ADVERTISEMENT

ಸಮಗ್ರಾಭಿವೃದ್ಧಿಗೆ ಕೌಶಲದ ಪೂರಣ...

ಅಭಿಲಾಷ ಬಿ.ಸಿ.
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
ಸಮಗ್ರಾಭಿವೃದ್ದಿಯಲ್ಲಿ ತರಬೇತಿ ನಿರತ ಅಭ್ಯರ್ಥಿಗಳು
ಸಮಗ್ರಾಭಿವೃದ್ದಿಯಲ್ಲಿ ತರಬೇತಿ ನಿರತ ಅಭ್ಯರ್ಥಿಗಳು   

‘ಉದ್ಯೋಗ ಹುಡುಕಬೇಡಿ, ಉದ್ಯೋಗ ಸೃಷ್ಟಿಸಿ’ ಎಂಬ ಘೋಷವಾಕ್ಯದೊಂದಿಗೆ ಆಕಾರ್ ಮ್ಯಾಕ್ಸ್‌ ಸಂಸ್ಥೆ ‘ಸಮಗ್ರಾಭಿವೃದ್ಧಿ’ ಎಂಬ ತರಬೇತಿ ಕಾರ್ಯಕ್ರಮ ಪರಿಚಯಿಸಿದೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳ ಬಯಸುವವರಿಗೆ ಉಚಿತ ಸಲಹೆ, ವಿವಿಧ ತಂತ್ರಾಶಗಳ ಕುರಿತು ಸಮಗ್ರ ತರಬೇತಿ ನೀಡುವುದೇ ಕಾರ್ಯಕ್ರಮದ ಉದ್ದೇಶ.

ಹಾಸನ ಮೂಲಕ ಸ್ನೇಹಾ ಸಂಸ್ಥೆಯ ಮಾಲಕಿ. ಬಡತನದಲ್ಲಿ ಶಿಕ್ಷಣ ಪೂರೈಸಿದ ಸ್ನೇಹಾ, ಅನೇಕ ಕಡೆ ಉದ್ಯೋಗ ಹುಡುಕಾಡಿದರು. ಉದ್ಯೋಗ ಹುಡುಕುವ ಕಷ್ಟವನ್ನು ಸ್ವತಃ ಬಲ್ಲರು. ಆ ಕಷ್ಟ ಬೇರೆಯವರನ್ನು ಕಾಡದಿರಲಿ ಎಂಬ ಕಾರಣಕ್ಕಾಗಿ ಉದ್ಯೋಗಾಸಕ್ತರ ಕೌಶಲ ಅಭಿವೃದ್ಧಿಗೆ ‘ಸಮಗ್ರಾಭಿವೃದ್ಧಿ’ ಮೂಲಕ ಸಲಹೆ ನೀಡುತ್ತಿದ್ದಾರೆ.

ಕನ್ನಡ ಮಾಧ್ಯಮಗಳಲ್ಲಿ ಕಲಿತಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ ಬಿಂಬಿಸಲು ಇಂಗ್ಲಿಷ್ ತರಬೇತಿ ಕೊಡುತ್ತಾರೆ. 75 ಅಭ್ಯರ್ಥಿಗಳು ಕಲಿಯುತ್ತಿದ್ದಾರೆ. ವೆಬ್‌ಡಿಸೈನ್ ಹಾಗೂ ಅಭಿವೃದ್ಧಿ, ಒರೇಕಲ್, ಲಿನಕ್ಸ್‌ ಅಥವಾ ಯುನಿಕ್ಸ್‌, ಡಿಜಿಟಲ್ ಮಾರ್ಕೆಟಿಂಗ್, ಮಾನವ ಸಂಪನ್ಮೂಲ, ಹಾರ್ಡ್‌ವೇರ್‌ ಮತ್ತು ಮಾರ್ಕೆಟಿಂಗ್‌, ಸಂಪರ್ಕಜಾಲ, ಮಾರಾಟ ಮತ್ತು ಮಾರುಕಟ್ಟೆ ವಿಷಯವಾಗಿ ತರಬೇತಿ ನೀಡಲಾಗುತ್ತಿದೆ.

ADVERTISEMENT

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕನಿಷ್ಟ ವಿದ್ಯಾರ್ಹತೆ ಎಸ್‌.ಎಸ್‌.ಎಲ್‌.ಸಿ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ತರಬೇತಿ ನೀಡಲಾಗುತ್ತದೆ. ಇದು 6 ತಿಂಗಳ ಅವಧಿಯ ಕೋರ್ಸ್‌ ಆಗಿದ್ದು, ಆಸಕ್ತರು ಒಂದು ನಿರ್ದಿಷ್ಟ ವಿಷಯವನ್ನೂ ಆಯ್ಕೆಮಾಡಿಕೊಂಡು ತರಬೇತಿ ಪಡೆದುಕೊಳ್ಳಬಹುದು. ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ತರಗತಿಗಳು ನಡೆಯುತ್ತವೆ.

ಸಮಗ್ರಾಭಿವೃದ್ಧಿ ಕಾರ್ಯಕ್ರಮಕ್ಕಾಗಿಯೇ ಸ್ನೇಹಾ ಅವರು ವಿವಿಧ ವಿಷಯಗಳಲ್ಲಿ ಪರಿಣಿತಿ ಪಡೆದಿರುವ 4 ಜನ ಸಂಪನ್ಮೂಲ ವ್ಯಕ್ತಿಗಳನ್ನು ಸಂಸ್ಥೆಗೆ ನೇಮಿಸಿಕೊಂಡಿದ್ದಾರೆ. ಉಳಿದಂತೆ ಆಕಾರ್ ಮ್ಯಾಕ್ಸ್‌ ಕಂಪೆನಿಯಲ್ಲಿನ ಹಿರಿಯ ಉದ್ಯೋಗಿಗಳು ಪ್ರಾಯೋಗಿಕ ತರಗತಿಗಳನ್ನು ನೀಡುತ್ತಾರೆ.

ಸಾಫ್ಟ್‌ವೇರ್ ಕಂಪೆನಿಯೊಂದು ಯೋಜನೆ ಕೈಗೆತ್ತಿಕೊಂಡಾಗ ಆರಂಭದಿಂದ ಅಂತ್ಯದವರೆಗೂ ವಿವಿಧ ಹಂತಗಳನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಪ್ರಾಯೋಗಿಕವಾಗಿ ತಿಳಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.