ಕೋರಮಂಗಲದ ಈಝೋನ್‌ಗೆ `ಚಂದ್ರ' ಸಿನಿಮಾದ ಆಡಿಯೊ ಬಿಡುಗಡೆಗಾಗಿ ನಟ ವಿವೇಕ್ ಬಂದಿದ್ದರು. ನಿರ್ದೇಶಕಿ ರೂಪಾ ಅಯ್ಯರ್, ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಕೂಡ ಅಲ್ಲಿದ್ದರು. ಸೇರಿದ್ದ ಜನರು ವಿವೇಕ್ ಅವರ ಹಾಸ್ಯದ ಮಾತಿಗಾಗಿಯೇ ಕಾದು ಕುಳಿತಿದ್ದರು.
ಚಂದ್ರ ಸಿನಿಮಾದ ಹಾಡುಗಳು ಬಿಡುಗಡೆಯಾದಾಗ `ಇಂತಹ ರೊಮ್ಯಾಂಟಿಕ್ ದೃಶ್ಯವನ್ನು ಹೀರೋಗಳಿಗೆ ಮಾತ್ರ ಕೊಡುತ್ತಾರೆ. ಹಾಸ್ಯನಟರಿಗೆ ಯಾಕೆ ಕೊಡುವುದಿಲ್ಲ. ನಮಗೆ ಕೊಟ್ಟರೆ ನಾವೂ ಚೆನ್ನಾಗಿ ಮಾಡುತ್ತೇವೆ' ಎಂದು ನಗೆ ಚಟಾಕಿ ಹಾರಿಸಿದರು ವಿವೇಕ್.
`ಚಂದ್ರ ಸಿನಿಮಾದಲ್ಲಿ ನಾನು ಕನ್ನಡ ಮಾತನಾಡಿದ್ದೇನೆ. ಕನ್ನಡ ಹೇಳಿಕೊಟ್ಟಿದ್ದು ರೂಪಾ ಅಯ್ಯರ್' ಎನ್ನುತ್ತಿದ್ದಂತೆ, ಕನ್ನಡ ಮಾತನಾಡಿ ಎಂದು ಜನ ಒತ್ತಾಯಿಸಿದರು. `ನನಗೆ ಕನ್ನಡ ತುಂಬಾ ಇಷ್ಟ. ಥಿಯೇಟರ್‌ಗೆ ಬಂದು ಚಂದ್ರ ಸಿನಿಮಾ ನೋಡಿ' ಎಂದಷ್ಟೇ ಹೇಳಿದರು.
ನಗಿಸುವುದು, ನಗುವುದು ವಿವೇಕ್ ಅವರಿಗೆ ತುಂಬಾ ಇಷ್ಟದ ಕೆಲಸವಂತೆ. ನಿರ್ದೇಶಕ ಕೆ. ಬಾಲಚಂದರ್ ಅವರಿಂದ ಚಿತ್ರರಂಗಕ್ಕೆ ಪರಿಚಿತರಾದ ವಿವೇಕ್ ಉತ್ತಮ ಹಾಸ್ಯ ನಟ ಎಂಬ ಪ್ರಶಸ್ತಿಗೆ ಭಾಜನರಾದವರು. ತಮ್ಮ ವೃತ್ತಿ ಪ್ರೀತಿ ಮತ್ತು ಅನುಭವವನ್ನು `ಮೆಟ್ರೊ'ದೊಂದಿಗೆ ಅವರು ಹಂಚಿಕೊಂಡರು.
`ಚಂದ್ರ' ಸಿನಿಮಾದ ಬಗ್ಗೆ ನಿಮ್ಮ ಅನುಭವ ಹೇಳಿ?
ಅನುಭವ ತುಂಬಾ ಚೆನ್ನಾಗಿದೆ. ಒಬ್ಬ ನಿರ್ದೇಶಕಿಯ ಜತೆ ಕೆಲಸ ಮಾಡುವುದಕ್ಕೆ ತುಂಬಾ ಖುಷಿಯಾಗಿತ್ತು. ರೂಪಾ ಅಯ್ಯರ್ ಅವರಿಗೆ ಕೆಲಸದ ಬಗ್ಗೆ ಇರುವ ಪ್ರೀತಿ ನನಗೆ ಮೆಚ್ಚುಗೆಯಾಯಿತು. ನ್ಯೂಯಾರ್ಕ್, ನ್ಯೂಜೆರ್ಸಿ, ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದಾರೆ.
ತುಂಬಾ ರಾಯಲ್ ಸಿನಿಮಾ ಇದು. ಮೊದಲ ಸಲ ನಾನು ಕನ್ನಡ ಮಾತನಾಡಿದ್ದೇನೆ. ನಿರ್ದೇಶಕಿ ರೂಪಾ ನನ್ನಿಂದಲೇ ಡೈಲಾಗ್‌ಗಳನ್ನು ಹೇಳಿಸಿದ್ದಾರೆ. ಕನ್ನಡ ಜನ ನನ್ನ ಕನ್ನಡವನ್ನು ಇಷ್ಟಪಟ್ಟು ಪ್ರೋತ್ಸಾಹಿಸುತ್ತಾರೆ ಎಂಬ ಭರವಸೆ ನನಗಿದೆ.
ಹಾಸ್ಯ ನಟನಾಗಿ ಗುರುತಿಸಿಕೊಳ್ಳುವುದಕ್ಕೆ ಸ್ಫೂರ್ತಿ?
