ADVERTISEMENT

ಒಂದೇ ಗಂಟೆಗೆ ಸಲ್ವಾರ್ ಹೊಲಿಗೆ

​ಪ್ರಜಾವಾಣಿ ವಾರ್ತೆ
Published 27 ಮೇ 2012, 19:30 IST
Last Updated 27 ಮೇ 2012, 19:30 IST
ಒಂದೇ ಗಂಟೆಗೆ ಸಲ್ವಾರ್ ಹೊಲಿಗೆ
ಒಂದೇ ಗಂಟೆಗೆ ಸಲ್ವಾರ್ ಹೊಲಿಗೆ   

`ಆಯಿಯೇ ಮೇಡಂ... ಕ್ಯಾ ಚಾಹಿಯೇ ಆಪ್ ಕೋ? ಡ್ರೆಸ್ ಮೆಟೀರಿಯಲ್? ಒನ್ ಅವರ್ ಸರ್ವಿಸ್ ಭಿ ಹೈ... ಬನ್ನಿ ಕಡಿಮೆ ರೇಟ್‌ಗೆ ಒಳ್ಳೆ ಬಟ್ಟೆಗಳಿವೆ, ಹೊಸ ಸ್ಟಾಕು. ನೋಡ್ಕೊಂಡು ಹೋಗಿ ಅದಕ್ಕೇನು ದುಡ್ಡು ಕೊಡಬೇಕೇ..?~

-ಶಿವಾಜಿನಗರದ ಮಗ್ಗಲಲ್ಲಿರುವ ಕಮರ್ಷಿಯಲ್ ಸ್ಟ್ರೀಟ್, ಇಬ್ರಾಹಿಂ ಸ್ಟ್ರೀಟ್‌ನುದ್ದಕ್ಕೆ ಹಾಗೇ ಸುಮ್ಮನೆ ಹಾದು ಹೋದರೂ ಹೆಜ್ಜೆಗೊಬ್ಬರಂತೆ ಹೀಗೆ ಕರೆದು ತಡೆಯುತ್ತಾರೆ.

ಆ ಅಂಗಡಿ ಮುಗಿದು ಈ ಅಂಗಡಿ ಶುರುವಾಗೋದೆಲ್ಲಿ ಅಂತ ಮಾಲೀಕರಿಗೇ ಗಲಿಬಿಲಿಯಾಗುವಷ್ಟು ಇಕ್ಕಟ್ಟು. ನೇತು ಹಾಕಿದ ಬಟ್ಟೆಗಳೇ ಅಕ್ಕ-ಪಕ್ಕದ ಅಂಗಡಿಗಳಿಗೆ ಗಡಿರೇಖೆಗಳು! ಆದರೂ ಈ ಕಮರ್ಷಿಯಲ್ ಸ್ಟ್ರೀಟ್ ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಪರಿ ಮಾತ್ರ ಚಕಿತಗೊಳಿಸುತ್ತದೆ.

ADVERTISEMENT

ಈ ಸ್ಟ್ರೀಟ್‌ಗಳ ಬಹುತೇಕ ಬಟ್ಟೆ ಅಂಗಡಿಗಳ ಮುಂದೆ, `ನಮ್ಮಲ್ಲಿ ಒಂದೇ ಗಂಟೆಯಲ್ಲಿ ಸಲ್ವಾರ್, ರವಿಕೆ ಹೊಲಿದುಕೊಡಲಾಗುವುದು~, `ಒನ್ ಅವರ್ ಸ್ಟಿಚಿಂಗ್ ಸರ್ವಿಸ್~ ಎಂಬ ಒಕ್ಕಣೆಯ ಸಾಲುಸಾಲು ಬೋರ್ಡ್‌ಗಳೂ ಹಾದಿಹೋಕರನ್ನು ಹಿಡಿದಿಡುವುದು ಸುಳ್ಳಲ್ಲ.

