು, ಕೆರೆ–ಕುಂಟೆಗಳು, ಮೇಲೆ ತಿಳಿನೀಲಿ ಆಗಸವನ್ನು ದಿಟ್ಟಿಸಿದಾಗ ಏನೋ ಅವ್ಯಕ್ತ ಆನಂದ. ಅರ್ಧ ತಾಸಿಗೂ ಹೆಚ್ಚು ಅಲ್ಲಿಯೇ ಸೆಲ್ಫಿ, ಗ್ರೂಪ್‌ ಫೋಟೊ, ವಿಡಿಯೋ ಮಾಡಿಕೊಂಡು ಕಣ್ಣತೆಯ ದೂರದಲ್ಲಿ ಕಾಣುತ್ತಿದ್ದ ದೇಗುಲದತ್ತ ಹೆಜ್ಜೆ ಹಾಕಿದೆವು.

ಸಿಡಿಲು ಮಲ್ಲಿಕಾರ್ಜುನ ದೇಗುಲದ ಪಾರ್ಶ್ವ ನೋಟ

ಚೋಳ–ಹೊಯ್ಸಳ ಶೈಲಿಯ ಸಂಗಮ

ಬೆಟ್ಟದ ತುತ್ತತುದಿಯಲ್ಲಿ, ಸಮತಟ್ಟಾದ ಜಾಗದಲ್ಲಿರುವ ಮಲ್ಲಿಕಾರ್ಜುನ ದೇವಾಲಯ ತಲುಪಿದಾಗ ನಿಜಕ್ಕೂ 3,108 ಮೆಟ್ಟಿಲುಗಳನ್ನು ಏರಿ ಬಂದಿದ್ದೇವೆಯೆ ಎಂಬ ಪ್ರಶ್ನೆ ಮೂಡಿದ್ದು ದಿಟ. ಭಾಗಶಃ ಶಿಥಿಲಾವಸ್ಥೆ ತಲುಪಿರುವ ಚೋಳರ ಕಾಲದ ಈ ದೇಗುಲದಲ್ಲಿ ಹೊಯ್ಸಳ ಶೈಲಿಯ ಛಾಪುಗಳೂ ಇವೆ. ಶೇಕಡ 90 ಭಾಗ ಕಲ್ಲಿನಿಂದಲೇ ನಿರ್ಮಾಣವಾಗಿರುವ 12ನೇ ಶತಮಾನದ ಈ ದೇಗುಲವನ್ನು ‘ಚೋಳ– ಹೊಯ್ಸಳ ಶೈಲಿಯ ಶಿಲ್ಪಾಗಾರ’ ಎಂದೇ ಕರೆಯಲಾಗುತ್ತದೆ. ದೇಗುಲದ ಶಿಲಾಸ್ತಂಭಗಳು, ಗರ್ಭಗುಡಿ, ಶುಕನಾಸಿ, ನವರಂಗ ಚೋಳ ಶೈಲಿಯಲ್ಲಿವೆ. ಬಾಗಿಲುವಾಡ ಮತ್ತು ಗೋಪುರದಲ್ಲಿ ಹೊಯ್ಸಳ ಶೈಲಿಯ ಲಕ್ಷಣಗಳು ಗೋಚರಿಸುತ್ತವೆ. ಬೆಟ್ಟಕ್ಕೆ ಏರುವ ಪ್ರವೇಶ ದ್ವಾರದಲ್ಲಿ ವಿಜಯನಗರ ಶೈಲಿಯ ಆಕರ್ಷಕ ಗೋಪುರವಿದೆ. ಮೂರು ಅಂತಸ್ತಿನ ಈ ಗೋಪುರದಲ್ಲಿ ಋಷಿಗಳು ಮತ್ತು ಹೂಗಳ ರಚನೆಗಳಿವೆ.

ಶಾಸನ:ದೇವಾಲಯದ ಗೋಡೆಯ ಮೇಲಿರುವ ಕ್ರಿ.ಶ.1586ರ ಶಾಸನವು ಪಿರಿಯ ಚೆಂಗಾಳ್ವ ಎಂಬ ದೊರೆ 33 ಗ್ರಾಮಗಳ ಹುಟ್ಟುವಳಿಯನ್ನು ಮಲ್ಲಿಕಾರ್ಜುನ ದೇವರ ಸೇವೆಗೆಂದು ದತ್ತಿ ಬಿಟ್ಟ ಸಂಗತಿಯನ್ನು ತಿಳಿಸುತ್ತದೆ. ಇದೇ ಗುಡಿಯ ಮತ್ತೊಂದು ಶಾಸನದಲ್ಲಿ ಸೋಸಲೆಯ ಮಹಾಪ್ರಭು ದೇವರ ಪೂಜೆಗೆ ದಾನ ನೀಡಿರುವ ವಿವರಗಳಿವೆ. ಚಿತ್ರಗಲ್ಲುಗಳು, ಉಬ್ಬು ಶಿಲ್ಪಗಳು ಸಾಕಷ್ಟಿವೆ.

