ADVERTISEMENT

ಬಹುಬಗೆ ಕಲಾಕೃತಿಗಳ ತಾಣ

ಅಭಿಲಾಷ ಬಿ.ಸಿ.
Published 21 ಮೇ 2018, 19:30 IST
Last Updated 21 ಮೇ 2018, 19:30 IST
ಕೊಳಲನೂದುವ ಕೃಷ್ಣನಿಗೆ ಬೆಣ್ಣೆ ಆಮಿಷ ಒಡ್ಡುವ ಮಂಜುಳಾ ಅವರ ಕಲಾಕೃತಿ
ಕೊಳಲನೂದುವ ಕೃಷ್ಣನಿಗೆ ಬೆಣ್ಣೆ ಆಮಿಷ ಒಡ್ಡುವ ಮಂಜುಳಾ ಅವರ ಕಲಾಕೃತಿ   

ದಟ್ಟಡವಿಯ ನಡುವಿನಲ್ಲಿ ಹೊಳೆವ ಸೂರ್ಯ ರಶ್ಮಿ, ಕೃಷ್ಣನ ರಮಿಸುವ ರಾಧೆ, ಜೀವನ ಪ್ರೀತಿ, ದೇವರು, ನಂಬಿಕೆ, ಭಾವನೆಗಳು, ಹೀಗೆ ಪ್ರತಿ ಕಲಾರಸಿಕನ ನೋಟಕ್ಕೂ ಭಿನ್ನ ಗ್ರಹಿಸುವಿಕೆ ದಕ್ಕಿಸುವಂತಿದೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿರುವ ‘ಮಾಸ್ಟರ್‌ ಸ್ಟ್ರೋಕ್ಸ್‌’ ಕಲಾ ಪ್ರದರ್ಶನ.

ಕಲಾವಿದರಾದ ಎಂ.ವೈ.ಮಂಜುಳಾ ಸಂಜೀವ್‌ ಹಾಗೂ ದೀಪಕ್‌ ಸುತಾರ್ ಅವರ ವಿವಿಧ ಕಲಾಕೃತಿಗಳ ಪ್ರದರ್ಶನ ಇಲ್ಲಿ ಏರ್ಪಡಿಸಲಾಗಿದೆ. ಅಮೂರ್ತ, ಭಾವಚಿತ್ರ, ಸಮಕಾಲೀನ, ವಾಸ್ತವ ಸೇರಿದಂತೆ ವಿವಿಧ ಶೈಲಿಯ ಕಲಾಕೃತಿಗಳು ಅಕ್ರೆಲಿಕ್‌, ಆಯಿಲ್‌ ಹಾಗೂ ನೈಫ್‌ ಪೇಂಟಿಂಗ್ಸ್‌ಗಳಲ್ಲಿ ಮೂಡಿವೆ. ಒಂದೇ ಪ್ರದರ್ಶನದಲ್ಲಿ ಬಹು  ವಿವಿಧ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲಾರಸಿಕರಿಗಿದೆ. ಮೇ 27 ರವರೆಗೆ ನಡೆಯುವ ಈ ಪ್ರದರ್ಶನ ಇರಲಿದೆ.

