ADVERTISEMENT

ಪ್ರೀತಿಯ ಮುದ್ದು ಕರಡಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST
ಪ್ರೀತಿಯ ಮುದ್ದು ಕರಡಿ
ಪ್ರೀತಿಯ ಮುದ್ದು ಕರಡಿ   

ಈ ಪ್ರೇಮಿಗಳ ದಿನ ನೀವು ಏನಾದರೂ ಗಿಫ್ಟ್ ಕೊಟ್ಟೇ ಕೊಡುತ್ತೀರಿ ಎಂದು ಅವಳು ಕಾದಿರುತ್ತಾಳೆ. ಅವಳನ್ನು ಇಂಪ್ರೆಸ್ ಮಾಡಲು ಏನು ಮಾಡಬೇಕು? ಚಿನ್ನ, ವಜ್ರಗಳ ಆಭರಣ ನೀಡುವುದಂತೂ ಎಲ್ಲರ ಬಜೆಟ್‌ಗೆ ಹೊಂದುವುದಿಲ್ಲ.
 
ಸಾವಿರಾರು ರೂಪಾಯಿಗಳ ಗಿಫ್ಟ್ ಆದರೂ ಖರೀದಿಸಬೇಕು, ಆದರೆ ಏನು? ಅವಳಿಗೇನು ಇಷ್ಟವಾಗಬಹುದು... ಅದು ಊಹೆಗೆ ನಿಲುಕದ್ದು. ತನ್ನ ಜೇಬನ್ನು ಬರಿದಾಗಿಸಿಕೊಳ್ಳದೆ ಅವಳ ಮನಸ್ಸಿಗೆ ಖುಷಿ ನೀಡುವ ಉಡುಗೊರೆಯೊಂದನ್ನು ಆಯ್ಕೆ ಮಾಡುವುದು ನಿಜಕ್ಕೂ ಸವಾಲಿನ ಸಂಗತಿ.

ಅಷ್ಟಕ್ಕೂ ಹುಡುಗಿಯರಿಗೆ ಏನು ಇಷ್ಟವಾಗುತ್ತದೆ, ಯಾವುದಕ್ಕೆ ಅವರು ಖುಷಿ ಪಡುತ್ತಾರೆ, ಎಂಥದ್ದಕ್ಕೆ ಮುನಿಸಿಕೊಂಡು ಎದ್ಹೋಗಿ ಬಿಡುತ್ತಾರೆ ಎಂಬುದನ್ನು ಅರಿಯುವುದು ಹುಡುಗರಿಗೆ ಯಾವತ್ತಿದ್ದರೂ ಕಷ್ಟದ ಮಾತೇ.
 
ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡಲು ಇಲ್ಲಿದೆ ಒಂದು ಮಾರ್ಗ. ಹೌದು, ನಿಮ್ಮ ಜೇಬಿಗೂ ಭಾರವಾಗದ ಆದರೆ ಅವಳ ಮನಸ್ಸಿಗೆ ಮುದ ನೀಡುವ ಉಡುಗರೆ ಟೆಡ್ಡಿ ಬೇರ್.

ಎಲ್ಲಾ ವರ್ಗದ, ಎಲ್ಲಾ ಮನೋಭಾವದ ಹುಡುಗಿಯರಿಗೂ ಇಷ್ಟವಾಗುವ ಹೀರೋ ಟೆಡ್ಡಿ. ಅಂಗೈಯಲ್ಲಿ ಹಿಡಿದುಕೊಳ್ಳಬಹುದಾದ ಅತ್ಯಂತ ಚಿಕ್ಕ ಗಾತ್ರದಿಂದ ಹಿಡಿದು ತೆಕ್ಕೆಗೆ ಸಿಗದ ಬೃಹತ್ ಗಾತ್ರದವರೆಗೂ ಟೆಡ್ಡಿಗಳಿವೆ.
 
ವಿವಿಧ ಆಕಾರ, ಪ್ರಕಾರ, ಬಣ್ಣ ಹಾಗೂ ವಿನ್ಯಾಸಗಳಲ್ಲಿ ಲಭ್ಯವಿರುವ ಟೆಡ್ಡಿ ಬೇರ್ ಆಯ್ಕೆ ನಿಮ್ಮದು. ರಸ್ತೆ ಬದಿಯ ವ್ಯಾಪಾರಿಗಳಿಂದ ಹಿಡಿದು ಬೃಹತ್ ಮಳಿಗೆಗಳವರೆಗೂ ಎಲ್ಲೆಲ್ಲಿಯೂ ಸಿಗುವ ಟೆಡ್ಡಿ, ಮಂಗ, ನಾಯಿ, ಬೆಕ್ಕು, ಹುಲಿ, ಚಿರತೆ ಮುಂತಾದ ಪ್ರಾಣಿಗಳ ರೂಪದಲ್ಲಿಯೂ ಲಭ್ಯ. ಅಷ್ಟೇ ಏಕೆ ಮಕ್ಕಳ ಬ್ಯಾಗು, ಆಂಟಿಗಳ ಪರ್ಸು, ಹುಡುಗಿಯರ ದಿಂಬು, ಹುಡುಗರ ಕೀಚೈನ್‌ಗಳ ರೂಪದಲ್ಲಿಯೂ ತನ್ನ ಪ್ರಭಾವ ಬೀರಿದ್ದಾನೆ.