ಶಾಲಾ-ಕಾಲೇಜು ದಿನಗಳಿಂದಲೇ ನಾನು ಹಾಸ್ಯಾಭಿನಯ ಮಾಡುತ್ತಿದ್ದೆ. ಹಾಸ್ಯ ನನ್ನೊಳಗೆ ಹಾಸುಹೊಕ್ಕಾಗಿದೆ. ನಗುವಿಗೆ ಮನದ ದುಗುಡವನ್ನೆಲ್ಲಾ ಮರೆಸುವ ಶಕ್ತಿ ಇದೆ. ಹಾಗೇ ಹಾಸ್ಯನಟನಿಗೆ ಕೂಡ. ಹಾಸ್ಯಕ್ಕೆ ನಗದವರು ತುಂಬಾ ಕಡಿಮೆ. ನನಗೆ ಜನರ ಮನಸ್ಸಿನಲ್ಲಿ ಜಾಗ ಬೇಕಿದೆ. ವೀಕ್ಷಕರು ಹಾಸ್ಯನಟನಿಗೆ ಅವರ ಕುಟುಂಬದ ಸದಸ್ಯನ ಸ್ಥಾನ ನೀಡುತ್ತಾರೆ. ಆ ಆಪ್ತತೆ ಇಷ್ಟವಾಗುತ್ತದೆ. ನನಗೂ ಜನರ ಮನಸ್ಸಿನಲ್ಲಿ ಇರುವುದು ತುಂಬಾ ಇಷ್ಟ.
ಸಿನಿಮಾದಲ್ಲಿ ಹಾಸ್ಯ ಎಷ್ಟು ಮುಖ್ಯ?
ಕೆಲವು ಸಿನಿಮಾಗಳು ಹಾಸ್ಯದಿಂದಲೇ ಜನಪ್ರಿಯವಾಗುತ್ತದೆ. ಹಾಸ್ಯವೇ ಕೆಲವು ಸಿನಿಮಾಗಳ ಬೆನ್ನೆಲುಬು. ಅದುವೇ ಹೃದಯದ ಬಡಿತವೆಂದರೆ ತಪ್ಪಾಗಲಾರದು. ಜನ ಕೇವಲ ಹೀರೋಗಳನ್ನು ನೋಡುವುದಕ್ಕೆ ಮಾತ್ರವಲ್ಲ, ಆ ಸಿನಿಮಾದಲ್ಲಿರುವ ಹಾಸ್ಯವನ್ನು ನೋಡುವುದಕ್ಕಾಗಿಯೂ ಬರುತ್ತಾರೆ. ಹಾಸ್ಯ ಬೇಗ ಮನಸ್ಸಿಗೆ ಮುಟ್ಟಿ ಅವರ ಮುಖದಲ್ಲಿ ನಗು ಮೂಡಿಸುತ್ತದೆ.
ನಿಮ್ಮಿಷ್ಟದ ಹಾಸ್ಯ ಪಾತ್ರಧಾರಿ ಯಾರು?
ಚಾರ್ಲಿ ಚಾಪ್ಲಿನ್. ಮನಸ್ಸಿನಲ್ಲಿ ಸಾವಿರ ನೋವಿದ್ದರೂ ಅವರ ಮುಖ ಮಾತ್ರ ನಗುವಿನಿಂದ ಕೂಡಿರುತ್ತದೆ. ಅದೇ ನನಗೆ ಸ್ಫೂರ್ತಿ.
ತಮಿಳು ಚಿತ್ರರಂಗ ಹೇಗಿದೆ?
ಚೆನ್ನಾಗಿದೆ. ಒಳ್ಳೆಯ ಚಿತ್ರಕತೆಗಳು ಬರುತ್ತಿವೆ.
`ಶಿವಾಜಿ' ಸಿನಿಮಾದಲ್ಲಿ ರಜನಿಕಾಂತ್ ಅವರ ಜತೆ ನಿಮ್ಮ ಅನುಭವ ಹೇಗಿತ್ತು?
ರಜನಿಕಾಂತ್ ಬಗ್ಗೆ ಹೇಳುವುದಕ್ಕೆ ನನಗೆ ಪದಗಳು ಸಿಗುತ್ತಿಲ್ಲ. ರಜನಿಕಾಂತ್ ಅವರಿಂದ ಕಲಿಯುವುದು ಬೆಟ್ಟದಷ್ಟಿದೆ. ಸರಳ ವ್ಯಕ್ತಿ. ಎಲ್ಲರೊಂದಿಗೂ ಪ್ರೀತಿಯಿಂದ ಮಾತನಾಡುತ್ತಾರೆ.
ಮುಂದಿನ ಸಿನಿಮಾ?
ಸಿಂಗಂ-2, ಕಿಲಾಡಿ.
ಕನ್ನಡದಲ್ಲಿ ಮುಂದೆ ಅಭಿನಯಿಸುವ ಯೋಜನೆ ಇದೆಯಾ?
ನಿಜಕ್ಕೂ ಇದೆ. ಕನ್ನಡ ಅಷ್ಟು ಸರಿಯಾಗಿ ಬರುವುದಿಲ್ಲ. ಕಲಿತುಕೊಳ್ಳುವ ಆಸೆ ಇದೆ. ಕಲಿಯಲು ಪ್ರಯತ್ನಿಸುತ್ತೇನೆ.
ಬೆಂಗಳೂರಿನ ಬಗ್ಗೆ ನಿಮ್ಮ ಅಭಿಪ್ರಾಯ?
ತುಂಬಾ ಚೆಂದದ ನಗರವಿದು. ಇಲ್ಲಿನ ತಂಪು ವಾತಾವರಣ ಎಂಥವರಿಗೂ ಇಷ್ಟವಾಗುತ್ತದೆ. ಇತ್ತೀಚೆಗೆ ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.