ADVERTISEMENT

ಕನಸು ಕಂಗಳಿಗೆ ದಿಕ್ಸೂಚಿ - ಮಿಷನ್ ಅಡ್ಮಿಷನ್

ಮಾಲತಿ ಭಟ್ಟ
Published 3 ಜೂನ್ 2011, 19:30 IST
Last Updated 3 ಜೂನ್ 2011, 19:30 IST

ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಹೊರಬಂದಾಗಿದೆ. ವೃತ್ತಿ ಶಿಕ್ಷಣ ಕಾಲೇಜು ಪ್ರವೇಶಿಸಲು ದಾರಿ ಮಾಡಿಕೊಡುವ ಸಿಇಟಿ ಫಲಿತಾಂಶವೂ ಹೊರಬಿದ್ದಿದೆ. ಪತ್ರಿಕೆಗಳ ಪುಟಗಳಲ್ಲೆಲ್ಲ ಶೇ 95 ದಾಟಿದ, ಸಿಟಿಇಯಲ್ಲಿ ರ‌್ಯಾಂಕ್ ಗಳಿಸಿದ ಪ್ರತಿಭಾವಂತರ ಫೋಟೋಗಳು.

ಸೈನ್ಸಾ, ಆರ್ಟ್ಸಾ, ಕಾಮರ್ಸಾ... ಎಸ್‌ಎಸ್‌ಎಲ್‌ಸಿಯಲ್ಲಿ 90 ದಾಟಿದ ವಿದ್ಯಾರ್ಥಿಗಳನ್ನು ಪ್ರಶ್ನಿಸಿದರೆ ಥಟ್ಟನೆ ದೊರಕುವ ಉತ್ತರ ಸೈನ್ಸ್. ಸ್ವಲ್ಪ ಕೆದಕಿ ಕೇಳಿದರೆ `ನಂಗೇನೋ ಸಾಹಿತ್ಯ, ಇತಿಹಾಸ ಪ್ರೀತಿ. ಮನೆಯಲ್ಲಿ ಸೈನ್ಸ್‌ಗೇ ಹೋಗ್ಬೇಕು ಎಂದು ಹೇಳ್ಬಿಟ್ಟಿದ್ದಾರೆ, ಅಕ್ಕ ಆರ್‌ವಿಯಲ್ಲಿ ಎಂಜಿನಿಯರಿಂಗ್ ಓದ್ತಿದ್ದಾಳೆ, ನಾನು ಅದಕ್ಕೆ ಹೋಗ್ಬೇಕಂತೆ...~ ಎಂಬ ರಾಗ.

ನಂಗೇನೋ ಸೈನ್ಸ್ ಇಷ್ಟ `ಆದರೆ, ಅಪ್ಪ ಚಾರ್ಟ್‌ರ್ಡ್ ಅಕೌಂಟಂಟ್. ಬೇರೇ ದಾರಿ ಇಲ್ಲ, ಕಾಮರ್ಸ್ ಕಾಲೇಜಿನ ಅಪ್ಲಿಕೇಷನ್ ತುಂಬಿಕೊಟ್ಟಾಗಿದೆ~ ಎಂಬುದು ಜಯನಗರದ ಮನೋಜ್‌ನ ಅಳಲು.

ನಂಗೆ ಫಿಜಿಕ್ಸ್ ಅಂದ್ರೆ ಮಹಾಪ್ರೀತಿ, ಬಯಾಲಜಿನೂ ಇಷ್ಟ. ಮೆಡಿಕಲ್‌ಗೆ ಹೋಗ್ಲಾ... ಅಥವಾ ಐಐಟಿಗೆ ಟ್ರೈ ಮಾಡ್ಲಾ... ಐ ಯಾಮ್ ಇನ್ ಟೋಟಲ್ ಕನ್‌ಫ್ಯೂಷನ್... ಪಿಯುಸಿ, ಸಿಇಟಿಯಲ್ಲಿ ಶೇ 96ರಷ್ಟು ಅಂಕ ಪಡೆದಿರುವ ನಿಲಿಮಾ ತಲೆ ಗೊಂದಲದ ಗೂಡು.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಸಿಇಟಿ ಇವೆಲ್ಲ ಬದುಕಿನ ಹಾದಿ ನಿರ್ಧರಿಸುವ ಮೈಲುಗಲ್ಲುಗಳು. ಆ ನಿರ್ಧಾರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುತ್ತೆ. ಒಂದೆಡೆ ವೈಯಕ್ತಿಕ ಇಷ್ಟಾನಿಷ್ಟ, ಮತ್ತೊಂದೆಡೆ ಅಪ್ಪ-ಅಮ್ಮನ ಅಭಿಲಾಷೆ, ನಾನು ಮಾಡಿದ ತಪ್ಪು ನೀನು ಮಾಡಬೇಡ ಎಂಬ ಅಣ್ಣ, ಅಕ್ಕನ ಕಿವಿಮಾತು... ಯಾವ ಕಡೆ ಹೋಗಲಿ ಎಂಬ ಮುಗಿಯದ ಗೊಂದಲ. ಗೆಳೆಯ, ಗೆಳತಿಯರು ಆಯ್ದುಕೊಳ್ಳುವ ಕೋರ್ಸ್‌ಗೆ ಸೇರಲಾ, ಟೀಚರ್, ಲೆಕ್ಚರರ್ ಹೇಳಿದಂತೆ ಕೇಳಲಾ ಎಂಬ ಜಿಜ್ಞಾಸೆಯೂ ಕಾಡುತ್ತಿರುತ್ತದೆ.

