ADVERTISEMENT

ರಂಜಿಸಿದ ವಾಗ್ದೇವಿ ಪುಟಾಣಿ ಪ್ರಪಂಚ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸುವ ಉದ್ದೇಶದಿಂದ `ವಾಗ್ದೇವಿ ಪುಟಾಣಿ ಪ್ರಪಂಚ-2012~ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಮಾರತ್‌ಹಳ್ಳಿಯಲ್ಲಿರುವ ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆ ಆಯೋಜಿಸಿತ್ತು. ಇದು ವಿಶೇಷವಾಗಿ ಪೂರ್ವ ಪ್ರಾಥಮಿಕ ಮತ್ತು ಮಾಂಟೆಸ್ಸರಿ ಚಿಣ್ಣರಿಗಾಗಿ ನಡೆದ ಕಾರ್ಯಕ್ರಮ.

ಸೃಜನಾತ್ಮಕ ಕಲಿಕೆ ಅಕಾಡೆಮಿ ಅಧ್ಯಕ್ಷ ಡಾ. ಗುರುರಾಜ್ ಕರ್ಜಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುಟಾಣಿ ಮಕ್ಕಳು ತಮ್ಮ ಅಭಿನಯ, ನೃತ್ಯ, ನಟನೆ ಮೂಲಕ ನಿಸರ್ಗ ಪ್ರೀತಿಯನ್ನು ವ್ಯಕ್ತಪಡಿಸಿದರು. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

`ಕಲೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಕಲೆ ಸುಪ್ತವಾಗಿ ಕಾರ್ಯನಿರ್ವಹಿಸುತ್ತಿರುತ್ತದೆ. ಬಾಲ್ಯದಲ್ಲೇ ಮಕ್ಕಳ ಆಸಕ್ತಿಗೆ ಸೂಕ್ತ ವೇದಿಕೆ ನಿರ್ಮಿಸಿಕೊಟ್ಟರೆ ಮಕ್ಕಳು ಕಲಾ ಅಭಿರುಚಿ ಬೆಳೆಸಿಕೊಳ್ಳಲು ನೆರವಾಗುತ್ತದೆ.
 
ಹೀಗಾಗಿ ಚಿಣ್ಣರಿಗಾಗಿ ರೂಪಿಸಲಾಗಿರುವ  ಪುಟಾಣಿ ಪ್ರಪಂಚ  ಮನೆರಂಜನೆ ಜೊತೆಗೆ ಮಕ್ಕಳ ಪ್ರತಿಭೆ ಅನಾವಣಗೊಳಿಸುವ ಅತ್ಯುತ್ತಮ ಪ್ರಯೋಗವಾಗಿದೆ~ ಎಂದರು ಡಾ. ಗುರುರಾಜ ಕರ್ಜಗಿ.

ಮಾಂಟೆಸ್ಸರಿ ವಿಭಾಗದ ಪುಟಾಣಿಗಳು, ಪೂರ್ವ ಪ್ರಾಥಮಿಕ ತರಗತಿಯ ಚಿಣ್ಣರು ಸಾಂಪ್ರದಾಯಿಕ ಉಡುಗೆ ತೊಟ್ಟು ಪ್ರೇಕ್ಷಕರನ್ನು ರಂಜಿಸಿದರು. ಪಂಚಭೂತಗಳ ಕೊಡುಗೆಯನ್ನು ವರ್ಣೀಸುವ ಗೀತ-ನತ್ಯ, ಹಾಡುಗಳು ನವಿರಾಗಿ ಮೂಡಿಬಂದವು.


ಸಾಂಸ್ಕತಿಕ ಕಾರ್ಯಕ್ರಮದಲ್ಲಿ, ಸಾಂಪ್ರದಾಯಿಕ ವೇಷಭೂಷಣ ಪ್ರದರ್ಶನ, ನತ್ಯ, ಸಂಗೀತ, ಭಕ್ತಿಗೀತೆಗಳು, ಜಾನಪದ ನೃತ್ಯಗಳು, ಪಾಶ್ಚಾತ್ಯ ನೃತ್ಯವನ್ನು ಪುಟಾಣಿಗಳು ಪ್ರದರ್ಶಿಸಿದರು.

ಶೈಕ್ಷಣಿಕ ವರ್ಷದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿಗಳಿಗೆ ಕರ್ಜಗಿ ಅವರು ಬಹುಮಾನ ನೀಡಿದರು. ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಹರೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT