ADVERTISEMENT

ಖಯ್ಯಂ ಸಂಗೀತ ಸುಧೆ

ಬಾಲಚಂದ್ರ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ಖಯ್ಯಂ ಸಂಗೀತ ಸುಧೆ
ಖಯ್ಯಂ ಸಂಗೀತ ಸುಧೆ   

ಬಾಲಿವುಡ್‌ನ ಹಿಟ್ ಗಾಯಕ ಮೊಹಮದ್ ಜಹುರ್ ಖಯ್ಯಂ ಹಸ್ಮಿ ಅವರ ಗಾಯನ ಸುಧೆ ಸವಿಯಲು ನಗರವೀಗ ಕಾತರದಿಂದ ಕಾಯುತ್ತಿದೆ. ದತ್ತಿ ಕಾರ್ಯಕ್ರಮಕ್ಕಾಗಿ ನಗರಕ್ಕ ಬರುತ್ತಿರುವ ಖಯ್ಯಂಗೆ ಈಗ 90 ವರ್ಷ. ಆದರೆ ಅವರ ಸಂಗೀತ ಪ್ರೀತಿಗೆ ಇನ್ನೂ 16.

ರೋಟರಿ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿರುವ 'ಶಾಮ್ ಎ ಖಯ್ಯಂ'ನಲ್ಲಿ ಪಾಲ್ಗೊಳ್ಳುತ್ತಿರುವ ಅವರು 'ಮೆಟ್ರೊ' ಪುರವಣಿಯ ಜೊತೆಗೆ ಖುಷಿಯಿಂದಲೇ ಮಾತನಾಡಿದರು.

'ಕಷ್ಟದಲ್ಲಿರುವವರ ಜೀವನವನ್ನು ಬದಲಾಯಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಸಮಾಜಕ್ಕೆ ನನ್ನ ಕೈಲಾದ ಸಣ್ಣ ಕೊಡುಗೆ ನೀಡುತ್ತಿದ್ದೇನೆ. ಈ ಅಭಿಯಾನವು ಸಮಾಜವನ್ನು ಒಳಿತೆನೆಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಗೂ ಪೊಲಿಯೊ ಪೀಡಿತರ ನೆರವಿಗಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಎಲ್ಲ ಸಹಕಾರ ಬೇಕು' ಎಂಬ ವಿನಂತಿಯಲ್ಲಿ ಗಾಯಕನೊಳಗಿನ ಸಮಾಜಮುಖಿ ವ್ಯಕ್ತಿತ್ವ ಎದ್ದು ಕಂಡಿತ್ತು.

ADVERTISEMENT

ಕಳೆದ 70 ವರ್ಷಗಳಿಂದ ಸಂಗೀತ ರಸಿಕರಿಗೆ ಖಯ್ಯಂ ಹೆಸರು ಚಿರಪರಿಚಿತ. ಶಾಲಾ ಶಿಕ್ಷಣ ಪೂರೈಸಿದ ಬಳಿಕ ಲಾಹೋರ್‍ಗೆ ತೆರಳಿ ಪಾಕಿಸ್ತಾನದ ಗಾಯಕ ಬಾಬಾ ಚಿಸ್ತಿ ಅವರಿಂದ ಸಂಗೀತ ಕಲಿತರು. ಭಾರತೀಯ ಸಿನಿಮಾ ಸಂಗೀತ ಖಯ್ಯಂ ಅವರ ಆಸಕ್ತಿಯ ಕ್ಷೇತ್ರ. 1948ರಲ್ಲಿ 'ಹೀರ್ ರಂಜಾ' ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದರು. ಇದು ಅವರ ಮೊದಲ ಚಿತ್ರ.

ರಾಜ್ ಕಪೂರ್ ಅವರ 'ಫಿರ್ ಶುಭಾ ಹೊಗೀ' ಸಿನಿಮಾ ಖಯ್ಯಂ ಅವರ ಪ್ರತಿಭೆಗೆ ಮನ್ನಣೆ ದೊರಕಿಸಿಕೊಟ್ಟಿತು. 1970ರಲ್ಲಿ ತೆರೆಕಂಡ 'ಕಭಿ-ಕಭಿ' ಸಿನಿಮಾ ಅವರಿಗೆ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟಿತು. ಮೂರು ಬಾರಿ ಫಿಲಂಫೇರ್ ಪ್ರಶಸ್ತಿಯ ಗೌರವಕ್ಕೆ ಭಾಜನರಾಗಿರುವ ಖಯ್ಯಂ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಪದ್ಮಭೂಷಣ ಪ್ರಶಸ್ತಿಗಳೂ ಸಂದಿವೆ.

ತಮ್ಮ 89ನೇ ವಯಸ್ಸಿನಲ್ಲಿ ತಮ್ಮ ಸಂಪೂರ್ಣ ಸಂಪತ್ತನ್ನು ಸಮಾಜ ಸೇವೆಗಾಗಿ ದಾನ ಮಾಡಿದರು. ಕಲಾವಿದರು ಹಾಗೂ ತಂತ್ರಜ್ಞರಿಗೆ ನೆರವಾಗುವ ಉದ್ದೇಶದಿಂದ 10 ಕೋಟಿ ರೂಪಾಯಿ ವೆಚ್ಚದಲ್ಲಿ 'ಖಯ್ಯಂ ಜಗ್‍ಜೀತ್‍ಕೌರ್ ಕೆಪಿಜಿ ಚಾರಿಟೇಬಲ್ ಟ್ರಸ್ಟ್' ಸ್ಥಾಪಿಸಿದರು.

ರೋಟರಿ ಸಂಸ್ಥೆ ಆಯೋಜಿಸಿರುವ 'ಶಾಮ್ ಎ ಖಯ್ಯಂ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಖಯ್ಯಂ ಜತೆ ನಿಂತು ಭಾವಚಿತ್ರ ತೆಗೆಸಿಕೊಳ್ಳಲು ಅವಕಾಶವಿದೆ. ಸಂಗೀತ ಕಾರ್ಯಕ್ರಮದಿಂದ ಸಂಗ್ರಹವಾಗುವ ಮೊತ್ತವನ್ನು ಮಕ್ಕಳ ಶಸ್ತ್ರಚಿಕಿತ್ಸೆ ಹಾಗೂ ಪೊಲಿಯೊ ಅಭಿಯಾನಕ್ಕೆ ದೇಣಿಗೆಯಾಗಿ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.