ADVERTISEMENT

ಐಆಮ್ ಜೂಹಿ

ಇ.ಎಸ್.ಸುಧೀಂದ್ರ ಪ್ರಸಾದ್
Published 2 ಮೇ 2011, 19:30 IST
Last Updated 2 ಮೇ 2011, 19:30 IST

ಲಿಂಬೇ ಹಣ್ಣಿನಂಥ ಹುಡುಗಿಯೊಬ್ಬರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಆಕೆ ಬೇರಾರೂ ಅಲ್ಲ... 23 ವರ್ಷಗಳ ಹಿಂದೆ ತಮ್ಮ ತುಂಟಾಟದಿಂದ ಬೆಂಗಳೂರೇ ಮಾತ್ರವಲ್ಲದೆ ಇಡೀ ಕರ್ನಾಟಕದ ಹುಡುಗರಿಗೆ ‘ಪ್ರೇಮಲೋಕ’ ತೋರಿಸಿದ್ದ, ‘ಈ ಲಿಂಬೇ ಹಣ್ಣಿನಂಥ ಹುಡುಗಿ ಬಂದ್ಲು ನೋಡು’ ಎಂದು ಪಡ್ಡೆಗಳಿಗೆ ಹುಚ್ಚು ಹಿಡಿಸಿದ್ದ ಜೂಹಿ ಚಾವ್ಲಾ.

ಮೊನ್ನೆ ಬಂದಾಗ ಮುಖದ ತುಂಬಾ ನಗೆ ತುಂಬಿಕೊಂಡಿದ್ದರು. ಅಂಜಿಕೆ ಹೆಚ್ಚಾಗಿತ್ತು.ನಡಿಗೆ ನಿಧಾನವಾಗಿತ್ತು. ಆದರೂ ಪಟಪಟನೆ ಮಾತು. ತಮ್ಮಷ್ಟಕ್ಕೇ ತಾವು ಹಾಡು ಗುನುಗುತ್ತಾ ಲವಲವಿಕೆಯಿಂದಿದ್ದರು. ಆದರೆ ‘ಲಿಂಬೇ ಹಣ್ಣಿನಂಥ ಹುಡುಗಿ ಬಂದ್ಲು ನೋಡು...’ ಎನ್ನಲೂ ಅಲ್ಲಿ ಯಾವ ಪಡ್ಡೆಗಳೂ ಇರಲಿಲ್ಲ. ಏಕೆಂದರೆ ಕಾಲವೂ ಬದಲಾಗಿತ್ತು.

ಅದು ಪಕ್ಕಾ ಕಾರ್ಪೊರೇಟ್ ಕಾಫಿ ಅಡ್ಡಾ. ಇಂದಿನ ಯುವ ಜನಾಂಗ ಹೆಚ್ಚಾಗಿ ಕಾಲ ಕಳೆಯುವ ಈ ತಾಣವನ್ನೇ ಜೂಹಿ ಆರಿಸಿಕೊಳ್ಳಲು ಕಾರಣವಿತ್ತು. ಜೂಹಿ ಚಾವ್ಲಾ, ಸಂಜಯ ಸೂರಿ ಹಾಗೂ ಇತರರು ಸೇರಿ ‘ಐಆಮ್’ ಎಂಬ ಚಿತ್ರ ನಿರ್ಮಿಸಿದ್ದಾರೆ.

ಚಿತ್ರದ ಪ್ರಚಾರ ಒಂದೆಡೆಯಾದರೆ ಕೋರಮಂಗಲದ ಈ ಕೋಸ್ಟಾ ಕಾಫಿ ಶಾಪ್ ಬೇಸಿಗೆಗಾಗಿ 21 ತಂಪು ಪಾನೀಯಗಳನ್ನು ಪರಿಚಯಿಸುತ್ತಿದೆ. ಇದನ್ನು ಬಿಡುಗಡೆ ಮಾಡುವುದೂ ಸಹ ಅವರ ಒಂದು ಉದ್ದೇಶವಾಗಿತ್ತು. ಕೋಸ್ಟಾ ಕಾಫಿಯ ಬೇಸಿಗೆ ಸಂಗ್ರಹದಲ್ಲಿ ಐಸ್ ಕಾಫಿ, ಫ್ರೂಟ್ ಕೋಲರ್ಸ್, ಕ್ರೀಮಿ ಕೂಲರ್ಸ್, ಕಾಫಿ ಕೂಲರ್ಸ್, ಐಸ್ ಟೀ ಇತ್ಯಾದಿಗಳಿದ್ದವು.

