ರಂಗಭೂಮಿ, ವಿಮರ್ಶೆ, ಭಾಷಾವಿಜ್ಞಾನ, ಸಂಸ್ಕೃತಿ ಚಿಂತನೆ, ಮೀಮಾಂಸೆ ಹೀಗೆ ಹಲವು ಜ್ಞಾನ ಶಿಸ್ತುಗಳಲ್ಲಿನ ತಮ್ಮ ಅಪಾರ ವಿದ್ವತ್‌ನಿಂದ ಶಿಷ್ಯ ಸಮೂಹವನ್ನೇ ಬೆಳೆಸಿದ ಕಿರಂ ನಾಗರಾಜ್ ಅವರಿಗೆ ನಮನ ಸಲ್ಲಿಸಲು ನೂರಾರು ಶಿಷ್ಯರು ಸಿದ್ಧವಾಗಿದ್ದಾರೆ. ‘ಕಾಡುವ ಕಿರಂ’ ಕಾರ್ಯಕ್ರಮದ ನೆಪದಲ್ಲಿ ಅಹೋರಾತ್ರಿ ಕಾವ್ಯವನ್ನು ಧ್ಯಾನಿಸಲಿದ್ದಾರೆ.
ಕಾವ್ಯ ಕಡುಮೋಹಿಯಾಗಿದ್ದ ಕಿರಂ ಪ್ರತಿ ತಿಂಗಳು ಯುವ ಕವಿಗಳನ್ನು ಒಂದು ಕಡೆ ಸೇರಿಸಿ ಹಲವು ಕವಿಗೋಷ್ಠಿಗಳನ್ನು ಮಾಡಿದ್ದಾರೆ. ಅವರು ಅಗಲಿದ ನಂತರವೂ ಈ ಪರಂಪರೆಯನ್ನು ಮುಂದುವರಿಸುವ ಸಲುವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ.
ಕಿರಂ ನೆನಪಿನಲ್ಲಿ ಕಳೆದ ಐದು ವರ್ಷಗಳಿಂದ ಜನಸಂಸ್ಕೃತಿ ಪ್ರತಿಷ್ಠಾನವು ‘ಕಾಡುವ ಕಿರಂ’ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ವರ್ಷ ಅವಿರತ ಪ್ರಕಾಶನ, ಬೆಂಗಳೂರು ಆರ್ಟ್ಸ್ ಫೌಂಡೇಷನ್ ಕೂಡ ಕಾರ್ಯಕ್ರಮಕ್ಕೆ ಕೈ ಜೋಡಿಸಿದೆ.
ಅಹೋರಾತ್ರಿ ನೂರು ಕವಿಗಳು ಭಾಗಿ ಸಂಜೆ ಆರು ಗಂಟೆಯಿಂದ ಆರಂಭವಾಗುವ ಕಾರ್ಯಕ್ರಮ ಬೆಳಗಿನ ಜಾವ ಆರು ಗಂಟೆವರೆಗೆ ನಡೆಯಲಿದೆ. ನಾಲ್ಕು ಕಂತುಗಳಲ್ಲಿ ನೂರಕ್ಕೂ ಹೆಚ್ಚು ಕವಿಗಳು ಕಾವ್ಯ ವಾಚನ ಮಾಡಲಿದ್ದಾರೆ.
‘‘ಯಾರು ಸಿಕ್ಕಿದರೂ ಕಾವ್ಯದ ವಿಚಾರವನ್ನೇ ಚರ್ಚೆ ಮಾಡುತ್ತಿದ್ದರು ಕಿರಂ. ಆ ಕಾವ್ಯದ ಗುಂಗು ಇಂದಿನ ಯುವ ಕವಿಗಳಿಗೂ ಹತ್ತಿಸುವ ಸಲುವಾಗಿ ‘ಕಾಡುವ ಕಿರಂ’ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ.’’ ಎನ್ನುತ್ತಾರೆ ಅವಿರತ ಸಂಘಟನೆಯ ಹರೀಶ್ ಕುಮಾರ್. ಅಹೋರಾತ್ರಿ ಕಾರ್ಯಕ್ರಮದಲ್ಲಿ ಏಕತಾನತೆ ಇರಬಾರದೆಂದು ಮಧ್ಯ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ.
