ADVERTISEMENT

ಮಾತು ಆಡುವ ಮುನ್ನ ಆಸ್ವಾದಿಸಬೇಕು

ಮಾತ್‌ಮಾತಲ್ಲಿ

ಪ್ರಜಾವಾಣಿ ವಿಶೇಷ
Published 26 ಆಗಸ್ಟ್ 2013, 19:59 IST
Last Updated 26 ಆಗಸ್ಟ್ 2013, 19:59 IST

ಸಮೂಹ ಗಾಯನದಲ್ಲಿ ಸಮರ್ಥವಾಗಿ ಹಾಡುತ್ತಿದ್ದರೂ ಸೋಲೊ ಹಾಡಿಗೆ ವೇದಿಕೆಯೇರಲು ನನ್ನಿಂದಾಗುತ್ತಿರಲಿಲ್ಲ. ಹಾಗಂತ ಪುಕ್ಕಲು ಹುಡುಗಿ ನಾನಾಗಿರಲಿಲ್ಲ. ಶಾಲಾ ದಿನಗಳಲ್ಲಿ ಹೆಚ್ಚೂ ಅಲ್ಲ, ಕಮ್ಮಿಯೂ ಅಲ್ಲದಂತೆ ಮಾತನಾಡುತ್ತಿದ್ದೆ. ಕಾಲೇಜಿಗೆ ಸೇರಿದ ಮೇಲೆ ಮಾತು ಹೆಚ್ಚಾಯಿತು. ಸ್ನೇಹಿತೆಯರೂ ಹೆಚ್ಚಿದರು. ಪ್ರಥಮ ಪಿಯುಸಿಯಲ್ಲಿ ಓದುತ್ತಿರುವಾಗ ಭಾರತ ಯಾತ್ರಾ ಕೇಂದ್ರದವರ ಅಂತರಕಾಲೇಜು ಮಟ್ಟದ ವಿವಿಧ ಸ್ಪರ್ಧೆಗಾಗಿ ನಮ್ಮ ಜೆಎಸ್‌ಎಸ್ ಕಾಲೇಜು ತಂಡದಲ್ಲಿ ‘ಸುಲ್ತಾನ್ ಟಿಪ್ಪು’ ನಾಟಕಕ್ಕೆ ಆಯ್ಕೆಯಾದೆ. ಅದು ಮೊದಲ ಬಾರಿ ಬಣ್ಣ ಹಚ್ಚಿದ ಅನುಭವ. ನಾಟಕ ಚೆನ್ನಾಗಿ ನಡೆಯಿತು. ಅಲ್ಲಿಂದಾಚೆಗೆ ಅಭಿನಯದಲ್ಲಿ ಸೋಲಲಿಲ್ಲ.

ನನ್ನ ಮೊದಲ ಧಾರಾವಾಹಿ ‘ಮಾರಿ ಕಣಿವೆ ರಹಸ್ಯ’. ಮಕ್ಕಳ ಧಾರಾವಾಹಿ ಅದು. ನಂತರ ‘ಗೋಧೂಳಿ’ ಧಾರಾವಾಹಿಯಲ್ಲಿ ನಟಿಸಿದೆ. ಒಂದು ದಿನ ಮಳೆಯಲ್ಲಿ ಚಿತ್ರೀಕರಣ ನಡೆದಿತ್ತು. ಮಳೆಯಿಂದಾಗಿ ನನ್ನ ಪಾತ್ರದ ಸಂಭಾಷಣೆ ಅಸ್ಪಷ್ಟವಾಗಿ ಮೂಡಿಬಂದಿತ್ತು. ಸೌಂಡ್ ಡೈರೆಕ್ಟರ್ ಆ ಸನ್ನಿವೇಶದ ಸಂಭಾಷಣೆಯನ್ನು ಪುನರಾವರ್ತಿಸುವಂತೆ ಹೇಳಿದರು. ವಾಯ್ಸ್ ಕೊಟ್ಟೆ. ನನ್ನದೇ ಧ್ವನಿಯಾದ್ದರಿಂದ ಚೆನ್ನಾಗಿಯೇ ಬಂತು. ಮತ್ತೊಂದು ದಿನ ಸಹಕಲಾವಿದೆಯೊಬ್ಬರು ಬಾರದೇ ಇದ್ದಾಗ ಅವರ ಧ್ವನಿಯಲ್ಲಿ ಎರಡು ಸಂಭಾಷಣೆಯನ್ನು ಓದಿಹೇಳಿ ಅಂದ್ರು. ಹೇಳಿದೆ. ಅದೂ ಸಮರ್ಪಕವಾಗಿತ್ತು. ಆದರೆ ಈ ಎರಡೂ ಪ್ರಯತ್ನಗಳು ಕಂಠದಾನ ಅಥವಾ ಡಬ್ಬಿಂಗ್ ಅನ್ನೋದು ನನಗೆ ಗೊತ್ತಿರಲಿಲ್ಲ.

