ADVERTISEMENT

ಅಟ್ಟಕ್ಕಲರಿ ಮಾಯಾಲೋಕ...

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 19:30 IST
Last Updated 21 ಫೆಬ್ರುವರಿ 2011, 19:30 IST

ಸುತ್ತಲು ಆವರಿಸಿದ್ದ ಕತ್ತಲೆ, ಕಡುಮೌನ. ವೇದಿಕೆಯ ಅಂಚಿನಲ್ಲಿ ಒಮ್ಮೆಲೇ ಕಾಣಿಸಿಕೊಂಡ ಬೆಳಕಿನ ಬಿಂಬ. ವಾಸ್ತವವೋ, ಮಾಯೆಯೋ ಎಂದು ತಿಳಿಯದ ಭಾವ. ಒಮ್ಮೊಮ್ಮೆ ಮುದುಡಿದ ಮನುಷ್ಯನಂತೆ, ಮತ್ತೊಮ್ಮೆ ಆಕಾಶಕ್ಕೆ ಮುಖ ಮಾಡಿ ನಿಂತ ಮನುಷ್ಯನಂತೆ, ಮಗುದೊಮ್ಮೆ ಹಾವಿನಂತೆ ತೆವಳುತ್ತ ವೇದಿಕೆಯ ಮೇಲೆ, ಪರದೆಯ ಮೇಲೆ ಚಲಿಸುತ್ತ ಸಾಗಿದ ಬಿಂಬ.

ಬಿಂಬದ ಬೆನ್ನಲ್ಲೇ ವೇದಿಕೆಯಲ್ಲಿ ಪ್ರತ್ಯಕ್ಷರಾದ ಕಲಾವಿದರು. ಜಿಮ್ನಾಸ್ಟಿಕ್ ಸ್ಪರ್ಧಿಗಳಂತೆ, ಸರ್ಕಸ್ ವೇಷಧಾರಿಗಳಂತೆ ಬಣ್ಣ, ಬಣ್ಣದ ವಸ್ತ್ರತೊಟ್ಟು ವೇದಿಕೆಯ ಮೇಲೆ ಕೈ,ಕಾಲು ಚಾಚಿದರು. ಸಹಕಲಾವಿದರನ್ನು ಅನಾಮತ್ತಾಗಿ ಎತ್ತಿ ಹಾಕಿದರು. ಹಿನ್ನೆಲೆ ಸಂಗೀತಕ್ಕೆ ಸರಿಯಾಗಿ ನರ್ತಿಸುತ್ತ ನಡೆದರು.

ಅಟ್ಟಕ್ಕಲರಿ ದೈವಾರ್ಷಿಕ ಸಮಕಾಲೀನ ನೃತ್ಯ ಉತ್ಸವದ ಅಂಗವಾಗಿ ಫೆ. 3ರಂದು ‘ರಂಗಶಂಕರ’ದಲ್ಲಿ ಅಟ್ಟಕ್ಕಲರಿ ಸಂಸ್ಥೆ ಮತ್ತು ದಕ್ಷಿಣ ಕೊರಿಯಾದ ಕಕಡೊ ಡಾನ್ಸ್ ಥಿಯೇಟರ್ ಪ್ರದರ್ಶಿಸಿದ್ದ ‘ಟ್ರೇಸಸ್’ ಸಮಕಾಲೀನ ನೃತ್ಯರೂಪಕದ ದೃಶ್ಯವಿದು. ಭಾರತ ಮತ್ತು ಕೊರಿಯಾದ ತಲಾ ಮೂವರು ಕಲಾವಿದರು ಆ ದಿನ ರಂಗದ ಮೇಲೆ ಮಾಯಾಲೋಕ ಸೃಷ್ಟಿಸಿದರು. ಹುಟ್ಟು, ಸಾವು, ನೋವು, ನಲಿವು, ಸ್ಮಶಾನ ವೈರಾಗ್ಯ, ಬದುಕಿನ ಕ್ಷಣಭಂಗುರತೆ, ಹೆಣ್ಣು-ಗಂಡಿನ ಪ್ರೀತಿ, ತಾಯಿ- ಮಗುವಿನ ಪ್ರೀತಿಯನ್ನು ಮುಖಭಾವ, ಆಂಗಿಕ ಚಲನೆಯಿಂದಲೇ ಅಭಿನಯಿಸಿ ತೋರಿಸಿದರು.

ಮೂಕಾಭಿನಯಕ್ಕೆ ತಕ್ಕ ಹಿನ್ನೆಲೆ ಸಂಗೀತ ಮತ್ತು ನೆರಳು, ಬೆಳಕಿನ ವಿನ್ಯಾಸ ಪ್ರದರ್ಶನ ಮತ್ತಷ್ಟು ಕಳೆಕಟ್ಟುವಂತೆ ಮಾಡಿತು. ಕಾಲ (ಟೈಮ್) ಎಂಬುದು ಯಾವಾಗಲೂ ಇತ್ತು. ಮುಂದೆಯೂ ಇರುತ್ತದೆ ಎಂಬ ಹಿಂದು ಮತ್ತು ಬೌದ್ಧ ಧರ್ಮದ ತತ್ವಜ್ಞಾನವನ್ನು ಆಧರಿಸಿ ಈ ನೃತ್ಯರೂಪಕ ಸಂಯೋಜಿಸಲಾಗಿತ್ತು. ಕಕಡೊ ಡಾನ್ಸ್ ಥಿಯೇಟರ್‌ನ ಹಾಬಿನ್ ಪಾರ್ಕ್ ಮತ್ತು ಅಟ್ಟಕ್ಕಲರಿಯ ಜಯಚಂದ್ರನ್ ಪಳಜಿ ನೃತ್ಯ ಸಂಯೋಜನೆ ಮಾಡಿದ್ದರು.

ರಂಗಶಂಕರ, ಚೌಡಯ್ಯ ಸ್ಮಾರಕ ಸಂಸ್ಥೆ, ಅಲೆಯನ್ಸ್ ಫ್ರಾನ್ಸೆ ಮತ್ತು ರಾಷ್ಟ್ರೀಯ ನವ್ಯ ಕಲಾ ಗ್ಯಾಲರಿಯಲ್ಲಿ ಜನವರಿ 28ರಿಂದ ಫೆಬ್ರುವರಿ 6ರವರೆಗೆ ನಡೆದ ಈ ಅಂತರ್‌ರಾಷ್ಟ್ರೀಯ ನೃತ್ಯ ಉತ್ಸವದಲ್ಲಿ ದೇಶ, ವಿದೇಶದ 125 ಕಲಾವಿದರು 23ಕ್ಕೂ ಹೆಚ್ಚು ಪ್ರದರ್ಶನ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.