ADVERTISEMENT

ಚಿಕ್ಕ ಹುಡುಗನ ದೊಡ್ಡ ಕನಸು

ಪವಿತ್ರ ಶೆಟ್ಟಿ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ಅಂತಿಮ ವರ್ಷದ ಬಿಬಿಎಂ ವಿದ್ಯಾರ್ಥಿಯೊಬ್ಬ `ಐಡಿಯಾ ಸ್ಟೂಡೆಂಟ್ಸ್ ಅವಾರ್ಡ್~ನಲ್ಲಿ ಭಾಗವಹಿಸುತ್ತಿದ್ದಾನೆ ಎಂದಾಗ ಅಚ್ಚರಿ. ಅಪ್ಪ ಮಾಡಿದ ಆಸ್ತಿ ಸಾಕಷ್ಟು ಇರಬಹುದು. ಅದರಲ್ಲಿಯೇ ಏನೋ ಬಿಸಿನೆಸ್ ಮಾಡಿಕೊಂಡಿರಬಹುದು ಎಂಬ ಯೋಚನೆಯೊಂದು ಹಾಗೇ ಸುಳಿದು ಹೋಯ್ತು. ಆದರೆ ಸಾಧನೆಯ ದಾರಿಯಲ್ಲಿರುವ ನಿತೇಶ್ ಜತೆ ಮಾತಿಗಿಳಿದಾಗ ಅವರು ಬದುಕು ಕಟ್ಟಿಕೊಂಡ ರೀತಿ ಇಂದಿನ ಯುವ ಜನರಿಗೆ ಆದರ್ಶವಾಗಿದೆ ಎಂದು ಅನಿಸಿತು.

ಕೈಯಲ್ಲೊಂದು ಮೊಬೈಲ್, ತಿರುಗಾಡಲೊಂದು ಬೈಕ್. ಇವಿಷ್ಟಿದ್ದರೆ ಜೀವನ ಕೂಲ್ ಎಂದುಕೊಳ್ಳುವ ಯುವಜನರು ಸಾಕಷ್ಟಿದ್ದಾರೆ. ಅಪ್ಪ ದುಡಿದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಾ, ಜೀವನ ಇರುವುದೇ ಮಜಾ ಮಾಡುವುದಕ್ಕೆ ಎಂಬ ಉದ್ದೇಶ ಹೊಂದಿರುತ್ತಾರೆ. ಮಗ ಕಾಲೇಜಿನಲ್ಲಿ ಓದುತ್ತಿದ್ದಾನೆ. ಒಂದು ಒಳ್ಳೆಯ ಕೆಲಸ ಪಡೆದು ನಾಳೆ ನನ್ನನ್ನು ಸಾಕುತ್ತಾನೆ ಎಂಬ ಆಸೆ ಎಲ್ಲ ತಂದೆ ತಾಯಿಯರಿಗಿರುತ್ತದೆ. ಆದರೆ ಅಪ್ಪ ಕೊಟ್ಟ ಪಾಕೆಟ್ ಮನಿ ಸಾಕಾಗಲ್ಲ ಎಂದು ಅಮ್ಮನ ಬಳಿ ದೂರಿ ಸಾಸಿವೆ ಡಬ್ಬದಲ್ಲಿಟ್ಟ ಅಲ್ಪಸ್ವಲ್ಪ ಹಣವನ್ನೂ ತೆಗೆದುಕೊಂಡು ಹೋಗುವ ಮಕ್ಕಳು ಇದ್ದಾರೆ. ಆದರೆ ತನ್ನ ಬದುಕಿಗೆ ನಾನೇ ಶಿಲ್ಪಿ ಆಗಬೇಕು ಎಂಬ ಉದ್ದೇಶದಿಂದ  ಹೊರಟ ಹುಡುಗನೊಬ್ಬನ ಕತೆ ಇದು.

