ADVERTISEMENT

ನಗರಿಗರಿಗೆ ಹೊಸ ಹುಡುಕುತಾಣ

​ಪ್ರಜಾವಾಣಿ ವಾರ್ತೆ
Published 13 ಜೂನ್ 2012, 19:30 IST
Last Updated 13 ಜೂನ್ 2012, 19:30 IST
ನಗರಿಗರಿಗೆ ಹೊಸ ಹುಡುಕುತಾಣ
ನಗರಿಗರಿಗೆ ಹೊಸ ಹುಡುಕುತಾಣ   

ಆತ ಖಾಸಗಿ ಕಂಪೆನಿಯೊಂದರ ಉದ್ಯೋಗಿ. ಹೊಸದಾಗಿ ಖರೀದಿಸಿದ ಸೈಟ್‌ನಲ್ಲಿ ಗೃಹ ನಿರ್ಮಾಣಕ್ಕೆ ಮುಂದಾಗಿದ್ದಾನೆ. ಮನೆಯ ಬಹುತೇಕ ಕೆಲಸ ಮುಗಿದಿದೆ. ಒಳಾಂಗಣ ವಿನ್ಯಾಸಗಾರರ ಹುಡುಕಾಟ ನಡೆಸಿದ್ದಾನೆ. ನೆರೆಹೊರೆಯವರು, ಬಂಧುಮಿತ್ರರು ಕೊನೆಗೆ ಎಂಜಿನಿಯರ್‌ಗಳಿಂದಲೂ ವಿನ್ಯಾಸಗಾರರ ಮಾಹಿತಿ ದೊರೆತಿಲ್ಲ.

ರಾಯಚೂರಿನಿಂದ ಉದ್ಯೋಗಕ್ಕಾಗಿ ನಗರಕ್ಕೆ ಬಂದ ಹುಡುಗಿಗೆ ಸೂಕ್ತ ಪಿಜಿ (ಪೇಯಿಂಗ್ ಗೆಸ್ಟ್) ಹುಡುಕುವ ಅನಿವಾರ್ಯತೆ. ಆಫೀಸು, ಗೆಳೆಯರ ಬಳಿ ವಿಚಾರಿಸಿದರೆ ಸರಿಯಾದ ಉತ್ತರವಿಲ್ಲ. ಅರಿಯದ ಊರಿನಲ್ಲಿ ಅಲ್ಲಿ ಇಲ್ಲಿ ಅಲೆದಾಡಿದ್ದಾಳೆ. ತನ್ನ ಬಜೆಟ್‌ಗೆ ಸರಿಹೊಂದುವ ಪಿಜಿ ಹುಡುಕುವುದು ಹೇಗೆ ಎಂಬುದು ಆಕೆಗೆ ತಿಳಿಯಲೇ ಇಲ್ಲ.

ಇವೆಲ್ಲಾ ನಾಗರಿಕರು ಪ್ರತಿನಿತ್ಯ ಎದುರಿಸುವ ಸಮಸ್ಯೆಗಳು. ನಗರ ಬೆಳೆದಂತೆಲ್ಲಾ ತಂತ್ರಜ್ಞಾನದಲ್ಲಿ ಅಭಿವೃದ್ಧಿಯಾಗುತ್ತಿದೆ. ಆದರೆ ಬದುಕಿಗೆ ಬೇಕಾದ ಮೂಲಮಾಹಿತಿಗಳು ಲಭ್ಯವಾಗುತ್ತಿಲ್ಲ. ಸಮೀಪದಲ್ಲೇ ಇದ್ದರೂ ಅವರನ್ನು ಸಂಪರ್ಕಿಸುವ ವಿಧಾನ ತಿಳಿಯುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಆಡ್‌ಸಿಟಿ ಇಂಡಿಯಾ ಪ್ರೈ.ಲಿ. ಮುಂದಾಗಿದೆ.

ರಾಜ್ಯದಲ್ಲಿ ಹೊಸ ಆಟೊಮೇಟೆಡ್ ಯೆಲ್ಲೋ ಪೇಜಸ್ ಸರ್ವಿಸ್ ಅನ್ನು ಪರಿಚಯಿಸಿದೆ.

ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ಈ ಸೇವೆ ಲಭ್ಯವಿರುವುದು ವಿಶೇಷ. ಬೆಂಗಳೂರಿನಲ್ಲೇ ಕುಳಿತು ಹುಬ್ಬಳ್ಳಿ ಹಳ್ಳಿಯೊಂದರ ಮಾಹಿತಿ ಇಲ್ಲವೇ, ಮಂಗಳೂರಿನ ಕಡಲ ಕಿನಾರೆಯ ರೆಸ್ಟೋರೆಂಟ್‌ನ ಮಾಹಿತಿಗಳನ್ನು ಒಂದೇ ಕ್ಲಿಕ್‌ನಲ್ಲಿ ಪಡೆಯಬಹುದು.

ಪ್ರಸ್ತುತ ಬೆಂಗಳೂರಿನಲ್ಲಿ ಮೊದಲ ಕಚೇರಿ ತೆರೆಯಲಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ರಾಜ್ಯದಾದ್ಯಂತ ಶಾಖೆಗಳು ಆರಂಭಗೊಳ್ಳಲಿವೆ. ಮುಂದಿನ ಒಂದು ತಿಂಗಳೊಳಗೆ ದಿನದ 24 ಗಂಟೆಯೂ ಈ ಸೇವೆ ಲಭ್ಯವಾಗಲಿದೆ. ಸಾರ್ವಜನಿಕರು ಟೋಲ್‌ಫ್ರೀ ಸಂಖ್ಯೆ, ಟೆಲಿಫೋನ್ ಕಾಲ್, ಎಸ್‌ಎಂಎಸ್ ಇಲ್ಲವೇ ವೆಬ್‌ಸೈಟ್ ಮೂಲಕ ಸಂಪರ್ಕಿಸಬಹುದು.

