ಆಟೊ ಕಥೆಗಳು:
| ತಂಪು ಹೊತ್ತಿನಲ್ಲಿ ನೆನೆಯಬೇಕು ಕೆಲವು ಘಟನೆಗಳಿಂದಾಗಿ ಆಟೊದವರ ಮೇಲೆ ಜನರಿಗೆ ಗೌರವವೇ ಇಲ್ಲದಂತಾಗಿದೆ. ಆದರೂ ಮತ್ತೆ ಮತ್ತೆ ನೆನಪಿಗೆ ಬರುವ ಕೆಲವು ಆಟೊ ಡ್ರೈವರ್‌ಗಳು ಇರುತ್ತಾರೆ. ನನ್ನ ಮಗ ಅಂಗವಿಕಲನಾದುದರಿಂದ ಅವನು ಶಾಲೆಗೆ ಹೋಗುತ್ತಿದ್ದ ವೇಳೆಯಲ್ಲಿ ಹೆಚ್ಚಾಗಿ ಆಟೊ ಅವಲಂಬಿಸಿರುತ್ತಿದ್ದೆ. ಅಂತಹ ಸಮಯದಲ್ಲಿ ಕೆಲವು ಆಟೊ ಡ್ರೈವರ್‌ಗಳು ತಾವೇ ಖುದ್ದಾಗಿ ಮುಂದೆ ಬಂದು, ನನ್ನ ಮಗನನ್ನು ಮಗುವಿನಂತೆ ಎತ್ತಿಕೊಂಡು ಮನೆ ಒಳಗೆ ತಂದು ಕೂರಿಸುತ್ತಿದ್ದರು. ಹೆಚ್ಚು ಹಣ ನೀಡಲು ಹೋದರೆ ನಿರಾಕರಿಸುತ್ತಿದ್ದರು. ಅವನನ್ನು ಸಾಕಲು ಕಷ್ಟಪಡಬೇಕೆಂದು ಹೇಳಿದರೆ ನನಗೆ ಧೈರ್ಯ ಹೇಳುತ್ತಿದ್ದರು. ಅವರ ಹೆಸರುಗಳು, ಆಟೊ ನಂಬರುಗಳು ನೆನಪಿಲ್ಲದೆ ಹೋದರೂ ಅವರ ಹೃದಯ ವೈಶಾಲ್ಯತೆಗೆ ಮಾರುಹೋಗಿದ್ದೇನೆ. -ವಿಜಯ ಲತಾ |
| ಆಟೊ ಕುರಿತ ನಿಮ್ಮದೂ ಇಂಥ ಅನುಭವಗಳಿದ್ದರೆ ಬರೆಯಬಹುದು. ಛಾಯಾಚಿತ್ರಗಳಿದ್ದರೆ ಬರಹದ ಜತೆಯಿರಲಿ. ಇಮೇಲ್: metropv@prajavani.co.in |
ಬೆಳ ಬೆಳಗ್ಗೆ ಬಾಗಿಲನ್ನು ತೆರೆದು ಹೊರಗೆ ಬಂದೆ. `ಆಟೊ~ ಅಂತ ಕೈ ಮಾಡಿದ ತಕ್ಷಣ ನನ್ನ ಮುಂದೆ ನಿಂತಿತು. `ಬನ್ನೀಮ್ಮಾ~ ಅಂತ ಆದರದಿಂದ ಕರೆಯುತ್ತಾ ಕುಳಿತುಕೊಳ್ಳುವಂತೆ ಹೇಳಿದರು. ನನಗೇಕೋ ದಿಗ್ಭ್ರಮೆ ಆಯಿತು.
ಏಕೆಂದರೆ `ಎಲ್ಲಿಗೆ ಹೋಗಬೇಕು? ಎಷ್ಟು ಕೊಡ್ತೀರಿ? ಅಷ್ಟಕ್ಕೆ ಆಗೋಲ್ಲ? ಇಷ್ಟೊಂದು ದುಡ್ಡಿನ ಮುಖ ನೋಡಿದರೆ ಹೇಗೆ?~ ಎಂಬೆಲ್ಲಾ ಮಾತುಗಳನ್ನೇ ಹೆಚ್ಚಾಗಿ ಕೇಳಿದ್ದ ನನಗೆ ಹಾಗೆನ್ನದೆ, `ಮೆಲ್ಲಗೆ, ಹುಷಾರಾಗಿ ಆಟೊ ಹತ್ತಿ. ಎಲ್ಲಾದರೂ ಕಾಲು ಜಾರಿ ಹೋದೀತು? ಅಲ್ಲಿಗೆ ಮಿನಿಮಮ್ ಮಾತ್ರ...
