ADVERTISEMENT

ವಾಕ್‌ಅವೇ ಪ್ರಪ್ರಥಮಆನ್‌ ಲೈನ್ ಸಿನಿಮಾ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST
ವಾಕ್‌ಅವೇ ಪ್ರಪ್ರಥಮಆನ್‌ ಲೈನ್ ಸಿನಿಮಾ
ವಾಕ್‌ಅವೇ ಪ್ರಪ್ರಥಮಆನ್‌ ಲೈನ್ ಸಿನಿಮಾ   

ಸಿನಿಮಾ ಪ್ರಿಯರಿಗೆ ಇದೀಗ ವಿಡಿಯೋ ಪೇ ವಾಲ್ ಮೂಲಕ ಚಿತ್ರ ವೀಕ್ಷಿಸುವ ಅವಕಾಶ ಒದಗಿಬಂದಿದೆ. ಶೈಲಜಾ ಗುಪ್ತಾ ನಿರ್ದೇಶಿಸಿರುವ `ವಾಕ್‌ಅವೇ~ ಚಿತ್ರ ಆನ್‌ಲೈನ್‌ನಲ್ಲಿ ತೆರೆಕಂಡಿದೆ.

`ವಾಕ್‌ಅವೇ~ ಭಾರತ ಮತ್ತು ಅಮೆರಿಕ ಮೂಲದ ಕತೆಯಾಗಿದ್ದು, ಇಂಗ್ಲಿಷ್ ಭಾಷೆಯಲ್ಲಿ ಚಿತ್ರಿಸಲಾಗಿದೆ. ನ್ಯೂಯಾರ್ಕ್ ನಗರದಲ್ಲಿನ ಯುವ ಉದ್ಯೋಗಿಗಳ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿರುವ ಈ ಸಿನಿಮಾ ನಾಲ್ಕು ದಂಪತಿಗಳ ಸುತ್ತ ಹೆಣೆದ ಕತೆಯಾಗಿಯೂ ಗೋಚರಿಸುತ್ತದೆ.

ಅಂತರರಾಷ್ಟ್ರೀಯ ಸಂಸ್ಕೃತಿ ಮತ್ತು ಭಾರತದ ಸಂಸ್ಕೃತಿಯ ನಡುವಣ ವ್ಯತ್ಯಾಸವನ್ನು, ಸಂಬಂಧಗಳ ಸೂಕ್ಷ್ಮತೆಯನ್ನು ಅತಿ ಪರಿಣಾಮಕಾರಿಯಾಗಿ ವಾಕ್‌ಅವೇ ಬಿಂಬಿಸಿದೆ ಎಂದು ಚಿತ್ರ ನಿರ್ಮಾಣ ತಂಡ ಹೇಳಿಕೊಂಡಿದೆ.

ಮನು ನಾರಾಯಣ್, ಸಾಮ್ರಾಟ್ ಚಕ್ರವರ್ತಿ, ಮನೀಷ್ ದಯಾಳ್, ಸಂಜೀವ್ ಜವೇರಿ, ದೀಪ್ತಿ ಗುಪ್ತಾ, ಕೆರಿ ಅನ್ನಾ ಜೇಮ್ಸ, ಪಲ್ಲವಿ ಶಾರದಾ, ಆಮಿಶೇಥ್ ಇವರೆಲ್ಲರೂ ಚಿತ್ರದಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಈಗಾಗಲೇ ಅಂತರರಾಷ್ಟ್ರೀಯ ಮಾಧ್ಯಮಗಳಿಂದ ಮೆಚ್ಚುಗೆ ಗಳಿಸಿಕೊಂಡಿವೆ ಎಂದಿದೆ ಸಿನಿಮಾ ತಂಡ.

ಕಳೆದ ಎರಡು ವರ್ಷಗಳಿಂದ ಈ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿರುವ ನಿರ್ದೇಶಕಿ ಶೈಲಜಾ ಗುಪ್ತಾ, `ಈ ಸಿನಿಮಾ ನಿರ್ಮಾಣ ಹಂತದಲ್ಲಿ ನಾನು ಸಾಕಷ್ಟು ವಿಷಯಗಳನ್ನು ಕಲಿತುಕೊಂಡೆ. ಈ ನಡುವಿನ ಪಯಣ ಅಷ್ಟು ಸುಲಭವಾಗಿರಲಿಲ್ಲ. ಆದರೆ ನನ್ನ ತಂಡ ನನ್ನೊಂದಿಗಿತ್ತು. ಭಾರತದ ಯುವನಿರ್ದೇಶಕರೂ ಇದರಿಂದ ಸ್ಫೂರ್ತಿ ಪಡೆಯಲಿ~ ಎಂದು ಸಂತಸ ಹಂಚಿಕೊಂಡರು.

