ADVERTISEMENT

ನೆಬ್ಬೂರು ಭಾಗವತರಿಗೆ ಸಮ್ಮಾನ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 19:30 IST
Last Updated 25 ಮಾರ್ಚ್ 2011, 19:30 IST
ನೆಬ್ಬೂರು ಭಾಗವತರಿಗೆ ಸಮ್ಮಾನ
ನೆಬ್ಬೂರು ಭಾಗವತರಿಗೆ ಸಮ್ಮಾನ   

ಯಕ್ಷಗಾನ ಯೋಗಕ್ಷೇಮ ಅಭಿಯಾನ: ಭಾನುವಾರ ನೆಬ್ಬೂರು ನಾರಾಯಣ ಭಾಗವತರ ಸಾಧನೆ ಕುರಿತು ಅಭಿನಂದನಾ ಗೋಷ್ಠಿ, ಒಂದು ಲಕ್ಷ ರೂಪಾಯಿಗಳ ಹಮ್ಮಿಣಿಯೊಂದಿಗೆ ನೆಬ್ಬೂರರಿಗೆ ಸನ್ಮಾನ. ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇವರಿಂದ ‘ಕಾರ್ತವೀರ್ಯಾರ್ಜುನ’ ಪೌರಾಣಿಕ ಯಕ್ಷಗಾನ. ಭಾಗವತರಾಗಿ ನಾಲ್ಕು ಪೀಳಿಗೆಯವರಿಗೆ ಪದ್ಯ ಹೇಳಿದ ಗೌರವ ಸಲ್ಲುವುದಿದ್ದರೆ ಅದು ನಾರಾಯಣ ಹೆಗಡೆ ಅವರಿಗೆ. ನೆಬ್ಬೂರು ಭಾಗವತರೆಂದೇ ಇವರು ಹೆಸರುವಾಸಿ. ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ (ಕೆರೆಮನೆ ಮೇಳ) 50 ವರ್ಷಗಳಿಂದ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಿ. ಶಿವರಾಮ ಹೆಗಡೆ, ದಿ. ಶಂಭು ಹೆಗಡೆ, ಶಿವಾನಂದ ಹೆಗಡೆ ಮತ್ತು ಶ್ರೀಧರ ಹೆಗಡೆ ಹೀಗೆ ನಾಲ್ಕು ತಲೆಮಾರಿನವರನ್ನು ರಂಗಸ್ಥಳದಲ್ಲಿ ಕುಣಿಸಿದ ಹೆಗ್ಗಳಿಕೆ ಇವರದ್ದು.

ಪಾರಂಪರಿಕ ಭಾಗವತಿಕೆಯನ್ನು ಇಂದಿಗೂ ಉಳಿಸಿಕೊಂಡಿರುವ ಇವರು ಬಡಗುತಿಟ್ಟಿನ ಹಿರಿಯ ಭಾಗವತರು. ಇವರು ಹಾಡಿದ ಪೌರಾಣಿಕ ಪ್ರಸಂಗಗಳ ಭಾಗವತಿಕೆಯ ಪದ್ಯಗಳು ಕಲಾರಸಿಕರ ಮನದಲ್ಲಿ ಅಚ್ಚಳಿಯದೇ ಉಳಿಯುವಂತಹದ್ದು. ಇವರ ಕಂಠಸಿರಿಯ ವೈಭವಕ್ಕೆ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. 75ನೇ ವರ್ಷಕ್ಕೆ ಕಾಲಿಟ್ಟಿರುವ ನೆಬ್ಬೂರರಿಗೆ ಹಮ್ಮಿಣಿ ನೀಡಿ ಸನ್ಮಾನಿಸಲಾಗುತ್ತಿದೆ.
ಬೆಂಗಳೂರಿನ ಅಗ್ನಿ ಸೇವಾ ಟ್ರಸ್ಟ್, ಸ್ವರ್ಣವಲ್ಲೆ ಪ್ರತಿಷ್ಠಾನ, ಕೆಂಗೇರಿಯ ಯಕ್ಷ ಕಲಾನಿಕೇತನ ಮತ್ತು ಶಿರಸಿಯ ಹೋರಾ ಫೌಂಡೇಶನ್ ಸಹಯೋಗದಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಅತಿಥಿಗಳು: ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ವಾಸುದೇವ ಅಡಿಗ, ನೀಲಾವರ ಸಂಜೀವ ರಾವ್, ಡಿ.ವಿ. ಶಿವರಾಮ, ಪಿ.ಆರ್. ನಾಯಕ, ರಾಮಕೃಷ್ಣ ನೀರ್ನಳ್ಳಿ, ಎಂ.ಆರ್. ಭಟ್, ಚಂದ್ರಶೇಖರ ಶೆಟ್ಟಿ ಪೆರ್ಡೂರು, ಆನಗಳ್ಳಿ ಕರುಣಾಕರ ಹೆಗಡೆ, ಎಸ್ ಎಸ್. ಹೆಗಡೆ, ನಾಗೇಶ್ ಶಾಸ್ತ್ರಿ, ಮಂಜುನಾಥ ಹತ್ವಾರ, ಪ್ರದೀಪ್ ಹೆಬ್ಬಾರ. ಗೋಷ್ಠಿಯಲ್ಲಿ ಭಾಗವಹಿಸುವವರು: ಉಮಾಕಾಂತ್ ಭಟ್ಟ ಮೇಲುಕೋಟೆ, ಪ್ರೊ. ಸಾಮಗ, ಶಿವಾನಂದ ಹೆಗಡೆ ಕೆರೆಮನೆ, ಎ.ಪಿ. ಪಾಠಕ, ಸಚ್ಚಿದಾನಂದ ಹೆಗಡೆ. 
 ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ. ಮಧ್ಯಾಹ್ನ 3.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.