ADVERTISEMENT

ಕರ್ಣನ ವೃತ್ತಾಂತ ‘ಕಾನೀನ’ ಇಂದು

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 14:05 IST
Last Updated 18 ಜೂನ್ 2018, 14:05 IST
ಕರ್ಣನ ವೃತ್ತಾಂತ ‘ಕಾನೀನ’ ಇಂದು
ಕರ್ಣನ ವೃತ್ತಾಂತ ‘ಕಾನೀನ’ ಇಂದು   

‌ಸೂರ್ಯನ ವರದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿ ಕರ್ಣ, ಬೆಸ್ತರ ಸಮುದಾಯದಲ್ಲಿ ಬೆಳೆಯುತ್ತಾನೆ. ದುರ್ಯೋಧನನ ಪಡೆ ಸೇರಿ ಪಾಂಡವರ ವಿರುದ್ಧ ಸೆಟೆದು ನಿಂತು, ಕೃಷ್ಣನ ಕುತಂತ್ರದಿಂದ ರಣರಂಗದಲ್ಲಿ ಹತನಾಗುತ್ತಾನೆ. ಕರ್ಣನ ಇಡೀ ಜೀವನದ ಬಗ್ಗೆ ತಿಳಿಸಿಕೊಡುವ ನಾಟಕ ‘ಕಾನೀನ’.

ರಾಷ್ಟ್ರಕವಿ ಕುವೆಂಪು ಅವರ ರಚನೆಯ ಈ ನಾಟಕವನ್ನು ದೃಶ್ಯ ರೂಪಕ್ಕೆ ಇಳಿಸುತ್ತಿದ್ದಾರೆ ಕೋಟೆ ಕಲಾ ಅಕಾಡೆಮಿ ಟ್ರಸ್ಟ್‌ ಸಾರಥ್ಯದ ಬಣ್ಣ ಅಭಿನಯ ಶಾಲೆಯ ವಿದ್ಯಾರ್ಥಿಗಳು. ಬಣ್ಣ ಶಾಲೆಯಲ್ಲಿ ಐದು ತಿಂಗಳು ಅಭಿನಯದ ಪಟ್ಟುಗಳನ್ನು ಕಲಿತ ವಿದ್ಯಾರ್ಥಿಗಳು ಒಂದು ತಿಂಗಳ ಕಾಲ ಈ ನಾಟಕವನ್ನು ಅಭ್ಯಾಸ ಮಾಡಿ ರವೀಂದ್ರ ಕಲಾಕ್ಷೇತ್ರದ ರಂಗಮಂಚದ ಮೇಲೆ ಮಂಗಳವಾರ ಸಂಜೆ ನಟಿಸಲು ಸಜ್ಜಾಗಿದ್ದಾರೆ.

ಕರ್ಣನ ಪಾತ್ರದಲ್ಲಿ ವಿಖ್ಯಾತ್ ಎಂಬ ವಿದ್ಯಾರ್ಥಿ ಕಾಣಿಸಿಕೊಳ್ಳಲಿದ್ದಾರೆ. ರಂಗಕರ್ಮಿ ನಾಗರಾಜ ಕೋಟೆ ಅವರ ಗರಡಿಯಲ್ಲಿ ಪಳಗಿದ ‘ಬಣ್ಣ’ದ ಯುವ ಪ್ರತಿಭೆಗಳು ತಮ್ಮ ಪ್ರತಿಭೆಯ ಅನಾವರಣಕ್ಕೆ ಹಾತೊರೆಯುತ್ತಿದ್ದಾರೆ. ಬಣ್ಣ ಅಭಿನಯ ಶಾಲೆಯಲ್ಲಿ ನಟನೆಯ ಚಾಕಚಕ್ಯತೆ ಕಲಿತ ಪ್ರತಿ ಬ್ಯಾಚ್‌ನ ವಿದ್ಯಾರ್ಥಿಗಳು ಒಂದೊಂದು ನಾಟಕ ಪ್ರದರ್ಶನ ನೀಡಬೇಕು. 23ನೇ ಬ್ಯಾಚ್‌ನ ವಿದ್ಯಾರ್ಥಿಗಳು ಇದೇ ಮೊದಲ ಬಾರಿಗೆ ಪೌರಾಣಿಕ ನಾಟಕ ಪ್ರದರ್ಶನ ಮಾಡುತ್ತಿದ್ದಾರೆ.

