ಸಂಚಾರಿ ಥಿಯೇಟರ್ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಗುರುವಾರ (ಮಾ.8) ಕವಯತ್ರಿ `ವೈದೇಹಿ~ ಅವರ ಕವನಗಳ ರಂಗರೂಪಕ `ವ್ಯಾನಿಟಿ ಬ್ಯಾಗ್~ ಪ್ರಸ್ತುತ ಪಡಿಸಲಿದೆ. ರಂಗರೂಪಕವನ್ನು ಮಂಗಳಾ ನಿರ್ದೇಶನ ಮಾಡಿದ್ದು, ಅರುಣ್ ಸಾಗರ್ ರಂಗವಿನ್ಯಾಸ, ಗಜಾನನ ಟಿ.ನಾಯ್ಕ ಸಂಗೀತ ನೀಡಿದ್ದಾರೆ.
ವೈದೇಹಿ ಕನ್ನಡದ ಪ್ರಮುಖ ಕವಯತ್ರಿ. ಬುದ್ಧಿ ಭಾವದ ಅಪೂರ್ವ ಸಂಗಮವಾದ ವೈದೇಹಿ ಅವರ ಕವನಗಳ ಕೇಂದ್ರ ಬಿಂದು ಹೆಣ್ಣು. ಸಂಚಾರಿ ಥಿಯೇಟರ್ ಪ್ರಯೋಗದ `ವ್ಯಾನಿಟಿ ಬ್ಯಾಗ್~ ವೈದೇಹಿ ಅವರ ಕಾವ್ಯಲೋಕದ ವಿವಿಧ ನೆಲೆಗಳನ್ನು ಅನಾವರಣಗೊಳಿಸುತ್ತದೆ.
ಇದು ಹೆಣ್ಣಿನ ಚಿತ್ತ ಚಿತ್ತಾರದ ಅನೂಹ್ಯ ಸಂಗತಿಗಳನ್ನು, ಹೆಣ್ಣಿಗೆ ಮಾತ್ರವೇ ಅನುಭವಗಮ್ಯವಾಗುವ ಹಲವು ಅಮೂರ್ತ ಪ್ರಸಂಗಗಳನ್ನು, ಅವಳ ಭಾವ ಪ್ರಪಂಚದ ಹಲವು ಸೂಕ್ಷ್ಮ ನೇಯ್ಗೆಗಳನ್ನು ದೃಶ್ಯ ರೂಪಕದಲ್ಲಿ ಕಟ್ಟಿಕೊಡುತ್ತದೆ.
`ನೋಡಬಾರದು ಚೀಲದೊಳಗನು~ ಎನ್ನುವ ವೈದೇಹಿ ಅವರ ಮಾತನ್ನೇ ವಿಸ್ತರಿಸುತ್ತಾ, `ನೋಡಲಾಗದ~ ಆ ಬ್ಯಾಗಿನ ವ್ಯಾನಿಟಿಯ ಒಳಗಿರುವ ವಸ್ತು ಪ್ರಪಂಚವನ್ನು ವೈದೇಹಿಯವರ ಕಾವ್ಯಲೋಕದ ಹಲವು ಪ್ರಸಂಗಗಳ ಮೂಲಕ ಪ್ರಸ್ತುತಪಡಿಸಲಾಗುತ್ತದೆ.
ವ್ಯಾನಿಟಿ ಬ್ಯಾಗ್ ರೂಪಕದಲ್ಲಿ ಹೆಣ್ಣಿನ ಅಂತರಂಗದ ಒಳನೋಟಗಳಿಗೆ ಸರ್ಚ್‌ಲೈಟ್ ಬೀರಿ, ಹೆಣ್ಣಿನ ವಿಶ್ವರೂಪ ದರ್ಶನ ಮಾಡಿಸುವ ವೈದೇಹಿಯವರ ಪ್ರಯತ್ನವನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ಮಹದಾಸೆ ಸಂಚಾರಿ ಥಿಯೇಟರ್‌ನದ್ದು.
ವ್ಯಾನಿಟಿ ಬ್ಯಾಗ್ ಎಂಬ ಈ ಸ್ತ್ರೀಲೋಕದ ಕ್ಯಾನ್‌ವಾಸ್‌ನಲ್ಲಿ ಹೆಣ್ಣಿನ ಅಂತರಂಗದ ಪಿಸುಮಾತು, ಮುತ್ತಿನಂತಹ ಗೀಚು ಕೊಟ್ಟು ಮಾಯವಾದವನು ಮಾಡಿದ ಗಾಯದ ನೋವು, ನಿತ್ಯದ ಅನ್ನಕ್ಕಾಗಿ ಬೆರಣಿ ತಟ್ಟುವ ಹುಡುಗಿ, ಕಷ್ಟದ ಬಾಲೆಯ ಎದೆನೋವು, ತನ್ನದೆನ್ನುವ ಆಸ್ತಿಯೇ ಇರದ ಹೆಣ್ಣು ಬರೆವ ಉಯಿಲು, ತ್ರಿಲೋಕ ಸಂಚಾರಿಯಾದ ಶಿವಗೆ ಸೇವೆ ಮಾಡುತ್ತಲೇ ನಾನೆಷ್ಟನೆಯ ನಾರಿ? ಎಂದು ಲೇವಡಿ ಮಾಡುತ್ತಾ ಬಿಕ್ಕುವ ಗೌರಿಯ ತಲ್ಲಣ,
ಒಂದಕೊಂದಕೆ ಅರ್ಥಾರ್ಥವಿಲ್ಲದೆಯೂ ಅರ್ಥವಾಗದ ಭಾಷೆಯ ನಡುವೆಯೂ ಜೀವಿಸುವ ಜೋಡಿಗಳ ವಾಸ್ತವೆ- ಒಟ್ಟಾರೆಯಾಗಿ ನಿತ್ಯ ಮೂಡುತ ನಿತ್ಯ ಮುಳುಗುತ ಕಷ್ಟ ಸುಖಗಳ ಬೆಟ್ಟ ಕಡಲಲಿ ನಿತ್ಯ ಸುಡುತಿಹ ಸೂರ್ಯಳಾಗಿ ಪ್ರಜ್ವಲಿಸುತ್ತಿರುವ ಹೆಣ್ಣಿನ ಮನಸ್ಸಿನ ಒಳಲೋಕವನ್ನು ಪ್ರತಿನಿಧಿಸುವ ರೂಪಕವಾದ `ವ್ಯಾನಿಟಿ ಬ್ಯಾಗ್~ನಲ್ಲಿ ವೈದೇಹಿಯವರ ಎಲ್ಲ ಪ್ರಮುಖ ಕವನಗಳನ್ನು ಅಡಗಿಸಿಟ್ಟಿರುವುದು ಈ ರಂಗಪ್ರಯೋಗದ ವಿಶೇಷ.
ಸ್ಥಳ: ರಂಗ ಶಂಕರ, ಸಂಜೆ 7:30. ಮಾಹಿತಿಗೆ ಸಂಪರ್ಕಿಸಿ : 93436 55466
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.