ಆದರೆ ಅದೇ ಧಾರಾವಾಹಿಯ ನಿರ್ದೇಶಕ ಮಲ್ಲಿಕಾರ್ಜುನ್ ಅವರು ಗೀತಪ್ರಿಯ ನಿರ್ದೇಶನದ ‘ಶ್ರಾವಣ ಸಂಭ್ರಮ’ ಚಿತ್ರದಲ್ಲಿ ನಾಯಕಿ ದಾಮಿನಿ ಅವರಿಗೆ ಕಂಠದಾನ ಮಾಡುವ ಅವಕಾಶ ಕಲ್ಪಿಸಿಕೊಟ್ಟರು. ಚಿತ್ರರಂಗಕ್ಕೆ ಕಂಠದಾನ ಕಲಾವಿದೆಯಾಗಿ ಕಾಲಿಟ್ಟದ್ದು ಹಾಗೆ, ಅನಿರೀಕ್ಷಿತವಾಗಿ.

ಈವರೆಗೆ ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಕಂಠದಾನ ಮಾಡಿದ್ದೇನೆ. ದಾಮಿನಿ ಅವರು ನಟಿಸಿದ್ದ ಬಹುತೇಕ ಸಿನಿಮಾಗಳಲ್ಲಿ ನನ್ನದೇ ಧ್ವನಿಯಿತ್ತು. ‘ದಂಡುಪಾಳ್ಯ’ದಲ್ಲಿ ಪೂಜಾ ಗಾಂಧಿ ಅವರಿಗೆ ಕಂಠದಾನ ಮಾಡಿದ್ದೆ. ಧಾರಾವಾಹಿಗಳಲ್ಲಿ ಪರಭಾಷಾ ಕಲಾವಿದರಿಗೆ ಡಬ್ಬಿಂಗ್ ಮಾಡಿದ್ದೂ ಇದೆ. ಕೆಲದಿನಗಳ ಹಿಂದೆ ‘ತಂಗಾಳಿ’ ಧಾರಾವಾಹಿಗೆ ನವ್ಯಾ ಎಂಬ ಕಲಾವಿದೆಗೆ ಡಬ್ಬಿಂಗ್‌ ಮಾಡಿದೆ. ಹೀಗೆ, ಅನಿರೀಕ್ಷಿತವಾಗಿ ಒದಗಿಬಂದ ಒಂದು ಅವಕಾಶದಲ್ಲಿ ಗೆದ್ದಿದ್ದೇ ಇಲ್ಲಿವರೆಗೂ ನೂರಾರು ಅವಕಾಶಗಳನ್ನು ಮೊಗೆದುಕೊಟ್ಟಿದೆ.

ಯಾವುದೇ ಕೆಲಸವನ್ನು ಇಷ್ಟಪಟ್ಟು, ಸಂಪೂರ್ಣ ತೊಡಗಿಸಿಕೊಂಡು ಮಾಡಿದಾಗ ಮಾತ್ರ ಅದರಲ್ಲಿ ಯಶಸ್ಸು ಸಿಗುತ್ತದೆ. ಮುಖ್ಯವಾಗಿ, ಪ್ರತಿ ಅವಕಾಶವನ್ನು ಹೊಸದೆಂಬಂತೆ ಸ್ವೀಕರಿಸುತ್ತೇನೆ. ಡಬ್ಬಿಂಗ್ ಅಂದ್ರೆ ಇಷ್ಟವೇ ಆದರೂ ನನ್ನ ಮೊದಲ ಆದ್ಯತೆ ಅಭಿನಯಕ್ಕೆ.

