ADVERTISEMENT

ವಿಶೇಷ ಮಕ್ಕಳಿಗೆ ಟರ್ಟಲ್ ಆಸರೆ

ಅನುಪಮಾ ಫಾಸಿ
Published 18 ಜೂನ್ 2012, 19:30 IST
Last Updated 18 ಜೂನ್ 2012, 19:30 IST
ವಿಶೇಷ ಮಕ್ಕಳಿಗೆ ಟರ್ಟಲ್ ಆಸರೆ
ವಿಶೇಷ ಮಕ್ಕಳಿಗೆ ಟರ್ಟಲ್ ಆಸರೆ   

ಮಗ `ಅಮ್ಮ~ ಎಂದು ಬಾಯ್ತುಂಬಾ ಕೂಗಲಿ ಎಂಬ ಆಸೆ ಕೈಗೂಡುವುದಿಲ್ಲ ಎಂದು ತಿಳಿದ ಆಕೆಗೆ ಬದುಕೇ ಬೇಡವೆನ್ನುವಷ್ಟು ನಿರಾಶೆ... ಏಕೆಂದರೆ, ಮಗ ಅಮ್ಮ ಎಂದು ಕರೆಯದ, ತನ್ನ ಕೆಲಸವನ್ನು ಸ್ವತಃ ತಾನು ಮಾಡಿಕೊಳ್ಳಲು ಆಗದಿರುವ ಬುದ್ಧಿಮಾಂದ್ಯ (ವಿಶೇಷ ಮಗು)...

ಇನ್ನೊಬ್ಬ ಅಮ್ಮನಿಗೆ ಮಗಳ ಬಗ್ಗೆ ತುಂಬಾ ನಿರೀಕ್ಷೆ. ಅವಳನ್ನು ವೈದ್ಯೆ ಮಾಡಬೇಕೆಂಬ ಮಹದಾಸೆ. ಆದರೆ, ಮಗಳು ಕಲಿಕೆಯಲ್ಲಿ ಹಿಂದು. ಇದು ಅಮ್ಮನಿಗೆ ನುಂಗಲಾರದ ತುತ್ತು. ಇದಕ್ಕಾಗಿ ಮಗಳು ತಿಂದ ಏಟುಗಳಿಗೆ ಲೆಕ್ಕವಿಲ್ಲ.

ಇಂತಹ ಸಾವಿರಾರು ಮಕ್ಕಳ ತಾಯಂದಿರಿಗೆ ಪರಿಹಾರವೆನ್ನುವಂತೆ ವಿಶೇಷ ನ್ಯೂನತೆಯುಳ್ಳ ಮಕ್ಕಳು ಮತ್ತು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ  ನಗರದ ಬನ್ನೇರುಘಟ್ಟ ರಸ್ತೆಯಲ್ಲಿ ವಿಶೇಷ ಶಾಲೆಯನ್ನು ತೆರೆಯಲಾಗಿದೆ.

ADVERTISEMENT

ಎಲ್ಲಾ ಮಕ್ಕಳು ಕಲಿಯಲು ಸಮರ್ಥರು ಮತ್ತು ಅವರು ಕೂಡ ಹೆಮ್ಮೆಯಿಂದ ಜೀವನ ನಡೆಸಬಹುದು ಎಂಬ ಧ್ಯೇಯದಿಂದ ರೇಣುಕಾ ಬುತಾಲಿ `ಟರ್ಟಲ್~ ಸಂಸ್ಥೆ ಆರಂಭಿಸಿದ್ದಾರೆ.
ಪ್ರತಿಯೊಂದು ಮಗುವಿಗೆ ಕಲಿಕಾ ದೃಷ್ಟಿಯಿಂದ ಭಿನ್ನವಾದ ದೃಷ್ಟಿಕೋನವಿರುತ್ತದೆ. ವಿಶೇಷ ನ್ಯೂನತೆಯುಳ್ಳ ಮಕ್ಕಳನ್ನು ಪೋಷಕರು ಸಹ ಕಡೆಗಣಿಸುತ್ತಾರೆ. ಅವರಿಗೆ ನೀಡಬೇಕಾದ ಪ್ರಾಮಾಣಿಕವಾದ ಪ್ರೀತಿಯನ್ನು ನೀಡಲಾಗುವುದಿಲ್ಲ.

ಇದರಿಂದ ಮೊದಲೇ ನ್ಯೂನತೆಯುಳ್ಳ ಮಕ್ಕಳು ತಮ್ಮ ಸುತ್ತಲಿನ ಪರಿಸರದಿಂದ ಪ್ರಭಾವಿತರಾಗಿ ಅಲ್ಲಿಂದಲೂ ಸುಧಾರಣೆಯ ಮಟ್ಟವನ್ನು ಮುಟ್ಟುವುದು ಸಾಧ್ಯವಾಗುವುದಿಲ್ಲ.
ವಿಶೇಷ ನ್ಯೂನತೆಯುಳ್ಳ ಮಕ್ಕಳನ್ನು ಗುರುತಿಸಿ ಅವರಿಗೆ ಅವರದೇ ಆದ ರೀತಿಯಲ್ಲಿ ತರಬೇತಿ ನೀಡುವುದು ಟರ್ಟಲ್ ಸಂಸ್ಥೆಯ ರೇಣುಕಾ ಬುತಾಲಿಯವರ ಆಶಯ. ಅದಕ್ಕಾಗಿ ಅವರು ಕೆಲವು ನಿಯಮಗಳನ್ನು ಹಾಕಿಕೊಂಡಿದ್ದಾರೆ.