ಕಲಾವಿದೆ ಮಂಜುಳಾ ಅವರಿಗೆ ಬಣ್ಣಗಳ ಸಾಂಗತ್ಯ ಬೆಳೆದಿದ್ದು ಬಾಲ್ಯದಿಂದಲೇ. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಇವರು ಕೆಪಿಟಿಸಿಎಲ್ ಉದ್ಯೋಗಿ. ಶಾಲಾ, ಕಾಲೇಜು ಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದ ಇವರು ಪ್ರವೃತ್ತಿಯಾಗಿ ಚಿತ್ರಕಲೆಯನ್ನು ರೂಢಿಸಿಕೊಂಡಿದ್ದಾರೆ. ಮೈಸೂರಿನ ‘ಜಯಚಾಮರಾಜೇಂದ್ರ ಕಾಲೇಜ್ ಆಫ್‌ ಎಂಜಿನಿಯರಿಂಗ್‌’ನಲ್ಲಿ ಓದುತ್ತಿದ್ದಾಗ ಮೈಸೂರು ದಸರಾ ಚಿತ್ರಕಲಾ ಪ್ರದರ್ಶನದಲ್ಲಿ ಇವರ ಕಲಾಕೃತಿಗಳಿಗೆ ‘ಉತ್ತಮ ಪೇಟಿಂಗ್ ಅವಾರ್ಡ್‌’ ದೊರೆತಿತ್ತು. ಇದು ಮಂಜುಳಾ ಅವರಿಗೆ ಚಿತ್ರಕಲೆಯ ಬಗೆಗಿದ್ದ ಒಲವನ್ನು ಇಮ್ಮಡಿಗೊಳಿಸಿತ್ತು.

ADVERTISEMENT

‘ವೃತ್ತಿಯ ಜೊತೆಗೆ ಪ್ರವೃತ್ತಿಗೂ ಮಹತ್ವ ನೀಡಲು ಪತಿಯ ಸಹಕಾರವೇ ಕಾರಣ’ ಎನ್ನುವ ಮಂಜುಳಾ ಚಿತ್ರಕಲಾ ಪರಿಷತ್ತು ಆಯೋಜಿಸುವ ಚಿತ್ರಸಂತೆ, ರಂಗೋಲಿ ಮೆಟ್ರೊ ಕಲಾಕೇಂದ್ರದಲ್ಲಿ ನಡೆಯುವ ಕಲಾ ಪ್ರದರ್ಶನ, ನಮ್ಮ ಬೆಂಗಳೂರು ಹಬ್ಬ ಮೊದಲಾದ ಪ್ರದರ್ಶನಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಾರೆ.

ಮಂಜುಳಾ ಅವರು ಕಲಾಕೃತಿಗಳ ವಿಶೇಷ ‘ಗ್ಲೋ ಇನ್‌ ಡಾರ್ಕ್‌ ಎಫೆಕ್ಟ್‌’. ಅಂದರೆ ಕತ್ತಲೆಯಲ್ಲಿಯೂ ಇವರ ಕಲಾಕೃತಿಗಳಿಗೆ ರೇಡಿಯಂನಂತೆ ಹೊಳೆಯುವ . ರಾತ್ರಿ ಸಮಯಲ್ಲಿ ಹೊಳೆಯುವ ಇವು ಕಲಾರಸಿಕರನ್ನು ಆಕರ್ಷಿಸುತ್ತವೆ. ಯಾವುದೇ ಕಲಾ ತರಗತಿಗಳಲ್ಲಿ ಚಿತ್ರಕಲೆ ಅಭ್ಯಾಸ ಮಾಡದ ಇವರು ಆಕ್ರೆಲಿಕ್‌, ಆಯಿಲ್‌, ವಾಟರ್ ಕಲರ್‌ (ಜಲವರ್ಣ) ಕಲಾಕೃತಿಗಳನ್ನು ರಚಿಸುತ್ತಾರೆ.

ಚಿತ್ರಕಲೆಯಲ್ಲದೇ ವಿವಿಧ ಕಲೆಗಳನ್ನು ಮಂಜುಳಾ ಮೈಗೂಡಿಸಿಕೊಂಡಿದ್ದಾರೆ. ಕೆಪಿಟಿಸಿಎಲ್‌ ವತಿಯಿಂದ ಕೇರಂ ಆಟದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ್ದಾರೆ. ಜೊತೆಗೆ ಫ್ಯಾಷನ್‌ ಡಿಸೈನಿಂಗ್, ಒರೆಗಾಮಿ ಬಗ್ಗೆಯೂ ಆಸಕ್ತರಾಗಿದ್ದಾರೆ.