ದಂತ ಕಥೆ

ಒಂದಾನೊಂದು ಕಾಲದಲ್ಲಿ ಮಲ್ಲಿಕಾರ್ಜುನ ದೇವಾಲಯಕ್ಕೆ ಸಿಡಿಲು ಬಡಿದು ಶಿವಲಿಂಗದ ನೆತ್ತಿಯ ಮೇಲೆ ತಗ್ಗು ಸೃಷ್ಟಿಯಾಯಿತು. ಆ ಕಾರಣಕ್ಕೆ ಇಲ್ಲಿನ ಶಿವಲಿಂಗವನ್ನು ಸಿಡಿಲು ಮಲ್ಲಿಕಾರ್ಜುನ ಎಂದು ಕರೆಯುತ್ತಾರೆ.

ಬೆಟ್ಟದ ಪಕ್ಕದ ಊರಿನ ಹಸುವೊಂದು ರಾತ್ರಿ ವೇಳೆ ಬೆಟ್ಟವನ್ನೇರಿ ಶಿವಲಿಂಗಕ್ಕೆ ಹಾಲುಣಿಸಿ ಬರುತ್ತಿತ್ತು. ಇದನ್ನು ಕಂಡ ಹಸುವಿನ ಒಡತಿ ಶಿವಲಿಂಗದ ಮೇಲೆ ಗುಡಿಯನ್ನು ಕಟ್ಟಿಸಿದಳು ಎಂಬ ಪುರಾಣ ಕಥೆಯೂ ಚಾಲ್ತಿಯಲ್ಲಿದೆ. ‘ಸಿಡಿಲು ಮಲ್ಲಿಕಾರ್ಜುನ ದೇವರನ್ನು ‘ಅನ್ನದಾನಿ ಮಲ್ಲಿಕಾರ್ಜುನ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ’ ಎಂದು ಬೆಟ್ಟದಪುರ ಗ್ರಾಮದ ಹಿರೀಕ ಚನ್ನಪ್ಪ ಹೇಳುತ್ತಾರೆ. ದೀಪಾವಳಿಯಲ್ಲಿ ನೂರಾರು ಭಕ್ತರು ಈ ಬೆಟ್ಟವನ್ನು ಹತ್ತಿ ಮಲ್ಲಿ ಕಾರ್ಜುನಸ್ವಾಮಿಗೆ ಪಂಜಿನ ಸೇವೆ ಸೇರಿದಂತೆ ಇತರೆ ಸಾಂಪ್ರದಾಯಿಕ ಪೂಜೆ ಸಲ್ಲಿಸುತ್ತಾರೆ.

ಎಲ್ಲಿದೆ ಈ ಬೆಟ್ಟ?

ಮೂರು ತಾಸಿನಲ್ಲಿ ಹತ್ತಿ ಇಳಿಯಬಹುದಾದ ಸಿಡಿಲು ಮಲ್ಲಿಕಾರ್ಜುನ ಬೆಟ್ಟ ಮೈಸೂರಿನಿಂದ 80 ಕಿ.ಮೀ.ಹಾಗೂ ಪಿರಿಯಾಪಟ್ಟಣದಿಂದ 16 ಕಿ.ಮೀ ದೂರದಲ್ಲಿದೆ. ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯ ಸುಪರ್ದಿಯಲ್ಲಿರುವ ಈ ಪ್ರಾಕೃತಿಕ ಸೊಬಗಿನ ತಾಣ ಚಾರಣಕ್ಕೆ ಹೇಳಿ ಮಾಡಿಸಿದಂತಿದೆ. ಮಡಿಕೇರಿ, ಕೇರಳ, ಬೇಲೂರು– ಹಳೇಬೀಡು ಪ್ರವಾಸ ಮಾಡುವವರು ತಮ್ಮ ಪಟ್ಟಿಯಲ್ಲಿ ಈ ಸ್ಥಳವನ್ನೂ ಸೇರಿಸಿಕೊಳ್ಳಬಹುದು. ಅಂದಹಾಗೆ ಈ ಬೆಟ್ಟಕ್ಕೆ ಚಾರಣ ಮಾಡಲು ಮುಂಜಾನೆಯ ಸಮಯ ಹೆಚ್ಚು ಸೂಕ್ತ.

ಚಿತ್ರ–ಬರಹ: ಗಣಂಗೂರು ನಂಜೇಗೌಡ

ಈ ಬೆಟ್ಟದ ತುತ್ತ ತುದಿಯವರೆಗೆ 3108 ಮೆಟ್ಟಿಲುಗಳಿವೆ...
ದೇಗುಲದ ಗೋಡೆಯಲ್ಲಿರುವ ಚಿತ್ರಗಲ್ಲಿನಲ್ಲಿ ಶಿವಲಿಂಗಕ್ಕೆ ಹಾಲುಣಿಸುತ್ತಿರುವ ಗೋವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.