ಬ್ಯಾಂಕ್, ಸ್ಟೇಷನರಿ, ಆಸ್ಪತ್ರೆ, ಖಾಸಗಿ ಸಂಸ್ಥೆಗಳು, ಶಾಲಾ-ಕಾಲೇಜುಗಳು, ದೇವಸ್ಥಾನ, ಹಾಸ್ಟೆಲ್, ಪ್ರವಾಸ ಮಾಹಿತಿಗಳು ಇಲ್ಲಿ ಲಭ್ಯ. ಇವೆಲ್ಲವನ್ನೂ ಸುಮಾರು ನೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. `ಇಂತಹ ಮಾಹಿತಿ ನೀಡುವ ಹಲವಾರು `ಯೆಲ್ಲೋ ಪೇಜಸ್~ ಸಂಸ್ಥೆಗಳು ನಗರದಲ್ಲಿವೆ. ಆದರೆ ಅವುಗಳಲ್ಲಿ ಪರಿಪೂರ್ಣತೆ ಇಲ್ಲ. ಈ ಕೊರತೆಯನ್ನು ಅಭ್ಯಸಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದೇವೆ.

ಸುಮಾರು ಎರಡು ತಿಂಗಳ ಹಗಲಿರುಳ ಶ್ರಮ ಇಲ್ಲಿ ಫಲ ನೀಡಿದೆ. ಎಲ್ಲಾ ಜಿಲ್ಲೆಗಳ ಸಮಗ್ರ ಮಾಹಿತಿಯೂ ಒಂದೆಡೆ ಸಿಗಬೇಕು ಎಂಬ ಕಾರಣಕ್ಕೆ ರಾಜ್ಯದ ಅಷ್ಟೂ ಗ್ರಾಮಗಳ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಸದ್ಯದಲ್ಲೇ ಅದು ವೆಬ್‌ಸೈಟ್‌ನಲ್ಲಿ ಪ್ರಕಟಗೊಳ್ಳಲಿದೆ.~

`ಇಂದು ನಗರದಲ್ಲಿ ಒಂದು ಶೇಕಡಾ ಮಂದಿ ಮಾತ್ರ ಯೆಲ್ಲೋ ಪೇಜಸ್‌ನ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಬಹುತೇಕರಿಗೆ ಸುಲಭದಲ್ಲಿ ಮಾಹಿತಿ ಪಡೆಯುವ ವಿಧಾನದ ಬಗ್ಗೆ ಅರಿವಿಲ್ಲ. ಅದೇ ಕಾರಣಕ್ಕೆ ನಾವು ಈ ಬಾರಿ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುತಿದ್ದೇವೆ.

ಒಂದು ನಿಮಿಷದ ಜಾಹೀರಾತು ತಯಾರಿಸಿದ್ದು ಸದ್ಯದಲ್ಲೇ ಅದು ಟಿವಿ ಪರದೆ ಮೇಲೆ ಮೂಡಿಬರಲಿದೆ. ನಗರದ ಜನಸಂಖ್ಯೆಯಲ್ಲಿ ಕನಿಷ್ಠ ಶೇ.50 ಮಂದಿಯಾದರೂ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮಾಡುವುದೇ ನಮ್ಮ ಗುರಿ~ ಎನ್ನುತ್ತಾರೆ ಆಡ್‌ಸಿಟಿ ನಿರ್ದೇಶಕ ಎಸ್.ಆರ್. ಪೆರುಮಾಳ್.

ಬೆಂಗಳೂರು ಬಹುಭಾಷಿಗರ ತವರಾಗುತ್ತಿದೆ. ಇದೇ ಕಾರಣಕ್ಕೆ ಎಲ್ಲಾ ಮಾಹಿತಿಗಳನ್ನು ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಭಾಷೆಗಳಲ್ಲಿ ನೀಡುತ್ತಿದ್ದೇವೆ. ಖಾಸಗಿ ಸಂಸ್ಥೆ ಇಲ್ಲವೇ ಉತ್ಪನ್ನಗಳ ಹೊರತಾಗಿ ಸೇವೆಗೆ ಮೊದಲ ಆದ್ಯತೆ ನೀಡುವುದು ನಮ್ಮ ಉದ್ದೇಶ. ಜನಸಾಮಾನ್ಯರಿಗೆ ಹತ್ತಿರವಾಗುವುದರ ಮೂಲಕ  ವೇಗದ ಮಾಹಿತಿ ಪ್ರಸಾರಕ್ಕೆ ಒತ್ತು ನೀಡಲಿದ್ದೇವೆ ಎಂದು ವಿವರಿಸುತ್ತಾರೆ ಅವರು.

ಮೊಬೈಲ್ ಫೋನ್‌ನಲ್ಲೂ ಈ ಸೇವೆ ಲಭ್ಯ. ವೆಬ್‌ಸೈಟ್ ವಿಳಾಸ: www.adcityindia.com 1800 103 8767 (ಟೋಲ್ ಫ್ರೀ) ಅಥವಾ 080-43 22 2222.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.