ಶಾಪಿಂಗ್ ಅಂದಾಕ್ಷಣ ಕಮರ್ಷಿಯಲ್ ಸ್ಟ್ರೀಟ್‌ಗೆ ಗ್ರಾಹಕರು ಮುಗಿಬೀಳುವುದರ ಹಿಂದೆ ಎರಡು ಆಕರ್ಷಣೆಗಳಿವೆ. ಮುಖ್ಯವಾಗಿ, ಅಂಗಡಿಗಳಲ್ಲಿ ಬಟ್ಟೆ ಅಥವಾ ಸಿದ್ಧ ಉಡುಪುಗಳಿಗೆ ವಿಧಿಸಿರುವ ದರವನ್ನು ಚೌಕಾಸಿ ಮಾಡುವ ಅವಕಾಶವಿರುತ್ತದೆ. ಆಚೆ ರಸ್ತೆಯಲ್ಲಿರುವ ಮಳಿಗೆಗಳಲ್ಲಿ ಚೌಕಾಸಿ ಮಾಡುವಂತಿಲ್ಲವಲ್ಲ? ಎರಡನೆಯದಾಗಿ, ಖರೀದಿಸಿದ ಅಂಗಡಿಯಲ್ಲೇ ಹೊಲಿಗೆಗೆ ಕೊಟ್ಟೋ/ ಫಿಟಿಂಗ್ ಸರಿಮಾಡಿಸಿಕೊಂಡೋ (ಆಲ್ಟ್ರೇಶನ್) ಒಂದೇ ಗಂಟೆಯಲ್ಲಿ ಸಿದ್ಧವಾದ ಉಡುಪು ಪಡೆಯಬಹುದು.

ಇಬ್ರಾಹಿಂ ಸ್ಟ್ರೀಟ್‌ನ `ಡ್ರೆಸ್ ವರ್ಲ್ಡ್~ನ ಮಾಲೀಕ ಅಜ್ಮಲ್ ಅಹ್ಮದ್ ಹೇಳುತ್ತಾರೆ- `ಒನ್ ಅವರ್ ಸರ್ವಿಸ್~ 15 ವರ್ಷಕ್ಕೂ ಹಿಂದೆಯೇ ಶುರುವಾಗಿದ್ದರೂ ಇತ್ತೀಚಿನ ಕೆಲವರ್ಷಗಳಲ್ಲಿ ಬೇಡಿಕೆ ಗಣನೀಯವಾಗಿ ಹೆಚ್ಚಿದೆ. ಇದಕ್ಕಾಗಿ ನಾವೂ ನಮ್ಮಲ್ಲೇ ಟೈಲರ್‌ಗಳನ್ನು ನೇಮಿಸಿಕೊಂಡಿದ್ದೇವೆ. ನಮ್ಮ ಮಾಸ್ಟರ್ ಟೈಲರ್ ದಿನಕ್ಕೆ ಕನಿಷ್ಠ 40 ಸಲ್ವಾರ್ ಕಟಿಂಗ್ ಮಾಡುತ್ತಾರೆ. ಮೂವರು ಟೈಲರ್‌ಗಳಿದ್ದಾರೆ. ಟ್ರಯಲ್ ರೂಮ್ ಕೂಡ ಇದೆ. ವಾರಾಂತ್ಯದಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚು~.

ಇಬ್ರಾಹಿಂ ಸ್ಟ್ರೀಟ್‌ನ ಅಂಗಡಿಗಳಲ್ಲಿ ಸಾದಾ ಸಲ್ವಾರ್‌ಗೆ 150 ರೂಪಾಯಿ, ಗ್ರಾಹಕರೇ ಲೈನಿಂಗ್ ಬಟ್ಟೆ ಒದಗಿಸಿದರೆ 200 ರೂಪಾಯಿ, ಅಂಗಡಿಯವರೇ ಲೈನಿಂಗ್ ಹೊಂದಿಸಿಕೊಂಡು ಹೊಲಿದುಕೊಟ್ಟರೆ 250 ರೂಪಾಯಿ ದರವಿದೆ. ಸೀರೆಯ ರವಿಕೆಗೂ ಇದೇ ದರ ಅನ್ವಯವಾಗುತ್ತದೆ. ಕೆಲವು ಅಂಗಡಿಗಳಲ್ಲಿ ಈ ದರದಲ್ಲಿ 25 ರೂಪಾಯಿ ವ್ಯತ್ಯಯವಾಗುವುದೂ ಇದೆ. ಬೆರಳೆಣಿಕೆಯ ಅಂಗಡಿಗಳವರು ಈಗಲೂ ಕೇವಲ 100 ರೂಪಾಯಿಗೆ ಸಲ್ವಾರ್ ಹೊಲಿದುಕೊಡುತ್ತಾರೆ. ಗ್ರಾಹಕರನ್ನು ಆಕರ್ಷಿಸುವ ತಂತ್ರವಿದು.