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಶಿಕ್ಷಣವನ್ನು ನೀಡುವುದರೊಂದಿಗೆ ಎಲ್ಲ ಮಕ್ಕಳು ಕಲಿಯಲು ಸಮರ್ಥರು ಎಂಬುದನ್ನು ಸಾಬೀತು ಮಾಡಲು ಟರ್ಟಲ್ ಶಾಲೆ ಶ್ರಮಿಸುತ್ತದೆ.
`ಸಂಸ್ಥೆಯು ವಿಶೇಷವಾದ ಗಮನ ಬಯಸುವ ವಿದ್ಯಾರ್ಥಿಗಳಿಗೆ ವಿಶೇಷವಾದ ಸೌಲಭ್ಯವನ್ನು ನೀಡಿ ಶಿಕ್ಷಣವನ್ನು ಪರಿಣಾಮಕಾರಿಯಾಗಿಸಲು ಪ್ರಯತ್ನವನ್ನು ನಡೆಸುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ, ಅಸಮರ್ಥ, ವರ್ತನಾ ದೋಷವುಳ್ಳವರಿಗೆ ತರಬೇತಿ ಮತ್ತು ಭಾವನಾತ್ಮಕ ತೊಂದರೆಯುಳ್ಳ ಮಕ್ಕಳಿಗೆ ಬೇರೆಯವರ ಜೊತೆ ಹೊಂದಿಕೊಳ್ಳುವಂತೆ ತರಬೇತಿ ನೀಡಲಾಗುವುದು~ ಎಂದು ಹೇಳಿದರು.

`ಪೋಷಕರಿಗೂ ಮಕ್ಕಳ ಜತೆ ಹೊಂದಿಕೊಳ್ಳುವಂತೆ ಸಹಾಯ ಮಾಡುವುದು, ಇವರಿಗೆ ತಕ್ಕಂತೆ ರೂಪುರೇಷೆಗಳನ್ನು ಮಾಡುವುದರ ಮೂಲಕ ಮಕ್ಕಳ ಬೆಳವಣಿಗೆಗೆ ಹಾಗೂ ಅಭಿವೃದ್ಧಿಗೆ ಒಂದು ಯೋಜನೆ ತಯಾರಿಸಿ ತರಬೇತಿ ನೀಡಲಾಗುವುದು~ ಎಂದು ರೇಣುಕಾ ಹೇಳಿದರು.

ವಿಶೇಷ ಮಕ್ಕಳನ್ನು ಗುರುತಿಸುವುದು ಹಾಗೂ ತರಬೇತಿ ನೀಡುವುದು, ಕಲಿಕಾ ಅಸಮರ್ಥತೆ ಹಾಗೂ ವರ್ತನೆ ದೋಷದ ಬಗ್ಗೆ ವಾರ್ಷಿಕ ಪಟ್ಟಿ ತಯಾರಿಸುವುದು. ಪಠ್ಯಕ್ರಮದಲ್ಲಿ ಬದಲಾವಣೆ ಮಾಡುವುದು ಹೀಗೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಿ ಮಕ್ಕಳಿಗೆ ತರಬೇತಿ ನೀಡುವುದು ಅಲ್ಲಿನವೈಶಿಷ್ಟ್ಯ.

`ಮಕ್ಕಳ ತಪಾಸಣೆ ನಡೆಸಿ ಅವರ ಮಾನಸಿಕ ಸ್ಥಿತಿ ಮತ್ತು ಕಲಿಕಾ ಆಧಾರದ ಮೇಲೆ ಶುಲ್ಕವನ್ನು ಪಡೆಯಲಾಗುವುದು. ಇಷ್ಟೇ ಹಣವೆಂದು ನಿಖರವಾಗಿ ಹೇಳಲಾಗುವುದಿಲ್ಲ~ ಎನ್ನುತ್ತಾರೆ ಅವರು.

`ನನಗೆ ಬೆಂಗಳೂರು ಶಾಲೆಗಳಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ ಅನುಭವವಿದೆ. ವಿಶೇಷ ಮಕ್ಕಳು ಮತ್ತು ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಷ್ಟವನ್ನು ನಾನು ನೋಡಿದ್ದೇನೆ. ಅಂತಹ ಮಕ್ಕಳಿಗಾಗಿ ಏನಾದರೂ ಮಾಡಬೇಕೆಂಬ ಮಹದಾಸೆಯಿಂದ ಟರ್ಟಲ್ಸ್  ಶಾಲೆ ಆರಂಭವಾಗಿದೆ. ಇದು ಮಕ್ಕಳನ್ನು ಮಕ್ಕಳಂತೆ ಕಾಣುವ ನಮ್ಮ ಒಂದು ಪ್ರಯತ್ನವಾಗಿದೆಯಷ್ಟೆ~ ಎನ್ನುವ ರೇಣುಕಾ ಬುತಾಲಿ ಅವರದ್ದು ಸಮಾಜಮುಖಿ ಯೋಚನೆ. 

ಹೆಚ್ಚಿನ ಮಾಹಿತಿಗೆ: 9886823077

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.