‘ಪೇಂಟಿಂಗ್ ಅಂದರೆ ಪ್ರೀತಿ. ಅದರಲ್ಲಿ ಅಸ್ಮಿತೆ ಕಂಡುಕೊಳ್ಳಬೇಕು. ನನ್ನದೇ ವಿಶೇಷ ಶೈಲಿ ರೂಢಿಸಿಕೊಳ್ಳಬೇಕು. ನನ್ನ ಕಲಾಕೃತಿಗಳನ್ನು ನೋಡಿದ ಜನರಿಗೆ ರಿಲ್ಯಾಕ್ಸ್‌ ಆಗಬೇಕು. ಮನಸಿಗ ಉಲ್ಲಾಸ ಸಿಗಬೇಕು. ಅಂತಹದನ್ನು ಕಲಿಯಬೇಕು ಎನ್ನುತ್ತಾರೆ’ ಮಂಜುಳಾ

ಖಾಸಗಿ ಕಂಪೆನಿಯೊಂದರಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿರುವ ದೀಪಕ್‌ ಅವರಿಗೆ ಕಲೆಯ ಒಲವು ಮೂಡಿದ್ದು ಬಾಲ್ಯದಿಂದಲೇ. ಅವರ ತಂದೆಯೂ ಮರದ ಮೇಲೆ ಸುಂದರ ಕಲಾಕೃತಿ ಮೂಡಿಸುತ್ತಿದ್ದಂತೆ. ಅವರಿಂದಲೇ ಸ್ಫೂರ್ತಿ ಪಡೆದ ದೀಪಕ್ ಕ್ಯಾನ್ವಾಸ್‌ ಮೇಲೆ ಕಲೆ ಅರಳಿಸುವ ಹವ್ಯಾಸ ಕರಗತಮಾಡಿಕೊಂಡರು.

ಧಾರವಾಡದ ‘ಸ್ಕೂಲ್‌ ಆಪ್‌ ಆರ್ಟ್‌’ ವಿದ್ಯಾಲಯದಲ್ಲಿ ಫೈನ್‌ ಆರ್ಟ್‌ನಲ್ಲಿ ಡಿಪ್ಲೊಮಾ ಮಾಡಿದ್ದು ದೀಪಕ್‌ ಅವರಲ್ಲಿನ ಕಲೆಗೆ ಹೊಸ ರೂಪ ನೀಡಿತು. ಕಲಾಕೃತಿಗಳ ರಚನೆಗೆ ದೀಪಕ್‌ ಅವರು ಬ್ರಷ್‌ ಬಳಸುವುದಿಲ್ಲ. ಪೇಂಟಿಂಗ್ ನೈಫ್‌ (ಪ್ಯಾಲೇಟ್ ನೈಫ್‌) ಬಳಸುವುದು ಇವರ ವಿಶೇಷತೆ. ಈ ನೈಫ್‌ಗಳಲ್ಲಿಯೇ ವಿವಿಧ ಆಕಾರಗಳಿದ್ದು ಅವುಗಳನ್ನು ಬಳಸಿ ಅಕ್ರೆಲಿಕ್ ಬಣ್ಣವನ್ನು ತುಂಬುತ್ತಾರೆ. ವೆಂಕಟಪ್ಪ ಕಲಾ ಗ್ಯಾಲರಿ, ಚಿತ್ರ ಕಲಾ ಪರಿಷತ್ತು ಸೇರಿದಂತೆ ವಿವಿಧ ಕಲಾ ಗ್ಯಾಲರಿಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. 

ಮಾಸ್ಟರ್‌ ಸ್ಟ್ರೋಕ್ಸ್‌ ಕಲಾಕೃತಿ ಪ್ರದರ್ಶನ: ಮಂಜುಳಾ, ದೀಪಕ್‌ ಕಲಾಕೃತಿಗಳ ಪ್ರದರ್ಶನ. ಆಯೋಜನೆ–ಸ್ಥಳ–ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ. ಬೆಳಿಗ್ಗೆ 11 ರಿಂದ ರಾತ್ರಿ 7 ಮೇ 27 ರವರೆಗೆ ಇರಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.