
ಹಲವು ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಪುನಶ್ಚೇತನಗೊಂಡಿದೆ. ಏಪ್ರಿಲ್ 24 ಡಾ. ರಾಜ್‌ಕುಮಾರ್ ಜನ್ಮದಿನ. ಈ ದಿನವನ್ನು ರಾಜ್‌ಕುಮಾರ್ ಅವರ 84ನೇ ಜಯಂತ್ಯುತ್ಸವವನ್ನಾಗಿ ಆಚರಿಸುವ ಮೂಲಕ ಸಂಘ ಮತ್ತೆ ಕ್ರಿಯಾಶೀಲಗೊಳ್ಳುತ್ತಿದೆ.
ಏ.24ರಂದು ರಾಜ್‌ಕುಮಾರ್ ಸ್ಮರಣಾರ್ಥ ಬೆಳಿಗ್ಗೆ 8ರಿಂದ ಸಂಜೆ 6 ಗಂಟೆವರೆಗೂ ಕಂಠೀರವ ಸ್ಟುಡಿಯೋ ಆವರಣದ ರಾಜ್‌ಕುಮಾರ್ ಪುಣ್ಯಭೂಮಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸಂಘ ಹಮ್ಮಿಕೊಂಡಿದೆ. ಇದರಲ್ಲಿ ಇಡೀ ಚಿತ್ರರಂಗ, ಸಾಹಿತಿಗಳು, ವಿವಿಧ ವಲಯಗಳ ಗಣ್ಯರು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಉದ್ಘಾಟನೆ ನೆರವೇರಿಸಲಿದ್ದಾರೆ. ರಕ್ತದಾನ, ನೇತ್ರದಾನ, ಆರೋಗ್ಯ ತಪಾಸಣೆ ಮುಂತಾದ ಕಾರ್ಯಕ್ರಮಗಳು ಅಂದು ನಡೆಯಲಿವೆ. ಇದಕ್ಕೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ರೋಟರಿ ಕ್ಲಬ್‌ಗಳು ಸಹಯೋಗ ವಹಿಸಲಿವೆ ಎಂದು ಅಭಿಮಾನಿಗಳ ಸಂಘದ ಅಧ್ಯಕ್ಷ ಮತ್ತು ನಿರ್ಮಾಪಕ ಸಾ.ರಾ.ಗೋವಿಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರ್ಥಿಕ ಸಂಕಷ್ಟದಲ್ಲಿರುವ ಚಿತ್ರರಂಗದ ಆರು ಜನ ಕಲಾವಿದರು, ನಿರ್ಮಾಪಕರಿಗೆ ಗೌರವಧನ ಅರ್ಪಿಸಲಾಗುವುದು. ಎಲ್.ಎನ್.ಶಾಸ್ತ್ರಿ ಮತ್ತು ತಂಡದಿಂದ ರಾಜ್‌ಕುಮಾರ್ ಅವರ ಹಳೆಯ ಚಿತ್ರಗೀತೆಗಳ `ರಸಮಂಜರಿ~ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಸುಮಾರು 40 ಸಾವಿರ ಜನರಿಗೆ ಅನ್ನದಾನ ಮಾಡಲಾಗುವುದು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಜಿಲ್ಲಾ ಮಟ್ಟದಲ್ಲಿ ರಾಜ್ ಸ್ಮರಣಾರ್ಥ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ನಿರ್ಮಾಪಕ ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.