ADVERTISEMENT

ಜಲಪಾತ ಉತ್ಸವ

ಎನ್.ಪುಟ್ಟಸ್ವಾಮಾರಾಧ್ಯ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ನೋಡುಗರ ಕಣ್ಮನ ಸೂರೆಗೊಳ್ಳುವ ರಮಣೀಯ ದೃಶ್ಯ, ಹಾಲ ನೊರೆಯಂತೆ ಕಲ್ಲು ಬಂಡೆಗಳ ನಡುವೆ ಧುಮ್ಮಿಕ್ಕಿ ಹರಿಯುತ್ತಿರುವ ಜಲಧಾರೆ, ಎಷ್ಟು ನೋಡಿದರೂ ಸಾಲದೆಂಬಂತಹ, ಮೈಮನ ಗಳಿಗೆ ಮುದನೀಡುವ ಪ್ರಕೃತಿಯ ತಾಣ.

ಪ್ರಸಿದ್ಧ ಪ್ರವಾಸಿ ಸ್ಥಳ ಗಗನಚುಕ್ಕಿ ಜಲಪಾತದ ವೈಭವವಿದು. ಇಲ್ಲಿ ಪ್ರಸ್ತುತ 50 ಸಾವಿರ ಕ್ಯೂಸೆಕ್‌ಗಿಂತಲೂ ಹೆಚ್ಚು ನೀರು ಭೋರ್ಗರೆಯುತ್ತಿದೆ. ಬೆಂಗಳೂರಿನ ಪ್ರವಾಸಿಗಳಿಗೆ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ಈ ಸ್ಥಳದಲ್ಲಿ ಶನಿವಾರ ಹಾಗೂ ಭಾನುವಾರ `ಜಲಪಾತೋತ್ಸವ~ ಎಂಬ ವೈವಿಧ್ಯಮಯ ಕಾರ್ಯಕ್ರಮ.

ಶನಿವಾರ ಸಂಜೆ ಬೆಳಕಿನ ಚಿತ್ತಾರ, ಮನೋಮೂರ್ತಿ ತಂಡದವರಿಂದ ಸಂಗೀತ ನೃತ್ಯರಸ ಸಂಜೆ, ಆರ್‌ ದಯಾನಂದ್ (ಮಿಮಿಕ್ರಿ) ತಂಡದವರಿಂದ ಕಾಮಿಡಿ ಕಿಲಾಡಿಗಳು, ಎಂ.ಮಹದೇವಸ್ವಾಮಿ ಅವರಿಂದ ಭಕ್ತಿಗೀತೆಗಳು, ಶ್ರುತಿ ಶ್ರೀನಿವಾಸನ್ ಅವರಿಂದ ಭಗೀರಥ ಗಂಗಾ ಮತ್ತು ಜನಪದ ಕಲೆ.

ಭಾನುವಾರ ಗುರುರಾಜ ಹೊಸಕೋಟೆ, ಲಯ ಲಹರಿ, ಸಂಭ್ರಮ, ಕಿಕ್ಕೇರಿ ಕೃಷ್ಣಮೂರ್ತಿ, ಗಿಟಾರ್ ಸ್ಟೀಫನ್ ಮತ್ತು ಡ್ರಮ್ಮರ್ ದೇವರ, ಪ್ರಭಾಕರ ಟಿ, ಭವ್ಯ ಹಾಗೂ ಶ್ರುತಿ ತಂಡ, ನಿರುಪಮ ರಾಜೇಂದ್ರ, ಕಾರ್ತಿಕ್ ಎಸ್.ದಾತಾರ್, ಬಾಬಿ ಮಾಥ್ಯು ತಂಡದ ಸಾಂಸ್ಕೃತಿಕ ವೈವಿಧ್ಯ, ಸಿಡಿಮದ್ದು ಪ್ರದರ್ಶನ ಇವೆಲ್ಲದರ ಮಧ್ಯೆ ಬ್ಯಾಂಕ್‌ಜನಾರ್ದನ್ ತಂಡದ ರಂಜನೆ ಇದೆ.

ಈ ಜಲಪಾತ ಬೆಂಗಳೂರಿನಿಂದ 120 ಕಿ.ಮೀ. ದೂರದಲ್ಲಿದ್ದು ರಾಮನಗರ, ಮದ್ದೂರು ಅಥವಾ ಕನಕಪುರ, ಹಲಗೂರು ಮಾರ್ಗವಾಗಿ ಮಳವಳ್ಳಿಗೆ ಬಂದು ಕೊಳ್ಳೇಗಾಲ ರಸ್ತೆಯಲ್ಲಿ 20 ಕಿ.ಮೀ. ಪ್ರಯಾಣಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.