ಬರುತ್ತಲೇ ನಗು ಮೊಗವ ಬೀರಿ ಕೋಸ್ಟಾ ಕಾಫಿ ಒಳಗೆ ಕಾಲಿಟ್ಟ ಜೂಹಿ ಆಸೀನರಾದರು.ಅವರೊಡನಿದ್ದ ನಟ ಹಾಗೂ ಹಾಲಿ ನಿರ್ಮಾಪಕ ಸಂಜಯ್ ಸೂರಿ, ನಟನಿಗಿಂಥ ಹೆಚ್ಚಾಗಿ ನಿರ್ಮಾಪಕರ ಮೂಡ್‌ನಲ್ಲಿದ್ದರು. ತಮ್ಮ ಚಿತ್ರ ‘ಐಆಮ್’ನ ಪ್ರಚಾರಕ್ಕಾಗಿ ನಡೆಸಿದ್ದ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡುವುದು ಅವರ ಮೊದಲ ಕಾರ್ಯಕ್ರಮವಾಗಿತ್ತು. ಅದರಂತೆ ಕಾಫಿ ಕಪ್‌ನಲ್ಲಿದ್ದ ವಿಜೇತರ ಹೆಸರೊಂದಿಗೆ ಅವರು ನೀಡಿದ ಉತ್ತರಗಳೂ ಇದ್ದವು.

ಕೇಳಿದ ಪ್ರಶ್ನೆ ಹಾಗೂ ಬರೆದ ಉತ್ತರ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿತು. ‘ಚಿತ್ರದಲ್ಲಿ ಉಮರ್ ಖಯಾಮ್ ಪಾತ್ರವನ್ನು ಯಾರು ನಿರ್ವಹಿಸಿದ್ದಾರೆ?’ ಎಂಬ ಪ್ರಶ್ನೆಗೆ ‘ಓಮರ್ ಅಬ್ದುಲ್ಲಾ’ ಎಂಬ ಉತ್ತರ ಪ್ರತಿಯೊಬ್ಬರಲ್ಲೂ ನಗೆ ಉಕ್ಕಿಸಿತು. ಆ ಸಂದರ್ಭದಲ್ಲೇ ನಟ ಸಂಜಯ್ ಸೂರಿ ಹಾಗೂ ಹಾಗೂ ಜಮ್ಮು ಕಾಶ್ಮೀರದ ಹಾಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಶಾಲೆಯಲ್ಲಿ ಸಹಪಾಠಿಗಳು ಎಂಬ ಸತ್ಯವನ್ನು ಜೂಹಿ ಹೊರಹಾಕಿದರು.

ವಿಜೇತರ ಹೆಸರನ್ನು ಘೋಷಿಸಿದ ನಂತರ ಅವರಿಗೆ ನೂತನ ಬೇಸಿಗೆ ಸಂಗ್ರಹ ಕಾಫಿ ನೀಡುವುದು ಮಾತ್ರವಲ್ಲ ಅದನ್ನು ತಯಾರಿಸುವ ಜವಾಬ್ದಾರಿಯೂ ಜೂಹಿ ಹಾಗೂ ಸಂಜಯ್ ಮೇಲೆ ಬಿತ್ತು. ಇದು ಘೋಷಣೆಯಾಗುತ್ತಿದ್ದಂತೆ ಇಬ್ಬರೂ ಎಂದೂ ಕಾಫಿ ಯನ್ನೇ ತಯಾರಿಸದವರು ಮಾಡುವಂತೆ ‘ಊಂ ನಾನೇ’ ಎಂದು ಪ್ರತಿಕ್ರಿಯಿಸಿದರು.ಆದರೂ ಕೋಸ್ಟಾ ಕಾಫಿ ಕ್ಯಾಪ್ ಧರಿಸಿ ಕಾಫಿ ಮೇಕರ್ ಬಳಿ ನಿಂತರು. ಅಲ್ಲಿನ ಸಿಬ್ಬಂದಿ ಕಾಫಿ ತಯಾರಿಕೆಯಲ್ಲಿ ತಾರೆಯರಿಬ್ಬರಿಗೆ ಸಹಕರಿಸಿದರು.

ಸಾಮಾಜಿಕ ತಾಣದಿಂದ ಚಂದಾ:  ನಂತರ ಮಾತಿಗಿಳಿದ ಇಬ್ಬರು ತಮ್ಮ ಚಿತ್ರ ‘ಐಆಮ್’ ಕುರಿತು ಸ್ವಲ್ಪ ಹರಟಿದರು. ಮುಖ್ಯವಾಗಿ ಈ ಚಿತ್ರ ಭಾರತದಲ್ಲೇ ನಾನೂರು ಸಹ ನಿರ್ಮಾಪಕರನ್ನು ಹೊಂದಿದ ಪ್ರಥಮ ಚಿತ್ರವಂತೆ.