ಹುಡುಗಿಯರಿಗೆ ಯಾಕಿಷ್ಟ?

ಸ್ಮಾರ್ಟ್ ಅಂಡ್ ಸ್ವೀಟ್ ಆಗಿರುವ ಹಾಗೂ ತಮ್ಮೆಲ್ಲ ಮಾತುಗಳನ್ನು ಕೇಳಿಸಿಕೊಳ್ಳುವ, ತಮಗೆ ಎದುರಾಡದ ಕಾರಣಕ್ಕೆ ಹುಡುಗಿಯರಿಗೆ ಇಷ್ಟ. ಅಮ್ಮ-ಅಪ್ಪ ಏನಾದರೂ ಅಂದಾಗ, ಕಾಲೇಜಿನಲ್ಲಿ, ಆಫೀಸಿನಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆದಾಗ, ಸ್ನೇಹಿತರೊಂದಿಗೆ ಸಣ್ಣ ಜಗಳವಾದಾಗ ಈ ಟೆಡ್ಡಿಯನ್ನು ಎದುರಿಗಿಟ್ಟುಕೊಂಡು ಎಲ್ಲವನ್ನು ಹೇಳಿ ಹಗುರಾಗಬಹುದು.
 
ಅಷ್ಟೇ ಅಲ್ಲ, ಮೊದ-ಮೊದಲು ಮೂಡುವ ಅನುರಾಗದ ಬೆಚ್ಚನೆಯ ಭಾವಗಳನ್ನೂ ಇವನ ಮುಂದೆ ಹೇಳಿಕೊಂಡರೆ ಯಾವ ಅಪಾಯವೂ ಇಲ್ಲ. ಅವನಿಂದ ಬಂದ ಮೊದಲ ಪ್ರೇಮ ಪತ್ರವನ್ನು ಇವನ ಮುಂದೆ ಜೋರಾಗಿಯೇ ಓದಿಕೊಳ್ಳಬಹುದು... ಅವನು ಹೊಟ್ಟೆಕಿಚ್ಚು ಪಡುವುದಿಲ್ಲ.
 
ಗಂಭೀರ ಮುಖಭಾವದ ಅಪ್ಪ, ಶಿಸ್ತು ಎಂದು ಕಿರುಚಾಡುವ ಪ್ರೊಫೆಸರ್, ಟೈಂ ಸೆನ್ಸ್ ಎಂದು ಎಗರಾಡುವ ಬಾಸು... ಇವರೆಲ್ಲರ ಮೇಲಿನ ಸಿಟ್ಟನ್ನು ಈ ಟೆಡ್ಡಿ ಮೇಲೆ ಹಾಕಿ ಸಮಾಧಾನ ಆಗುವವರೆಗೂ ಅವನನ್ನು ಗುದ್ದಬಹುದು.. ಪಾಪ ಅವನು ಅಷ್ಟಕ್ಕೆಲ್ಲ ಕಿತ್ತುಕೊಂಡು ಹೋಗುವುದಿಲ್ಲ, ರೇಗುವುದಿಲ್ಲ, ತಿರುಗಿ ಕೆನ್ನೆಗೆ ಬಾರಿಸಿ ಬಿಟ್ಟಾನು ಎನ್ನುವ ಭಯವಿಲ್ಲ.

ಅಂದಹಾಗೆ ಇವನು ಅವನಷ್ಟು ಪೊಸೆಸ್ ಕೂಡ ಆಗಿರುವುದಿಲ್ಲ. ಯಾರೊಂದಿಗೇ ಮಾತನಾಡಲಿ, ಯಾರದೇ ಫೋನ್ ಬರಲಿ ತಲೆಕೆಡಿಸಿಕೊಳ್ಳುವವನಲ್ಲ ಈ ಟೆಡ್ಡಿ. ಎಲ್ಲಿಗೆ ಹೋಗಿದ್ದೆ, ಯಾಕೆ ಲೇಟು? ಅಂತೆಲ್ಲ ಅಪ್ಪನಂತೆ ಪ್ರಶ್ನಿಸುವುದಿಲ್ಲ.
 