ಬನ್ನಿ ಏನೂ ತೊಂದರೆ ಇಲ್ಲ. ನಿಮ್ಮಂತೆ ನನ್ನ ಮನೆಯಲ್ಲೂ ನಮ್ಮ ತಾಯಿ ಇದ್ದಾರೆ. ನಾನೇ ಕಿರಿ ಮಗ. ನಮ್ಮಮ್ಮನ್ನ ಕಂಡರೆ ನನಗೆ ತುಂಬಾ ಇಷ್ಟ. ಅವರಿಗೂ ಅಷ್ಟೆ, ನನ್ನ ಕಂಡ್ರೆ ತುಂಬ ಪ್ರೀತಿ, ನಾನೇನಾದರೂ ಸ್ವಲ್ಪ ತಡವಾಗಿ ಮನೆಗೆ ಹೋದರೆ ಚಡಪಡಿಸುತ್ತಾರೆ.
ನೀವು ಏನೇ ಅನ್ನಿ, ತಾಯಿಯೇ ದೇವರು, ಅವಳ ಪ್ರೀತಿ, ಮಮತೆಗೆ ಸಾಟಿ ಯಾವುದು? ನಾನು ದಿನಾ ಬರುವಾಗ ಕಾಲಿಗೆ ನಮಸ್ಕಾರ ಮಾಡ್ತೀನಿ. ಬಾಯ್ತುಂಬ ಹರಸುತ್ತಾಳೆ. ನನ್ನ ತಾಯಿಯಂತೇ ನನಗೆ ವಯಸ್ಸಾದ ಎಲ್ಲಾ ಹೆಂಗಸರ ಬಗ್ಗೆ ತುಂಬಾ ಗೌರವ.
ಈ ಕಾಲದಲ್ಲಿ ಮಕ್ಕಳು ದೂರ ದೇಶ ಕೆಲಸ ಅಂತ ಹೊರಟು ಹೋಗಿರುತ್ತಾರೆ. ಅವರ ವೃದ್ಧಾಪ್ಯಕ್ಕೆ ಊರುಗೋಲು ಆಗದೆ, ಹೆಂಡತಿ-ಮಗು ಹಣ ಸಂಪಾದನೆ ಇದೇ ಮುಖ್ಯವಾಗಿದೆ. ಮುತ್ತು ಕೊಡುವವಳು ಬಂದ ಮೇಲೆ ತುತ್ತು ಕೊಟ್ಟವಳನ್ನು ಮರೆತು ಬಿಡುತ್ತಾರೆ. ಅದಕ್ಕೇ ಅಮ್ಮಾ...
ನಾನು ಮದುವೆ ಮಾಡಿಕೊಂಡಿಲ್ಲ. ಮನೇಲಿ ಎಲ್ಲಾ ತುಂಬಾ ಬಲವಂತ ಮಾಡ್ತಾರೆ. ಆದರೆ ನಾನು ಒಪ್ಪಿಗೆ ಕೊಟ್ಟಿಲ್ಲ. ಹೆಂಡತಿ ಬಂದ ಮೇಲೆ ತಾಯಿ ತಂದೆಯಿಂದ ಎಲ್ಲಿ ಅಗಲಿಸಿ ಬಿಡುತ್ತಾಳೋ ಎಂದು ಹೆದರಿಕೆ...~
ಹೀಗೇ ಸರಸರ ಒಂದೇ ಉಸಿರಲ್ಲಿ ಮಾತಾಡುತ್ತಾ ಆಟೊ ಓಡಿಸುತ್ತಾ ಇದ್ದ. ಡ್ರೈವರ್ ಮಾತು ನಿಂತಿತು. ಮೆಲ್ಲಗೆ ಹಿಂದಿರುಗಿ ನೋಡುತ್ತಾ, `ಅಮ್ಮಾ ನನ್ನ ಮಾತು ಬೇಜಾರಾಯಿತೆ? ನೀವು ಎಷ್ಟು ವರುಷಗಳಿಂದ ಇಲ್ಲಿ ಇದ್ದೀರಿ.
