ADVERTISEMENT

ಅವಲಕ್ಕಿ ತಿಂದರೆ ತೂಕ ಇಳಿಕೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST
ಅವಲಕ್ಕಿ
ಅವಲಕ್ಕಿ   

ತೂಕ ಕಳೆದುಕೊಂಡು ಫಿಟ್‌ ಆಗಿ ಇರಲು ಬಯಸುತ್ತಿದ್ದೀರಿ, ಆರೋಗ್ಯಕರ ಡಯೆಟ್‌ ಪಾಲನೆ ಮಾಡಬೇಕು ಎಂದು ಬಯಸುವವರು ಬೆಳಗಿನ ತಿಂಡಿಗೆ ಅವಲಕ್ಕಿ ತಿನ್ನುವುದನ್ನು ರೂಢಿ ಮಾಡಿಕೊಂಡರಾಯಿತು. ಅವಲಕ್ಕಿಯು ಕಾರ್ಬೋಹೈಡ್ರೇಟ್‌ಗಳ ಆಗರ. ಇದರಲ್ಲಿ ಕಬ್ಬಿಣದ ಅಂಶ, ಫೈಬರ್‌, ಆ್ಯಂಟಿ ಆಕ್ಸಿಡೆಂಟ್‌ ಹಾಗೂ ದೇಹಕ್ಕೆ ಬೇಕಾದ ಅಗತ್ಯ ವಿಟಮಿನ್‌ಗಳು ಹೇರಳವಾಗಿವೆ.

ತಮಿಳಿನಲ್ಲಿ ಅವಲ್‌, ಕನ್ನಡದಲ್ಲಿ ಅವಲಕ್ಕಿ, ಭೋಜಪುರಿ ಭಾಷೆಯಲ್ಲಿ ಚಿವುರಾ, ಒರಿಯಾದಲ್ಲಿ ಚೂಡ ಎಂದು ಕರೆಯಲ್ಪಡುವ ಅವಲಕ್ಕಿಯು ಬೆಳಗಿನ ಉಪಾಹಾರದ ಜನಪ್ರಿಯ ತಿಂಡಿ. ಉತ್ತರ ಪ್ರದೇಶದಲ್ಲಿ ಅವಲಕ್ಕಿಯನ್ನು ಖಾರ ಮಿಕ್ಸರ್‌ ಜಿಲೇಬಿ ಜೊತೆ ತಿನ್ನುತ್ತಾರೆ. ಮಹಾರಾಷ್ಟ್ರದಲ್ಲಿ ಗ್ರೀನ್‌ ಚಟ್ನಿ ಹಾಗೂ ಮೇಲೆ ಸೇವ್‌ನಿಂದ ಅಲಂಕರಿಸಿ ತಿನ್ನುತ್ತಾರೆ. ಇನ್ನು ಕೆಲವೆಡೆ ಅವಲಕ್ಕಿಯಿಂದ ಕಟ್ಲೆಟ್‌ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಅವಲಕ್ಕಿಯೊಟ್ಟಿಗೆ ಮಿಸಳ್‌ ಪಾವ್‌ ಸಹ ತಿನ್ನುತ್ತಾರೆ.

ಇಂತಹ ಅವಲಕ್ಕಿಯು ಅತ್ಯುತ್ತಮ ಡಯೆಟ್‌ ಆಹಾರ. ಸುಲಭವಾಗಿ ಜೀರ್ಣವಾಗುವ ಅವಲಕ್ಕಿಯು ದೇಹಕ್ಕೆ ಆರೋಗ್ಯಕರ. ಇದರ ಬೆಲೆಯೂ ಕಡಿಮೆಯಿರುವುದರಿಂದ ಸುಲಭವಾಗಿ ಇದನ್ನು ಖರೀದಿಸಬಹುದಾಗಿದೆ.

ADVERTISEMENT

ಇಂತಹ ಅವಲಕ್ಕಿಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಯಿದೆ. ಇದರಲ್ಲಿ ಶೇಕಡ 76ರಷ್ಟು ಕಾರ್ಬೋ ಹೈಡ್ರೇಟ್‌,  ಶೇಕಡ 23ರಷ್ಟು ಕೊಬ್ಬು ಇರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಆಹಾರ. ಇದರಲ್ಲಿ ಫೈಬರ್‌ ಹೇರಳವಾಗಿರುವುದರಿಂದ ಹೆಚ್ಚು ಹೊತ್ತು ಹಸಿವಾಗುವುದೇ ಇಲ್ಲ. ಅತಿ ತಿನ್ನುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ಅವಲಕ್ಕಿಯಲ್ಲಿ ಪ್ರಯೋಗ ಮಾಡಿ ಕೊಂಡು ವಿವಿಧ ರೀತಿಗಳಲ್ಲಿ ಟೇಸ್ಟಿ ಹಾಗೂ ಆರೋಗ್ಯಕರವಾಗಿ ಮಾಡಿಕೊಂಡು ತಿನ್ನಬಹುದು. ಪ್ರತಿದಿನ ರುಚಿರುಚಿಯಾಗಿ ಉಪಾಹಾರ ಸೇವಿಸ ಬಹುದು. ಆಗ ಡಯೆಟ್‌ ಕೂಡ ಇಷ್ಟವಾಗುತ್ತದೆ. ಇದಲ್ಲದೇ ಓಟ್ಸ್‌, ಕ್ವಿನೋವಾ ಹಾಗೂ ಬೇರೆ ಬೇರೆ ಧಾನ್ಯಗಳನ್ನು ಬಳಸಿಕೊಂಡು ಅವಲಕ್ಕಿಯನ್ನು ತಿನ್ನಬಹುದು. ‌ಪ್ರೋಟೀನ್‌ ಹೆಚ್ಚು ಬೇಕು ಎನ್ನುವವರು ಅವಲಕ್ಕಿಗೆ ಮೊಳಕೆ ಕಾಳು ಹಾಗೂ ಶೇಂಗಾ ಸೇರಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.

ಮಧುಮೇಹ, ಚರ್ಮ ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅವಲಕ್ಕಿ ಸೇವನೆ ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.