ರಂಗಗೀತೆ, ಜನಪದ, ನಾಟಕ ಪ್ರದರ್ಶನ
ರಾತ್ರಿ 10ಕ್ಕೆ ಕಾವ್ಯ ಸಮಯದ ನಂತರ ಸಂತೃಪ್ತಿ ಅಂಧರ ಸೇವಾ ಸಂಸ್ಥೆ ವತಿಯಿಂದ ವಚನ ಗಾಯನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 12 ಗಂಟೆಗೆ ಕಿರಂ ಪುರಸ್ಕಾರ ಕಾರ್ಯಕ್ರಮವಿದೆ. ಕೋಟಿಗಾನಹಳ್ಳಿ ರಾಮಯ್ಯ, ಎಂ.ಎಸ್. ಆಶಾದೇವಿ, ವಸುಂಧರಾ ಭೂಪತಿ, ಅಮರೇಶ ನುಗಡೋಣಿ, ಎಲ್.ಎನ್. ಮುಕುಂದರಾಜು, ಹುಣಸವಾಡಿ ರಾಜನ್ ಅವರು ಕಾವ್ಯ ಪುರಸ್ಕಾರ ಪಡೆಯಲಿದ್ದಾರೆ. ನಂತರ ಪ್ರಕಾಶ್ ಶೆಟ್ಟಿ ಮತ್ತು ತಂಡದಿಂದ ರಂಗಗೀತೆ ಗಾಯನವಿದೆ.
ಮಧ್ಯ ರಾತ್ರಿ 2ಗಂಟೆಗೆ ಒಂದು ಸುತ್ತಿನ ಕಾವ್ಯ ವಾಚನವಾದ ನಂತರ ‘ವಲಸೆ ಹಕ್ಕಿ ಹಾಡು’ ನಾಟಕವನ್ನು ಕಲಾಸಾಗರ ತಂಡ ಪ್ರದರ್ಶಿಸಲಿದೆ. ನಾಟಕದ ರಚನೆ ನಾಗತಿಹಳ್ಳಿ ಚಂದ್ರಶೇಖರ್, ನಿರ್ದೇಶನ ಮಹೇಶ್ ಸಾಗರ ಅವರದ್ದು. ಮುಂಜಾನೆ 4ಗಂಟೆಗೆ ಮತ್ತೆ ಕಾವ್ಯವಾಚನವಿದೆ. ನಂತರ ಜೋಗಿಲ ಸಿದ್ಧರಾಜು, ಸಿ.ಎಂ. ನರಸಿಂಹ ಮೂರ್ತಿ, ಶಂಕರ ಭಾರತಿಪುರ, ಸವಿತಾ ಗಣೇಶ್‌ಪ್ರಸಾದ್ ಅವರಿಂದ ಜಾನಪದ ಗಾಯನವಿದೆ.
ಈ ವರ್ಷ ವಾಚಿಸಿದ ಕಾವ್ಯವನ್ನು ಸೇರಿಸಿ ಸಂಕಲನ ಪುಸ್ತಕವನ್ನು ತರುವ ಯೋಜನೆಯನ್ನು ಅವಿರತ ಪ್ರಕಾಶನ ಹೊಂದಿದೆ. ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ ಎಂ.ಎಸ್. ಮೂರ್ತಿ ನೇತೃತ್ವದಲ್ಲಿ ಹಲವು ಕಲಾವಿದರು ಕಿರಂ ರೇಖಾಚಿತ್ರವನ್ನು ಬಿಡಿಸಲಿದ್ದಾರೆ. ಈ ಕಲಾಕೃತಿಗಳ ಮಾರಾಟದಿಂದ ಬರುವ ಹಣವನ್ನು ‘ಕಾಡುವ ಕಿರಂ’ ಕಾರ್ಯಕ್ರಮಕ್ಕೆ ಬಳಸಿಕೊಳ್ಳುವ ಆಶಯವಿದೆ.
‘ಯುವಕವಿಗಳ ಸಾಂಗತ್ಯವನ್ನು ಕಿರಂ ಹೆಚ್ಚು ಇಷ್ಟಪಡುತ್ತಿದ್ದರು. ರಾತ್ರಿ ಪೂರ್ತಿ ಕಾವ್ಯವನ್ನು ಧ್ಯಾನಿಸುತ್ತಾ, ಹೆಚ್ಚು ಕಾವ್ಯ ವಿಚಾರ ಚರ್ಚೆಯಾಗಬೇಕು ಎಂಬ ಆಶಯವಿತ್ತು. ಹಾಗಾಗಿ ಅವರ ಆಶಯದಂತೆ ಈ ಕಾರ್ಯಕ್ರಮ ರೂಪಗೊಂಡಿದೆ’ ಎನ್ನುತ್ತಾರೆ ಸಂಸ ಸುರೇಶ್.
ಸ್ಥಳ– ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ ಶನಿವಾರ ಸಂಜೆ 6ರಿಂದ ಭಾನುವಾರ ಮುಂಜಾನೆ 6ರವರೆಗೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.