ಟೈಲರಿಂಗ್ ಹಾಲ್

ಸಾಹಿಬ್ ಸ್ಟ್ರೀಟ್‌ನಲ್ಲಿ ಜೆ. ಎಸ್. ಪ್ಲಾಜಾ ಎಂಬ ವಾಣಿಜ್ಯ ಸಂಕೀರ್ಣಕ್ಕೆ ಟೈಲರಿಂಗ್ ಹಾಲ್ ಎಂಬುದು ಅನ್ವರ್ಥನಾಮ. ನೆಲಮಹಡಿಯಲ್ಲಿ ಬಟ್ಟೆ ಅಂಗಡಿಗಳಿದ್ದರೆ, ಮೊದಲ ಮತ್ತು ಎರಡನೇ ಮಹಡಿಯಲ್ಲಿ ಟೈಲರಿಂಗ್ ಹಾಲ್ ಇದೆ. ಒಂದೇ ಸೂರಿನಡಿ ಸುಮಾರು 200 ಮಂದಿ ಟೈಲರ್‌ಗಳು ಹಾಲ್‌ನಲ್ಲಿ ಕೆಲಸ ಮಾಡುತ್ತಾರೆ. ತಮ್ಮ ಅಂಗಡಿಯ್ಲ್ಲಲೇ ಟೈಲರ್‌ಗೂ ಸ್ಥಳಾವಕಾಶ ಮಾಡಿಕೊಡಲು ಸಾಧ್ಯವಾಗದಿರುವ ವ್ಯಾಪಾರಿಗಳು ಅಲ್ಲಿ ತಮ್ಮ ಟೈಲರಿಂಗ್ ಯುನಿಟ್ ನಡೆಸುತ್ತಿದ್ದಾರೆ.

ಮೊದಲ ಮಹಡಿಯಲ್ಲಿರುವ `ಅಲ್ ಫಕೀಜಾ ಲೇಡೀಸ್ ಟೈಲರಿಂಗ್~ನ ಸಜ್ಜದ್ ಪಾಷಾ ವೃತ್ತಿನಿರತ ಟೈಲರ್. ಯಾವುದೇ ಅಂಗಡಿಗೆ ಸಂಬಂಧಪಡದ ಸ್ವತಂತ್ರ ಟೈಲರ್ ಅವರು. ಜೆ. ಎಸ್. ಪ್ಲಾಜಾದಲ್ಲಿ ಇವರಂತಹ ಹತ್ತಾರು ಮಂದಿ ಸ್ವತಂತ್ರ ಟೈಲರ್‌ಗಳೂ ಇದ್ದಾರೆ. `ಒಂದು ಗಂಟೆ ಸರ್ವಿಸ್ ಅಂತ ಹೇಳಿ ವ್ಯಾಪಾರಿಗಳು ನಮ್ಮಲ್ಲಿಗೆ ಗ್ರಾಹಕರನ್ನು ಕಳುಹಿಸಿಕೊಡುತ್ತಾರೆ. ಆದರೆ ಅದಕ್ಕೆ ಅವರು ಕಮಿಷನ್ ಕೇಳುತ್ತಾರೆ. ನಮ್ಮಲ್ಲಿ 175 (ಸಾದಾ ಸಲ್ವಾರ್), 225 (ಗ್ರಾಹಕರ ಲೈನಿಂಗ್) ಹಾಗೂ 300 (ನಮ್ಮ ಲೈನಿಂಗ್) ರೂಪಾಯಿ ದರ ಇದೆ. 10 ವರ್ಷದಿಂದಲೂ ನಾನು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ~ ಎನ್ನುತ್ತಾರೆ ಅವರು.