`ಶಾರುಖ್ ಖಾನ್ ನನ್ನ ಕನಸುಗಳನ್ನು ನನಸಾಗಿಸಿಕೊಳ್ಳಲು ಪ್ರೋತ್ಸಾಹ ನೀಡಿದರು. ತಮ್ಮ ಹಲವು ಆಲೋಚನೆಗಳನ್ನು ಹಂಚಿಕೊಂಡರು. ಶಾರುಖ್ ಈ ಚಿತ್ರ ನೋಡಿ ತುಂಬಾ ಸಂತೋಷಪಟ್ಟಿದ್ದಾರೆ. ಎಲ್ಲಾ ವಿಷಯಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿರುವುದನ್ನು ಮನಸಾರೆ ಮೆಚ್ಚಿದರು~ ಎಂದು ಶೈಲಜಾ ಭಾವುಕರಾಗುತ್ತಾರೆ.

ವಾಕ್‌ಅವೇ ಚಿತ್ರದಲ್ಲಿ ಎಂಟು ಹಾಡುಗಳು ಇಂಗ್ಲಿಷ್, ಫ್ರೆಂಚ್, ಹಿಂದಿ, ಮಾರ್ವಾಡಿ, ತಮಿಳು ಭಾಷೆಯಲ್ಲಿವೆ. ಚಿತ್ರಕ್ಕೆ ಸಂಗೀತವನ್ನು ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ವಿಶಾಲ್, ಶೇಖರ್, ಮನು ನಾರಾಯಣ್, ರಾಮ್ ಸಂಪತ್, ಸಾಗರ್ ದೇಸಾಯಿ, ಖುಷಿ ಮಿಸ್ಟ್ರಿ ಮತ್ತು ಸಾಮ್ರಾಟ್ ಚಕ್ರವರ್ತಿ ಸಂಗೀತ ಸಂಯೋಜನೆಯಲ್ಲಿ ಭಾಗಿಯಾಗಿದ್ದಾರೆ. ಸ್ಲಂ ಡಾಗ್ ಮಿಲಿಯನೇರ್ ಖ್ಯಾತಿಯ ರಸಲ್ ಪೂಕುಟಿಯಾ ಶಬ್ದ ಸಂಯೋಜನೆ ಚಿತ್ರಕ್ಕಿದೆ.

ರೆಡ್ ಚಿಲ್ಲೆಸ್ ಎಂಟರ್‌ಟೇನ್‌ಮೆಂಟ್‌ನಲ್ಲಿ ವಾಕ್‌ಅವೇ ಚಿತ್ರದ ಸಂಕಲನ ಮತ್ತು ಶಬ್ದ ಸಂಯೋಜನೆ ನಡೆದಿದೆ. ವಿಡಿಯೋ ಪೇವಾಲ್ ಮೂಲಕ ಬಿಡುಗಡೆಗೊಳ್ಳುತ್ತಿರುವ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ `ವಾಕ್‌ಅವೇ~ ಪಾತ್ರವಾಗಿದೆ.

ಈ ಚಿತ್ರವನ್ನು ವೆಬ್‌ಸೈಟ್ ಮೂಲಕ 150 ರೂಗೆ ವೀಕ್ಷಿಸಬಹುದು. www.walkawaymovie.com ನಲ್ಲಿ ಇಲ್ಲವೇ  facebook.com/walkawaymovies ಮೂಲಕ ನೋಡಬಹುದು. ಚಿತ್ರದ ಹಾಡನ್ನು ಆಂಡ್ರಾಯ್ಡ ಮಾರ್ಕೆಟ್ ಪ್ಲಸ್ ಮತ್ತು ಐಟ್ಯೂನ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಒಮ್ಮೆ ಹಣ ಪಾವತಿಸಿದರೆ 24 ಗಂಟೆಗಳಲ್ಲಿ ಯಾವಾಗ ಬೇಕಾದರೂ ವೀಕ್ಷಿಸಬಹುದು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.