ಕುಳಿತಲ್ಲಿಯೇ ಮಾಹಿತಿಯ ಮಹಾಪೂರವನ್ನೇ ಹರಿಸುವ ಇಂಟರ್‌ನೆಟ್ ಹೊಸ ಹೊಸ ಸಾಧ್ಯತೆಗಳನ್ನು ನಮ್ಮ ಮುಂದಿಟ್ಟಿದೆ. ಇದೀಗ ‘ಫೇಮ್‌ಬಾಕ್ಸ್ ವೆಬ್‌ಶೆಫ್’ ಎಂಬ ವಿನೂತನ ಸ್ಪರ್ಧೆ ನಡೆಸುವ ಮೂಲಕ ಅಡುಗೆಪ್ರಿಯರಿಗೆ ಹೊಸ ಅವಕಾಶಗಳನ್ನು ನೀಡಿತ್ತು.
ಫೇಸ್‌ಬುಕ್‌ನಲ್ಲಿ ಇದಕ್ಕೆ ಸಂಬಂಧಿಸಿದ ಜಾಹೀರಾತು ನೋಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಅಂತಿಮ ಸುತ್ತಿಗೆ ಆಯ್ಕೆಯಾದ ಖುಷಿಯಲ್ಲಿ ಬೀಗುತ್ತಿದ್ದಾರೆ ಬೆಂಗಳೂರಿನ ಮಧುಶ್ರೀ ರಾವ್.
ಡಿಸೆಂಬರ್‌ನಲ್ಲಿ ಪ್ರಾರಂಭವಾದ ಈ ಸ್ಪರ್ಧೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಮೊದಲ ಆನ್‌ಲೈನ್ ರಿಯಾಲಿಟಿ ಷೋ ಇದಾಗಿದ್ದು, ಸ್ಪರ್ಧಿಗಳು ತಯಾರಿಸುವ ಅಡುಗೆಯ ವಿಧಾನವನ್ನು ಮನೆಯಲ್ಲೇ ಚಿತ್ರೀಕರಿಸಿ ಅದನ್ನು www.fameboxwebchef.comಗೆ ಅಪ್‌ಲೋಡ್ ಮಾಡುವ ಅವಕಾಶ ನೀಡಲಾಗಿತ್ತು. ಎರಡು ಸುತ್ತುಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಆಯ್ಕೆಯಾದವರಿಗೆ ಚೆನ್ನೈನ ಐಟಿಪಿ ಗ್ರಾಂಡ್ ಚೋಲಾ ಹೋಟೆಲ್‌ನಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಸಲಾಗಿದೆ. ಮುಂಬೈನಿಂದ ಮೂವರು, ಪುಣೆಯಿಂದ ಒಬ್ಬರು ಹಾಗೂ ಬೆಂಗಳೂರಿನಿಂದ ಮಧುಶ್ರೀ ಅಂತಿಮ ಸುತ್ತಿಗೆ ಆಯ್ಕೆಯಾದವರಾಗಿದ್ದು, ಗೆಲುವಿನ ಗರಿ ಯಾರಿಗೆ ಎಂಬುದು ಇನ್ನೂ ನಿರ್ಧಾರವಾಗಬೇಕಿದೆ.
ಯಾವ ರೀತಿಯ ಹೊಸ ಪ್ರಯೋಗದ ತಿಂಡಿ ತಯಾರಿಸಿದ್ದಾರೆ, ಅದನ್ನು ಮಂಡಿಸಿದ ರೀತಿ, ಹಾಗೂ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆದ ವೀಡಿಯೊವನ್ನು ಎಷ್ಟು ಜನ ವೀಕ್ಷಿಸಿದ್ದಾರೆ ಎಂಬುದು ಅಭ್ಯರ್ಥಿಗಳ ಆಯ್ಕೆಯ ಮಾನದಂಡ ವಾಗಿತ್ತು. ಅಂತಿಮ ಸುತ್ತಿಗೆ ಪತ್ರಕರ್ತ ವೀರ ಸಾಂಘ್ವಿ ತೀರ್ಪುಗಾರರಾಗಿದ್ದರು.