`ಟೈಲರಿಂಗ್ ಹಾಲ್~ನ ಮಹಡಿಯಲ್ಲಿರುವ ಎಂ -ಲೈಕ್ ಟೈಲರಿಂಗ್ ಶಾಪ್‌ನ ಮಾಸ್ಟರ್ ಕಟರ್ ಶೇಖ್ ಮನ್ಸೂರ್ ದಿನಕ್ಕೆ 30ಕ್ಕೂ ಹೆಚ್ಚು ಸಲ್ವಾರ್ ಕಟಿಂಗ್ ಮಾಡುತ್ತಾರೆ. 35 ವರ್ಷ ಅನುಭವ ಹೊಂದಿರುವ ಒಬ್ಬರು ಸೇರಿದಂತೆ ಐವರು ಟೈಲರ್‌ಗಳು ಇಲ್ಲಿದ್ದಾರೆ.
`ಇಲ್ಲಿ ಒಂದು ಗಂಟೆಯಲ್ಲಿ ಡ್ರೆಸ್ ಹೊಲಿದುಕೊಡುತ್ತಾರೆ ಎಂದು ಕೇಳಿದ್ದೆ. ಅದಕ್ಕಾಗಿ ಇಲ್ಲಿಗೆ ಬಂದೆ. ಬಟ್ಟೆ ಖರೀದಿಸಿದ ಅಂಗಡಿಯಲ್ಲೇ ಹೊಲಿಯಲು ಕೊಟ್ಟಿದ್ದೇನೆ. ಶಾಪಿಂಗ್ ಮುಗಿಸಿಬರುವಷ್ಟರಲ್ಲಿ ಡ್ರೆಸ್ ರೆಡಿಯಾಗುತ್ತದೆ. ಹೊಲಿಯಲು ಕೊಟ್ಟು ವಾರಗಟ್ಟಲೆ ಕಾಯಬೇಕಾದ ಅಗತ್ಯವಿಲ್ಲ. ಶುಲ್ಕವೂ ದುಬಾರಿಯಲ್ಲ~ ಎಂದರು, ಇಬ್ರಾಹಿಂ ಸ್ಟ್ರೀಟ್‌ನಲ್ಲಿ ಶಾಪಿಂಗ್‌ಗೆ ಬಂದಿದ್ದ ಬಾಣಸವಾಡಿಯ ಅರುಣಾ ಜಯಂತ್.

ಅಲಂಕಾರ್ ಪ್ಲಾಜಾದಲ್ಲೂ...

ಒಂದು ಗಂಟೆಯ ಹೊಲಿಗೆ ಸೇವೆ ಕಮರ್ಷಿಯಲ್ ಸ್ಟ್ರೀಟ್‌ಗಷ್ಟೇ ಸೀಮಿತವಲ್ಲ. ಮೆಜೆಸ್ಟಿಕ್ ಬಸ್ ನಿಲ್ದಾಣ ಬಳಿಯ ಅಲಂಕಾರ್ ಪ್ಲಾಜಾದಲ್ಲೂ ದಶಕಕ್ಕೂ ಹಿಂದೆಯೇ ಈ ಸೇವೆ ಲಭ್ಯವಿತ್ತು. ಈಗ ಎಲ್ಲಿಲ್ಲದ ಬೇಡಿಕೆ.

`ಬ್ರ್ಯಾಂಡ್ ಫ್ಯಾಕ್ಟರಿ~ ಮುಂತಾದ ಮಾಲ್‌ಗಳಲ್ಲಿಯೂ ಒಂದು ಗಂಟೆಯಲ್ಲಿ ಸಲ್ವಾರ್ ಹೊಲಿದುಕೊಡುವ ಟೈಲರ್‌ಗಳು ಈಗ ಲಭ್ಯ.

ಅಲಂಕಾರ್ ಪ್ಲಾಜಾದಲ್ಲಿಯೂ ಹತ್ತಾರು ಟೈಲರ್‌ಗಳಿದ್ದರೂ `ಬಿ.ಕೆ. ಟೈಲರ್ಸ್‌~, ಈ ಒನ್ ಅವರ್ ಟೈಲರಿಂಗ್‌ನಲ್ಲಿ ಹೆಸರುವಾಸಿ. ಅಲ್ಲಿನ ಮಾಸ್ಟರ್ ಕಟರ್ ಬಿಹಾರ ಮೂಲದ ಮೊಹಮ್ಮದ್ ಇರ್ಫಾನ್.

`ಒಂದು ಗಂಟೆಯಲ್ಲಿ ಸಲ್ವಾರ್ ಮತ್ತು ರವಿಕೆ ಹೊಲಿದುಕೊಡುವ ಟ್ರೆಂಡ್ ಈಗ ಜೋರಾಗಿದೆ. ಡಿಸೈನರ್ ಡ್ರೆಸ್‌ಗೆ ಗ್ರಾಹಕರು ನಮ್ಮನ್ನು ಹುಡುಕಿಕೊಂಡು ಬರ‌್ತಾರೆ. ಒಂದೇ ಗಂಟೆಯಲ್ಲಿ ಹೊಲಿದು ಕೊಡುತ್ತೇವೆ. ಡಿಸೈನರ್ ಡ್ರೆಸ್ ಆದ್ರೆ ಜಾಸ್ತಿ ಸಮಯ ಬೇಕಾಗುತ್ತದೆ~ ಎಂದು ಹಿಂದಿ-ಬಿಹಾರಿ ಮಿಶ್ರಿತ ಕನ್ನಡದಲ್ಲಿ ವಿವರಿಸಿದರು ಇರ್ಫಾನ್.