ರಾಜಸ್ತಾನದಿಂದ ಓದಿಗಾಗಿ ಬೆಂಗಳೂರಿಗೆ ಬಂದ ಹುಡುಗ ಮಾರ್ಬಲ್ ಬಿಸಿನೆಸ್‌ಗೆ ಕೈ ಹಚ್ಚಿದ. ಅದರಲ್ಲಿಯೇ ಬದುಕನ್ನು  ಕಟ್ಟಿಕೊಳ್ಳುವ ಆಸೆ. ತಿಂಗಳಿಗೆ 48 ಲಕ್ಷ ರೂಪಾಯಿ ವಹಿವಾಟು! ಚಿಕ್ಕ ವಯಸ್ಸಿಗೆ ಮೀರಿದ ಉದ್ದಿಮೆಗೆ ಕೈ ಹಾಕಿ ಆದಿತ್ಯ ಬಿರ್ಲಾ ಹಾಗೇ ಆಗಬೇಕು ಎಂಬ ಹಂಬಲ!.

`ಮಧ್ಯಮ ವರ್ಗದ ಕುಟುಂಬದ ಹುಡುಗ ನಾನು. ಆದರೆ ನನ್ನ ಕನಸಿಗೆ ಯಾವುದೇ ವರ್ಗವಿಲ್ಲ. ಅಪ್ಪನೂ ಮಾರ್ಬಲ್ ಉದ್ದಿಮೆ ಮಾಡುತ್ತಿದ್ದರು. ಆಗ ನನಗೆ ಈ ಉದ್ಯೋಗ ಮಾಡಬೇಕು ಎಂದು ಅನಿಸಿರಲಿಲ್ಲ. ಓದಿಗಾಗಿ ಬೆಂಗಳೂರಿಗೆ ಬಂದೆ. ಅಣ್ಣ ಕೂಡ ಇಲ್ಲಿ ಅದೇ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದ. ನಾನೂ ಯಾಕೆ ಮಾಡಬಾರದು ಎಂಬ ಪ್ರಶ್ನೆ ಮೂಡಿತು. ಆದರೆ ಓದು ಹೇಗೆ ಮುಂದುವರಿಸುವುದು ಎಂಬ ಗೊಂದಲವೂ ಕಾಡಿತು.

ಹಾಗಾಗಿ ಎರಡು ದೋಣಿಯ ಮೇಲೆ ಕಾಲಿಡುವ ಸ್ಥಿತಿಗೆ ನನ್ನನ್ನು ನಾನು ತಯಾರು ಮಾಡಿಕೊಂಡೆ. ಬಿಸಿನೆಸ್‌ನಲ್ಲಿ ಹೆಚ್ಚಾಗಿ ತೊಡಗಿಸಿಕೊಂಡೆ~ ಎಂದು ಮಾತಿಗಿಳಿದರು ನಿತೇಶ್.

`ಪಾಕೆಟ್ ಮನಿಗೆಂದು ಮನೆಯವರನ್ನು ಪೀಡಿಸಲಿಲ್ಲ. ಯಾಕೆಂದರೆ ಬದುಕು ನನಗೆ ಕಷ್ಟವನ್ನು ಪರಿಚಯಿಸಿತ್ತು. ಸಾಧನೆಯ ದಾರಿಯನ್ನು ತೋರಿಸಿತ್ತು. ಏನಾದರೂ ಮಾಡಬೇಕು ಎಂಬ ತುಡಿತ ನನ್ನಲ್ಲಿತ್ತು. ಹಾಗಾಗಿ 2010ರಲ್ಲಿ ಈ ಬಿಸಿನೆಸ್‌ಗೆ ಕೈ ಹಾಕಿದೆ. ಮೂರು ವರ್ಷ ಪಳಗಿದೆ ಈ ವೃತ್ತಿಯಲ್ಲಿ. ಮನೆಯವರ ಬೆಂಬಲವೂ ದೊರಕಿತು. ಜತೆಗೆ ಸ್ಪರ್ಧೆಯನ್ನು ಎದುರಿಸಿದೆ. ಈ ಕೆಲಸ ಮಾಡುವುದಕ್ಕೆ ಹೋಗಬೇಡ ನಿನಗೆ ಆಗಲ್ಲ ಎಂಬಿತ್ಯಾದಿ ನಕಾರಾತ್ಮಕ ಅಭಿಪ್ರಾಯಗಳು ಸಾಕಷ್ಟು ಬಂದವು. ಆದರೆ ನಾನು ಮಾಡಬಲ್ಲೆ ಎಂಬ ಆತ್ಮವಿಶ್ವಾಸ ನನ್ನಲ್ಲಿತ್ತು.