ಚಿಕ್ಕಂದಿನಿಂದಲೂ ಅಡುಗೆಯ ಬಗ್ಗೆ ಪ್ರೀತಿ ಬೆಳೆಸಿಕೊಂಡ ಮಧುಶ್ರೀಗೆ ಅಜ್ಜಿ ಹಾಗೂ ಅಮ್ಮನೇ ಸ್ಫೂರ್ತಿ. ಪ್ರತಿದಿನ ಅವರು ಮಾಡುವ ಬಗೆಬಗೆಯ ಅಡುಗೆ ನೋಡಿಯೇ ಆಸಕ್ತಿ ಬೆಳೆಸಿಕೊಂಡ ಇವರು ಮೊದಲ ಬಾರಿಗೆ ಬಟಾಟಾ ತಳಾಸನ್ (ಕೊಂಕಣಿ ಡಿಶ್) ತಯಾರಿಸಿದ್ದರಂತೆ. ಮೊದಲ ಪ್ರಯೋಗದಲ್ಲೇ ಯಶಸ್ಸು ಸಿಕ್ಕಿದ್ದರಿಂದ ಅಡುಗೆ ಪ್ರೀತಿ ಮುಂದುವರಿದಿದೆಯಂತೆ.
ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಓದುತ್ತಿರುವ ಮಧುಶ್ರೀಗೆ ಏನಾದರೂ ಹೊಸತನ್ನು ಮಾಡಬೇಕು ಎಂಬ ಆಸೆ. ‘ಮನೆಯಿಂದಲೂ ಸಂಪೂರ್ಣ ಸಹಕಾರ ಸಿಕ್ಕಿತು. ಹೀಗಾಗಿ ಸಿಕ್ಕಿದ ಅವಕಾಶಕ್ಕೆ ತಯಾರಿ ನಡೆಸಿದೆ. ಏನು ಮಾಡುವುದು ಎಂದು ಯೋಚಿಸುವುದಕ್ಕೇ ಎರಡು ದಿನ ಬೇಕಾಯಿತು. ಪ್ರೆಸೆಂಟೇಶನ್‌ಗೆ ಅಂಕವಿದ್ದುದರಿಂದ ಆ ಬಗ್ಗೆಯೂ ಹೆಚ್ಚು ಗಮನಹರಿಸಬೇಕಾಯಿತು. ಚಿತ್ರೀಕರಣಕ್ಕೆ ಅಪ್ಪ–ಅಮ್ಮ ಸಹಾಯ ಮಾಡಿದರು. ಎರಡು ದಿನ ಕುಳಿತು ನಾನೇ ವಿಡಿಯೊ ಎಡಿಟಿಂಗ್ ಮಾಡಿದೆ. ಕಲಿಕೆಯ ಅನುಭವ ಹೆಚ್ಚು ಇಷ್ಟವಾಯಿತು’ ಎನ್ನುವ ಮಧುಶ್ರೀಗೆ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು ಖುಷಿ ನೀಡಿದೆಯಂತೆ.
ಮಧುಶ್ರೀ ಮೊದಲ ಸುತ್ತಿನಲ್ಲಿ ಟ್ರಾನ್ ಗ್ರೀನ್ ಮಸಾಲಾ, ಎರಡನೇ ಸುತ್ತಿನಲ್ಲಿ ಮಿಕ್ಸ್ ಸೀಫುಡ್ ಪ್ಲಾಟರ್ ತಯಾರಿಸಿದ್ದರು. ಪಿಯುಸಿಯಲ್ಲಿರುವಾಗ ಒಲೆ ಬಳಸದೆ ಅಡುಗೆ ಮಾಡುವ ಸ್ಪರ್ಧೆಯಲ್ಲಿ ಅವರು ಸ್ಪರ್ಧಿಸಿದ್ದರಂತೆ. ಅಲ್ಲಿ ಬಹುಮಾನ ದೊರೆಯದೇ ಬೇಸರಗೊಂಡಿದ್ದರಂತೆ. ಆ ಬೇಸರ ಈ ಸ್ಪರ್ಧೆಯಿಂದ ದೂರವಾಗಿದೆ ಎಂದು ನಗುತ್ತಾರೆ ಮಧುಶ್ರೀ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.