ADVERTISEMENT

  ‘ಸೂತ ಕುಲದಲ್ಲಿ ಹುಟ್ಟಿ, ಕುಂತಿಗೆ ಅಧಿಕೃತ ಮಗನಾಗದೆ, ತಾಯಿಯ ಪ್ರೀತಿಯೂ ಸಿಗದೇ ಬೆಸ್ತರ ಸಮುದಾಯದಲ್ಲಿ ಬೆಳೆದವನು ಕರ್ಣ. ತಾಯಿಯ ಪ್ರೀತಿಗಾಗಿ ಆತ ಅನುಕ್ಷಣ ಕೊರಗುತ್ತಿದ್ದ. ಪರುಶುರಾಮನೊಂದಿಗೆ ಒಡನಾಟ ಬೆಳೆಸಿಕೊಂಡು ಬೆಳೆದು ನಿಂತ ಕರ್ಣನಿಗೆ   ದುರ್ಯೋಧನ ಪಡೆಯನ್ನು ಸೇರುತ್ತಾನೆ.’

ದುರ್ಯೋಧನನ ಸ್ನೇಹಕ್ಕೆ ಕಟ್ಟುಬಿದ್ದು ಕೌರವರೇ ತನ್ನ ಸ್ವಂತ ಅಣ್ಣ ತಮ್ಮಂದಿರೆಂದು ಭಾವಿಸಿ ಬೆಳೆಯುತ್ತಾನೆ. ಪಾಂಡವರ ವಿರುದ್ಧ ಯುದ್ಧದಲ್ಲಿ ಹೋರಾಡಲು ಸಿದ್ಧನಾಗುವ ಕರ್ಣನಿಗೆ, ಕೃಷ್ಣ ಅವನ ಜನ್ಮ ವೃತ್ತಾಂತವನ್ನು ತಿಳಿಸುತ್ತಾನೆ. ಪಾಂಡವರು ತನ್ನ ಅಣ್ಣ ತಮ್ಮಂದಿರು ಅವರನ್ನು ಹೇಗೆ ಕೊಲ್ಲಲಿ ಎಂಬ ಗೊಂದಲಕ್ಕೆ ಸಿಲುಕುತ್ತಾನೆ. ಪಾಂಡವರನ್ನು ಕೊಲ್ಲುವುದಿಲ್ಲ ಎಂದು ಕೃಷ್ಣನಿಗೆ ಮಾತು ಕೊಡುವ ಕರ್ಣನನ್ನು, ಕೃಷ್ಣ ಕುತಂತ್ರ ಮಾಡಿ ಹೇಗೆ ಅರ್ಜುನನಿಂದ ಕೊಲ್ಲಿಸುತ್ತಾನೆ ಎಂಬುದು ಕಥೆಯ ಸಾರಾಂಶ ಎಂದು ವಿವರಿಸುತ್ತಾರೆ ಬಣ್ಣದ ನೊಗ ಹೊತ್ತಿರುವ ನಾಗರಾಜ ಕೋಟೆ ಅವರು.

ನಾಟಕ ಪ್ರದರ್ಶನಕ್ಕೂ ಮುನ್ನ ಸಭಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಹಾಗೂ ಕಿರುತರೆ ನಡೆ ಶೋಭಿತಾ ಶಿವಣ್ಣ ಅವರು ಪಾಲ್ಗೊಳ್ಳಿದ್ದಾರೆ.
*
ನಾಟಕದ ವಿವರ

ನಿರ್ದೇಶನ: ರಂಗನಾಥ್
ರಚನೆ: ಕುವೆಂಪು
ತಂಡ: ಬಣ್ಣ ಅಭಿನಯ ಶಾಲೆಯ 23ನೇ ಬ್ಯಾಚ್
ಸ್ಥಳ: ರವೀಂದ್ರ ಕಲಾಕ್ಷೇತ್ರ
ಸಮಯ: ಸಂಜೆ 6, ಉಚಿತ ಪ್ರವೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.