ಟಿವಿ ನೋಡಿದ್ದು ಸಾಕು, ಇನ್ನು ಓದು ಎಂದು ಅಮ್ಮನಂತೆ ರೇಗುವುದಿಲ್ಲ. ಹೊರಗಿನಿಂದ ಸುಸ್ತಾಗಿ ಬಂದರೆ ಅದೇ ಪ್ರಸನ್ನವಾದ ನಗುಮೊಗದಿಂದ ಬರಮಾಡಿಕೊಳ್ಳುತ್ತಾನೆ. ನಿನ್ನ ದುಃಖ-ದುಮ್ಮಾನಗಳನ್ನೆಲ್ಲ ನನ್ನಲ್ಲಿ ಹೇಳಿಕೊಂಡು ಹಗುರಾಗು ಎನ್ನುವಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾನೆ... ಇಂಥ ಅವನ ತಣ್ಣನೆಯ ಪ್ರೀತಿಗೆ ಮಾರು ಹೋಗದವರಾರು?

ಎಲ್ಲೆಲ್ಲಿ ಇವನ ಸ್ಥಾನ

ಹುಡುಗಿಯರ ಬೆಡ್‌ರೂಂ ಟೆಡ್ಡಿಯ ಪ್ರೈಂ ಪ್ಲೇಸ್ ಎನ್ನಬಹುದು. ಹೆಚ್ಚಿನ ಹುಡುಗಿಯರು ದಿನಪೂರ್ತಿ ನಡೆದಿದ್ದನ್ನೆಲ್ಲ ರಾತ್ರಿ ಅವನ ಕಿವಿಯಲ್ಲಿ ಪಿಸುಗುಟ್ಟಲು ಬೆಡ್‌ರೂಮಿನಲ್ಲಿ ಟೆಡ್ಡಿಗಳನ್ನು ಶೇಖರಿಸಿಟ್ಟುಕೊಳ್ಳುತ್ತಾರೆ.

ಇನ್ನೂ ಕೆಲವರು ಟಿ.ವಿ. ಮೇಲೆ, ಟೀಪಾಯ್ ಮೇಲೆಯೂ ಇವನ್ನನ್ನು ಪ್ರತಿಷ್ಠಾಪಿಸುತ್ತಾರೆ. ಪುಟ್ಟ ಗಾತ್ರದ ಟೆಡ್ಡಿಗೆ ಶೋಕೇಸ್‌ನಲ್ಲಿಯೂ ಜಾಗವಿದೆ. ಹಾಗೆಂದು ಕೇವಲ ಹುಡುಗಿಯರ ಅಥವಾ ಮಕ್ಕಳ ಬೆಡ್‌ರೂಂ, ಟಿವಿ. ಮೇಲೆ ಅಥವಾ ಶೋಕೇಸ್‌ನಲ್ಲಿ ಮಾತ್ರ ಇವನ ವಾಸ ಎಂದುಕೊಳ್ಳಬೇಡಿ. ಅನೇಕರು ತಮ್ಮ ವಾಹನದಲ್ಲಿಯೂ ಈ ಟೆಡ್ಡಿಗಳನ್ನು ತೂಗು ಹಾಕುತ್ತಾರೆ.

ಅಷ್ಟಕ್ಕೂ ಟೆಡ್ಡಿ ಬೇರ್‌ನಂತಹ ಎವರ್ ಗ್ರೀನ್ ಉಡುಗೊರೆಯನ್ನು ಕೊಡಲು ಇಂಥದ್ದೇ ಕಾರಣ ಎಂದೇನೂ ಇಲ್ಲ. ಪ್ರೇಮಿಗಳ ದಿನಕ್ಕೆ ಮಾತ್ರವಲ್ಲದೇ, ಕ್ರಿಸ್‌ಮಸ್, ಹೊಸ ವರ್ಷ, ಹುಟ್ಟು ಹಬ್ಬಗಳಿಗೂ ಈ ಡುಮ್ಮನನ್ನು ಧಾರೆ ಎರೆಯಬಹುದು.
 
ಅವರಿಗೆ ಈ ಗಿಫ್ಟ್ ಇಷ್ಟವಾಗುತ್ತದೊ ಇಲ್ಲವೊ, ಈ ಬಣ್ಣ ಅವರಿಗೆ ಹಿಡಿಸುತ್ತದೊ ಏನೊ, ಇದನ್ನು ಅವರು ತೊಡುತ್ತಾರೊ ಇಲ್ಲವೊ ಎನ್ನುವಂತಹ ಸಂದೇಹಗಳೇ ಬೇಡ. ಮಹಿಳೆ, ಮಕ್ಕಳು, ವೃದ್ಧರೆನ್ನದೇ ಎಲ್ಲಾ ವಯೋಮಾನದವರಿಗೂ ಇಷ್ಟವಾಗುತ್ತಾನೆ ಈ ಭೂಪ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.