ವಿದ್ಯಾರ್ಥಿ ಸಮುದಾಯದ ಈ ಗೊಂದಲ ಪರಿಹರಿಸಲು `ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್~ ಪತ್ರಿಕಾ ಬಳಗ ಭಾನುವಾರ `ಮಿಷನ್ ಅಡ್ಮಿಷನ್~ ಕಾರ್ಯಾಗಾರ ಏರ್ಪಡಿಸಿದೆ. ಎಂಜನಿಯರಿಂಗ್, ವೈದ್ಯಕೀಯ, ಕಾನೂನು, ಬಿಸಿನೆಸ್ ಕ್ಷೇತ್ರಗಳಿಗೆ ಸಂಬಂಧಿಸಿದ ತಜ್ಞರು ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ  ಸೂಕ್ತ ಕೋರ್ಸ್ ಆರಿಸಿಕೊಳ್ಳಲು ಮಾರ್ಗದರ್ಶನ ನೀಡಲಿದ್ದಾರೆ.

ಉದಾಹರಣೆಗೆ ಎಂಜಿನಿಯರಿಂಗ್‌ಗೆ ಗಣಿತ ಜ್ಞಾನ, ಅದರ ಜೊತೆ ಚಾಲಾಕಿತನ ಮುಖ್ಯ. ವೈದ್ಯರಾಗುವವರಿಗೆ ಆಸಕ್ತಿಯ ಜೊತೆ ತಾಳ್ಮೆ, ಮತ್ತೊಬ್ಬರ ಕಷ್ಟ ಆಲಿಸುವ ಕಿವಿ ಇರಬೇಕಾಗುತ್ತದೆ. ಚಾರ್ಟ್‌ರ್ಡ್ ಅಕೌಂಟೆಂಟ್ ಆಗುವವರಿಗೆ ಗಣಿತದ ಜೊತೆ ವ್ಯವಹಾರ ಚಾತುರ್ಯ ಬೇಕೇ ಬೇಕು. ಎಂಬಿಎ ಮಾಡುವವರಿಗೆ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಇರಬೇಕು. ವಕೀಲರಾಗುವವರಿಗೆ ಕಾನೂನಿನ ಜ್ಞಾನದ ಜೊತೆ ಮಾತುಗಾರಿಕೆ, ವಿಶ್ಲೇಷಣಾ ಸಾಮಥ್ಯ ಇರಬೇಕು. ಮಿಷನ್ ಅಡ್ಮಿಷನ್‌ನಲ್ಲಿ ವಿದ್ಯಾರ್ಥಿಗಳಿಗೆ ಈ ಎಲ್ಲ ಅಂಶಗಳ ಕುರಿತು ಮಾಹಿತಿ ನೀಡಲಾಗುವುದು. ವಿವಿಧ ಕೋರ್ಸ್ ಆರಸಿಕೊಂಡಲ್ಲಿ ಆಗುವ ಲಾಭ, ಅಲ್ಲಿರುವ ಉದ್ಯೋಗಾವಕಾಶ, ಆ ವೃತ್ತಿಗೆ ಬೇಕಾದ ಮನಃಸ್ಥಿತಿ ಎಲ್ಲವನ್ನೂ ವಿವರಿಸಲಾಗುವುದು.