ಮಾತನಾಡುತ್ತಲೇ ಒಂದು ಚೂಡಿದಾರ್ ಕಟ್ಟಿಂಗ್ ಮುಗಿಸಿಬಿಟ್ಟರು. ತೆಗೆದುಕೊಂಡ ಅವಧಿ ಕೇವಲ ಐದು ನಿಮಿಷ!

ಗ್ರಾಹಕರಿಗೆ ಹೀಗೂ ಗಾಳ

ಒಂದು ಗಂಟೆಯಲ್ಲಿ ಚೂಡಿದಾರ್ ಹೊಲಿದು ಕೊಡುತ್ತೇವೆ ಅನ್ನೋದು ಶುದ್ಧ ಮಾರ್ಕೆಟಿಂಗ್ ತಂತ್ರ. ಗ್ರಾಹಕರು ತಮ್ಮ ಅಳತೆಯ ಉಡುಗೆಯನ್ನೂ ತಂದು ಯಥಾವತ್ ಹೊಲಿದುಕೊಡಿ ಅಂದ್ರೆ ಪರವಾಗಿಲ್ಲ. ಗ್ರಾಹಕರಿಗೆ ಬೇಕಾದ ವಿನ್ಯಾಸ, ಶೈಲಿಯ ಬಗ್ಗೆ ಚರ್ಚಿಸಿ ಹೊಸದಾಗಿ ಅಳತೆ ತೆಗೆಯುವಷ್ಟರಲ್ಲೇ ಅರ್ಧ ಗಂಟೆ ಕಳೆದಿರುತ್ತದೆ. ಕೆಲವರಂತೂ ಅಳತೆ ಮತ್ತು ವಿನ್ಯಾಸದ ಬಗ್ಗೆಯೇ ಗಂಟೆಗಟ್ಟಲೆ ಚರ್ಚೆ, ವಾದ ಮಾಡುವುದಿದೆ. ಅಳತೆ ತೆಗೆದ ಮೇಲೆ, ಕಟ್ಟಿಂಗ್ ಮಾಡಿ ಲೈನಿಂಗ್ ಬಟ್ಟೆ, ದಾರ ಹೊಂದಿಸಿ ಹೊಲಿಗೆ ಶುರು ಮಾಡುವಾಗ ಕನಿಷ್ಠ 15-20 ನಿಮಿಷ ಹೋಗಿರುತ್ತದೆ. ಒನ್ ಅವರ್ ಸರ್ವಿಸ್ ಅನ್ನೋ ಮಾತು ಉಳಿಸಿಕೊಳ್ಳೋ ಭರದಲ್ಲಿ ಮನಬಂದಂತೆ ಹೊಲಿದುಕೊಡುವವರೂ ಇದ್ದಾರೆ. ಫಿನಿಷಿಂಗ್ ಸಮರ್ಪಕವಾಗದೇ ಇರಬಹುದು. ಅಂಗಡಿಯಲ್ಲಿ `ಟ್ರಯಲ್ ರೂಮ್~ ಇದ್ದರೆ ಫಿಟಿಂಗ್ ನೋಡಿ ಅಲ್ಲೇ ಬದಲಾವಣೆ ಮಾಡಿಸಬಹುದು. ಇಲ್ಲದಿದ್ದರೆ ಗ್ರಾಹಕರು ಮತ್ತೆ ಇಲ್ಲಿವರೆಗೆ ಬಂದು ಸರಿ ಮಾಡಿಸಿಕೊಂಡು ಹೋಗ್ಬೇಕು. ಒಂದು ಗಂಟೆಯಲ್ಲಿ ಹೊಲಿಸಿಕೊಂಡೂ ಪ್ರಯೋಜನ ಇಲ್ಲದಂತಾಗುವುದಿಲ್ಲವೇ?

ಇದಕ್ಕಾಗಿ ನಾವು ನಮ್ಮ ಅಂಗಡಿಯಲ್ಲಿ, `ಕೊಟ್ಟು ಹೋದ ಮೇಲೆ ಒಂದು ಗಂಟೆ~ ಎಂಬ ಕ್ರಮ ಇಟ್ಟುಕೊಂಡಿದ್ದೇವೆ.

- ರೂಬಿ ಸುಂದರರಾವ್, ಪ್ರೀತಿ ಕಲೆಕ್ಷನ್ ಅಂಡ್ ಬೂಟಿಕ್, ಇಬ್ರಾಹಿಂ ಸ್ಟ್ರೀಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.