ಇಷ್ಟು ಚಿಕ್ಕ ಹುಡುಗ ಏನು ಬಿಸಿನೆಸ್ ಮಾಡುತ್ತಾನೆ ಎಂದು ಕೆಲವರು ಲೇವಡಿ ಮಾಡಿದರು. ಆರ್ಡರ್‌ಗಳನ್ನು ಕೊಡುತ್ತಿರಲಿಲ್ಲ. ನನ್ನದು ಹೇಳಿಕೊಳ್ಳುವಂಥ ದೊಡ್ಡ ಕಂಪೆನಿ ಕೂಡಾ ಆಗಿರಲಿಲ್ಲ. ಇದರ ಜತೆಗೆ ಪರೀಕ್ಷೆಗಳು, ಸೆಮಿನಾರ್‌ಗಳು ಶುರುವಾದವು. ಈ ಉದ್ದಿಮೆಯಲ್ಲಿಯೇ ಮನಸ್ಸು ಹೆಚ್ಚು ತೊಡಗಿಸಿಕೊಂಡಿರುವುದರಿಂದ ಓದುವುದಕ್ಕೂ ಆಗಲಿಲ್ಲ. ಸೋತು ಹೋದೆ ಎಂದು ಕುಗ್ಗಿಬಿಟ್ಟೆ. ಆದರೆ ಹಿಡಿದ ಕೆಲಸ ಮಾತ್ರ ಬಿಟ್ಟಿಲ್ಲ~ ಎಂದು ಕಣ್ಣಲ್ಲಿ ಆತ್ಮವಿಶ್ವಾಸ ತುಂಬಿಕೊಂಡು ಹೇಳುತ್ತಾರೆ ನಿತೇಶ್.

`ಬಿಡುವಿದ್ದಾಗಲೆಲ್ಲ ಓದುತ್ತಿದ್ದೆ. ಮೈ ಮುರಿದು ದುಡಿದರೆ ಮಾತ್ರ ಸುಖನಿದ್ದೆ ಮಾಡಬಹುದು. ಆದಿತ್ಯ ಬಿರ್ಲಾ ನನಗೆ ಸ್ಫೂರ್ತಿ. ಅವರಂತೆ ನಾನು ದೊಡ್ಡ ಉದ್ಯಮಿ ಆಗಬೇಕು ಎಂಬ ಕನಸಿದೆ.   ಈಡೇರಿಸಿಕೊಳ್ಳುತ್ತೇನೆ ಒಂದು ದಿನ. ಈಗಾಗಲೇ ನಾನು ದುಬೈ, ಟರ್ಕಿ, ಗಲ್ಫ್ , ಪೊಲೆಂಡ್ ಮುಂತಾದ ದೇಶಗಳಿಗೆ ಮಾರ್ಬಲ್‌ಗಳನ್ನು ರಫ್ತು ಮಾಡುತ್ತಿದ್ದೇನೆ.

ಕನಕಪುರ, ಕೃಷ್ಣಗಿರಿ, ತಮಿಳುನಾಡಿನಿಂದ ಕಚ್ಚಾ ಮಾರ್ಬಲ್‌ಗಳನ್ನು ತೆಗೆದುಕೊಂಡು ಬಂದು ಅದನ್ನು ಪಾಲಿಶ್, ಕಟ್ಟಿಂಗ್ ಮಾಡುವುದು ನನ್ನ ಕಸುಬು. ಜಿಗಣಿಯಲ್ಲಿರುವ ನನ್ನ ಕಚೇರಿಯಲ್ಲಿ ಎಂಟು ಜನ ಸಹಾಯಕರಿದ್ದಾರೆ. ಇದನ್ನು ಇನ್ನಷ್ಟು ವಿಸ್ತರಿಸುವ ಆಸೆ ಇದೆ. ಕೃಷ್ಣಗಿರಿ, ತಮಿಳುನಾಡಿನಲ್ಲಿ ಸದ್ಯದಲ್ಲಿಯೇ ಕಚೇರಿ ಶುರು ಮಾಡಲಿದ್ದೇನೆ. ಯುವಕರು ಮುಂದೆ ಬರಬೇಕು. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಬೇಕು. ಆಗ ಛಲ ಹುಟ್ಟುತ್ತದೆ~ ಎಂದು ಹೇಳುತ್ತಾರೆ ನಿತೇಶ್ ಪರೀಕ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.