ಕಂಠದಾನದ ಕಲೆ ಎಲ್ಲಾ ಕಲಾವಿದರಿಗೂ ಒಲಿಯುವುದಿಲ್ಲ. ಕಂಠವನ್ನು ದುಡಿಸಿಕೊಳ್ಳುವುದು ಸುಲಭವಲ್ಲ. ಅದು ನನಗೆ ಸಿದ್ಧಿಸಿದೆ. ನನ್ನ ಬಗ್ಗೆ ಹಾಗೂ ಕಂಠದಾನ ಕಲಾವಿದರ ಬಗ್ಗೆ ನನಗೆ ಹೆಮ್ಮೆಯಿದೆ. ಈ ವೃತ್ತಿಗಾಗಿ ನಾನು ಆಹಾರದಲ್ಲಿ ಸ್ವಲ್ಪ ಶಿಸ್ತು ಕಾಪಾಡಿಕೊಂಡು ಬಂದಿದ್ದೇನೆ. ಎಣ್ಣೆಯುಕ್ತ ಆಹಾರ ಮತ್ತು ಐಸ್‌ಕ್ರೀಮ್ ಕಡಿಮೆ ತಿನ್ನುತ್ತೇನೆ. ಆದರೆ ತಿಂಡಿಪೋತಿಯಾದ ಕಾರಣ ನಾಲಿಗೆ ರುಚಿಗೆ ಪೂರ್ತಿ ಕಡಿವಾಣ ಹಾಕಲು ಆಗುವುದಿಲ್ಲ. ಅದಕ್ಕಾಗಿ ನನ್ನ ಗಂಡ ಅನಿಲ್ ಸದಾ ಗದರುತ್ತಾರೆ.

ಮಾತು ಮತ್ತು ಅಭಿನಯ ಕಲೆ ನನಗೆ ಬದುಕು ಕೊಟ್ಟಿದೆ. ಮಾತು ಮೊದಲು ನಮ್ಮ ಮನಸ್ಸಿಗೆ ರುಚಿಸಬೇಕು. ನಾವು ಆಸ್ವಾದಿಸಿ ನಂತರ ಆಡಬೇಕು. ಅಂದರೆ ನಾವು ಮೊದಲು ‘ಟೇಕ್’ ಮಾಡಬೇಕು. ನಮಗೆ ಓಕೆ ಆದರೆ ಮಾತ್ರ ನಮ್ಮ ಮುಂದೆ ಇರುವವರಿಗೆ ಟೇಕ್ ಓಕೆ ಆಗುತ್ತದೆ. ಇಲ್ಲದಿದ್ದರೆ ನಮಗೂ ಒಳಗೊಳಗೆ ಕಿರಿಕಿರಿ ಆಗುತ್ತದೆ, ನಮ್ಮ ಜತೆ ಮಾತನಾಡಿದವರಿಗೂ ಇರಿಸುಮುರಿಸು ಉಂಟುಮಾಡುತ್ತದೆ. ಅಂತಹ ಮುಜುಗರಕ್ಕೆ ಅವಕಾಶ ಸಿಗದಂತೆ ಯೋಚಿಸಿ, ಅದರ ಪರಿಣಾಮ ಯಾರ ಮೇಲೆ ಹೇಗಾದೀತು ಎಂದು ಊಹಿಸಿ ಮಾತನಾಡುವುದು ಸೂಕ್ತ ಅಲ್ವೇ?

ವಾಸ್ತವವಾಗಿ ನನ್ನ ಮಾತೃಭಾಷೆ ತೆಲುಗು, ಗಂಡನದು ತಮಿಳು. ಆದರೆ ಬದುಕು, ಭವಿಷ್ಯ ಕಟ್ಟಿಕೊಟ್ಟ ಕನ್ನಡ ಮತ್ತು ಈ ನಾಡಿಗೆ ಋಣಿಯಾಗಿರಬೇಕಲ್ಲವೇ? ಅದಕ್ಕೆ ನಮ್ಮ ಮಗಳಿಗೆ ಕನ್ನಡವನ್ನಷ್ಟೇ ಹೇಳಿಕೊಟ್ಟಿದ್ದೇವೆ. ನಮ್ಮ ಮನೆಯ ಭಾಷೆಯೂ ಕನ್ನಡ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.