`ಸೂಪರ್ 30~ ಖ್ಯಾತಿಯ ಆನಂದ್ ಕುಮಾರ್ ಐಐಟಿ ಕುರಿತು ಉಪನ್ಯಾಸ ನೀಡುತ್ತಿರುವುದು ಮಿಷನ್ ಅಡ್ಮಿಷನ್ ಹೈಲೈಟ್. ಹಾಗೆಯೇ ನ್ಯಾಷನಲ್ ಲಾ ಸ್ಕೂಲ್‌ನ ಕುಲಪತಿ ಡಾ. ಆರ್. ವೆಂಕಟರಾವ್ ಕಾನೂನು ಶಿಕ್ಷಣದ ಕುರಿತು, ತಜ್ಞ ವೈದ್ಯ ಮತ್ತು ಮಾಹೆ ವಿವಿ ನಿವೃತ್ತ ಕುಲಪತಿ ಡಾ. ಬಿ.ಎಂ. ಹೆಗ್ಡೆ ವೈದ್ಯಕೀಯ ಶಿಕ್ಷಣದ ಕುರಿತು, ಏಸ್ ಕ್ರಿಯೇಟಿವ್ ಲರ್ನಿಂಗ್ ಮುಖ್ಯಸ್ಥ ಡಾ. ಶ್ರೀಧರ್ ಎಂಜಿನಿಯರಿಂಗ್ ಕುರಿತು ಹಾಗೂ ಐಬಿಎಂಆರ್ ಇಂಟರ್‌ನ್ಯಾಷನ್ ಬಿಸಿನೆಸ್ ಸ್ಕೂಲ್‌ನ ಡೀನ್ ಡಾ. ಸಿ. ಮನೋಹರ್ ಮ್ಯಾನೇಜ್‌ಮೆಂಟ್ ಶಿಕ್ಷಣದ ಕುರಿತು ವಿವರ ನೀಡುವರು.

ಬೆಳಿಗ್ಗೆ 8.30ರಿಂದ ನೋಂದಣಿ ಆರಂಭ. ಕಾರ್ಯಾಗಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ. ಪ್ರವೇಶ ಉಚಿತ. ಮೊದಲು ಬಂದವರಿಗೆ ಆದ್ಯತೆ.
ಸ್ಥಳ: ಶಿಕ್ಷಕರ ಸದನ,  ಕೆಂಪೇಗೌಡ ರಸ್ತೆ, ಕಾವೇರಿ ಭವನದ ಎದುರು. ವಿವರಗಳಿಗೆ 93433 69074,98455 53848

ಸೂಪರ್ 30 ಖ್ಯಾತಿ...
`ಸೂಪರ್ 30~ ಖ್ಯಾತಿಯ ಪಟ್ನಾದ ಆನಂದ್ ಕುಮಾರ್ ಮೂಲತಃ ಗಣಿತ ಶಿಕ್ಷಕ. ಕೆಂಬ್ರಿಡ್ಜ್ ವಿವಿಯಲ್ಲಿ ಗಣಿತದಲ್ಲಿ ಉನ್ನತಾಭ್ಯಾಸ ಮಾಡಲು ಅವಕಾಶ ದೊರೆತಿದ್ದರೂ ಆರ್ಥಿಕ ತೊಂದರೆಯಿಂದ ಈ ಅವಕಾಶ ಕಳೆದುಕೊಂಡವರು. ಅದು ಅವರನ್ನು

ಕಾಡುತ್ತಿತ್ತು. ಬಡ ಕುಟುಂಬದಿಂದ ಬಂದ ಪ್ರತಿಭಾವಂತರಿಗೆ ದಿಕ್ಸೂಚಿಯಾಗುವ ಉದ್ದೇಶದಿಂದ `ಸೂಪರ್ 30~ ಎಂಬ ವಿಶಿಷ್ಟ ಯೋಜನೆಯೊಂದನ್ನು ಆರಂಭಿಸಿದರು.

ಪ್ರವೇಶ ಪರೀಕ್ಷೆಯೊಂದರ ಮೂಲಕ ಬಿಹಾರದ ಹಳ್ಳಿಗಾಡಿನ, ಬಡ ಕುಟುಂಬಗಳ 30 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹೆಕ್ಕಿ, ಅವರಿಗೆ ತರಬೇತಿ ನೀಡಿ ತಂತ್ರಜ್ಞಾನದ ದೇಗುಲ ಎಂದೇ ಹೆಸರಾದ ಐಐಟಿಗಳಿಗೆ ಕಳುಹಿಸುವುದು ಈ ಯೋಜನೆಯ ಉದ್ದೇಶ.
ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ 30 ವಿದ್ಯಾರ್ಥಿಗಳಿಗೆ ಉಚಿತ, ವಸತಿ, ಊಟದ ಜೊತೆ ಅತ್ಯುತ್ತಮ ತರಬೇತಿಯನ್ನು ಆನಂದ್ ಕುಮಾರ್ ನೀಡುತ್ತಾರೆ. `ಸೂಪರ್ 30~ ಆರಂಭವಾದ ಎಂಟು ವರ್ಷಗಳಲ್ಲಿ 212 ವಿದ್ಯಾರ್ಥಿಗಳು ಐಐಟಿ ಪ್ರವೇಶಿಸಿದ್ದಾರೆ.

ರಿಕ್ಷಾ ಚಾಲಕರು, ಫುಟ್‌ಪಾತ್ ಮಾರಾಟಗಾರರು, ಕೂಲಿಗಳು, ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುವವರ ಮಕ್ಕಳೆಲ್ಲ ಐಐಟಿ ಮೆಟ್ಟಿಲು ತುಳಿದಿದ್ದಾರೆ.

 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.