ಉತ್ತಮ ಚಿತ್ರ ನೀಡಬೇಕೆಂಬ ಮಹದಾಸೆಯಿಂದ ಚಿತ್ರ ನಿರ್ಮಾಣಕ್ಕೆ ಕೈಹಾಕಿದ ಸಂಜಯ್ ಸೂರಿಗೆ ಆರ್ಥಿಕ ಮುಗ್ಗಟ್ಟು ಎದುರಾಯಿತಂತೆ. ಆಗ ಅವರು ಕದ ತಟ್ಟಿದ್ದು ಜೂಹಿ ಚಾವ್ಲಾ ಮನೆ ಬಾಗಿಲನ್ನು. ಜೂಹಿ ಮರು ಮಾತಿಲ್ಲದೆ ಹಣ ಹೂಡಲು ಒಪ್ಪಿಕೊಂಡರಂತೆ. ಅದಕ್ಕೆ ಅವರಿಗೆ ಸಿಕ್ಕಿದ್ದು ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಒಂದು ಪಾತ್ರ.

ಆದರೂ ಚಿತ್ರ ನಿರ್ಮಾಣವೆಂದರೆ ಖರ್ಚುಗಳ ಮೇಲೆ ಖರ್ಚು. ಹೀಗಾಗಿ ಸಂಜಯ್ ತಮ್ಮ ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿರುವ ಸ್ನೇಹಿತರ ಮೂಲಕ ಹಣ ಕೇಳಲು ನಿರ್ಧರಿಸಿದರು. ಅವರ ಈ ಪ್ರಯತ್ನ ಯಶಸ್ವಿಯಾಯಿತು. 45 ನಗರಗಳ ಸುಮಾರು ನಾನೂರು ಆಸುಪಾಸಿನಷ್ಟು ಮಂದಿ ‘ಐಆಮ್’ ಚಿತ್ರಕ್ಕಾಗಿ ಹಣ ಹೂಡಿದ್ದಾರೆ. ಜತೆಗೆ ಈ ಸಾಮಾಜಿಕ ತಾಣದ ಮೂಲಕವೇ ಚಿತ್ರದ ತಂತ್ರಜ್ಞರು ಹಾಗೂ ಕೆಲ ಕಲಾವಿದರನ್ನು ಹುಡುಕಲಾಗಿದೆ.

ಮಾತಿಗಳಿದ ಸಂಜಯ್ ಸೂರಿ ಹೇಳುತ್ತಾ ‘ಇಂಥದೇ ಚಿತ್ರವನ್ನೇ ಮಾಡಬೇಕು ಎನ್ನುವುದು ನನ್ನ ಬಹುದಿನದ ಹಂಬಲ. ಇದಕ್ಕೆ ಬಹುತೇಕ ಪ್ರತಿಯೊಬ್ಬರೂ ಸಹಕರಿಸಿದ್ದಾರೆ. ಭಾರತದ ಎಲ್ಲಾ ಭಾಗಗಳ ನಟ ನಟಿಯರಿಂದ ಪಾತ್ರ ಮಾಡಿಸಲಾಗಿದೆ. ಐಆಮ್‌ನಲ್ಲಿ ಕನ್ನಡದಲ್ಲಿ ಸಾಕಷ್ಟು ಹೆಸರು ಮಾಡಿರುವ ಪೂಜಾ ಗಾಂಧಿ ಕೂಡಾ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವುದು ಒಂದು ವಿಶೇಷ.

ಹಣ ಗಳಿಸುವುದಕ್ಕಿಂತ ಒಂದು ಉತ್ತಮ ಚಿತ್ರ ಮಾಡಬೇಕೆನ್ನುವುದು ನನ್ನ ಹಂಬಲ. ಇಂದು ಚಿತ್ರ ಎನ್ನವುದರ ಅರ್ಥವೇ ಬೇರೆ ಆಗಿದೆ. ಸ್ಟಾರ್‌ಗಳಿಗಾಗಿಯೇ ತೆಗೆದ ಚಿತ್ರ. ಮತ್ತೊಂದು ಉತ್ತಮ ಚಿತ್ರಕಥೆ ಇರುವ ಸಿನಿಮಾ. ಇವುಗಳ ಫಲಿತಾಂಶ ಬಹುಶಃ ನಿಮಗೇ ಗೊತ್ತಿದೆ’ ಎಂದಷ್ಟೇ ಹೇಳಿ ನಕ್ಕರು.

ಮೊನ್ನೆ ಬಿಡುಗಡೆಯಾದ ಈ ಚಿತ್ರ ಏನಾದರೂ ಲಾಭ ಗಳಿಸಿದರೆ ಅದನ್ನು ತಮ್ಮ ನಾನೂರು ಸಹ ನಿರ್ಮಾಪಕರೊಂದಿಗೆ ಹಂಚಿಕೊಳ್ಳುವ ದೊಡ್ಡ ಮನಸ್ಸು ಸಂಜಯ್ ಸೂರಿ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.