ಎಷ್ಟು ಜನ ಮಕ್ಕಳು? ನೀವು ಇಬ್ಬರೇ ಇದ್ದೀರಾ? ಜೋಪಾನ, ಕಳ್ಳಕಾಕರ ಕಾಟ...~ ಎಂದು ಮತ್ತೂ ಮಾತಾಡತೊಡಗಿದ. ನಾನು ನನ್ನ ಬಗ್ಗೆ ಏನೂ ಹೇಳಿರಲಿಲ್ಲ. ಆದರೆ ಡ್ರೈವರ್‌ಗೆ ಎಲ್ಲಾ ಗೊತ್ತಾಗಿದೆ ಅಂತ ನನ್ನ ಕಣ್ಣಾಲಿಗಳು ತುಂಬಿ ಬಂದವು.
ನನಗೂ ದೇವರ ದಯೆಯಿಂದ ಸಂಸಾರ ಗಂಡು, ಹೆಣ್ಣು ಮಕ್ಕಳು, ಸೊಸೆ, ಮೊಮ್ಮಕ್ಕಳು ಗಂಡ ಇದ್ದಾರೆ. ಆದರೆ ಯಾರೂ ಸಮಯಕ್ಕೆ ಇಲ್ಲ ಎಂದು ಮನಸ್ಸಿಗೆ ಅನ್ನಿಸಿತು. ಅವರೆಲ್ಲ ಹಣ ಸಂಪಾದಿಸಿದ್ದು, ಮೆರೆಯುತ್ತಾ ಸುಖವಾಗಿದ್ದಾರೆ. ಅದು ನನಗೆ ತೃಪ್ತಿ ತಂದಿದೆ. ಎಲ್ಲಾದರೂ ಸುಖವಾಗಿ ಚೆನ್ನಾಗಿ ಇರಲಿ ಎಂದು ಮನಸ್ಸು ಏನೇನೋ ಮಾತನಾಡಿಕೊಳ್ಳತೊಡಗಿತು.
ಅಷ್ಟು ಹೊತ್ತಿಗೆ ನಾನು ಇಳಿಯ ಬೇಕಾದ ಸ್ಥಳ ಬಂದಿತ್ತು. `ನಿಲ್ಲಿಸಪ್ಪಾ~ ಅಂದೆ. ತಿರುಗಿ ನೋಡುತ್ತಾ, `ಏಕೆ ಅಮ್ಮಾ ಅಳುತ್ತೀರಿ? ನಿಮಗೆ ನಾನು ಏನೇನೋ ಹೇಳಿ ತೊಂದರೆ ಕೊಟ್ಟೆ ಅಂತ ಕಾಣುತ್ತೆ. ಕ್ಷಮಿಸಿ. ನಿಧಾನವಾಗಿ ಇಳಿಯಿರಿ~ ಎಂದು ಕೈಯಿಹಿಡಿದು ಇಳಿಸುತ್ತಾ, ನಾನು ಕೊಟ್ಟ ಹಣವನ್ನು ಜೇಬಿಗೆ ಹಾಕಿಕೊಂಡು ಹೊರಟ.
`ನೀವು ಕಣ್ಣೀರು ಹಾಕಬೇಡಿ. ನಿಮ್ಮಂಥವರು ನಿಟ್ಟುಸಿರಿಟ್ಟರೆ ನಮ್ಮಂತಹ ಮಕ್ಕಳಿಗೆ ಕೇಡು ಖಂಡಿತ. ಅದು ಶಾಪವಾಗಿ ತಟ್ಟುತ್ತದೆ. ಮುಂದೆ ನಮಗೂ ಇದೇ ವೃದ್ಧಾಪ್ಯ ಕಾದಿದೆ...~
ಹೀಗೆಲ್ಲಾ ಹೇಳುತ್ತಾ ಹೊರಡಲು ಅನುವಾದ ಡ್ರೈವರ್‌ಗೆ ನಾನು ಹೇಳಿದೆ: `ಏಕೆ ಅಳಲಿ? ನನಗೇನಾಗಿದೆ. ಬರುವಾಗ ಗಾಳಿಗೆ ದೂಳು ಕಣ್ಣಿಗೆ ಬಿತ್ತು. ಅದಕ್ಕೇ ಕಣ್ಣಲ್ಲಿ ನೀರು ಬಂತು ಅಷ್ಟೇ. ಒಳ್ಳೇದು ಹೋಗಿ ಬಾ... ನಿನ್ನಂತಹ ಮಗನನ್ನು ಪಡೆದಿರುವ ಆ ತಾಯಿ ಧನ್ಯೆ~ ಎಂದು ಮನಸ್ಸಿನಲ್ಲೇ ಅಂದುಕೊಂಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.