ADVERTISEMENT

ಸೋದರಿಯರ ರಂಗಪ್ರವೇಶ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST
ಸೋದರಿಯರ ರಂಗಪ್ರವೇಶ
ಸೋದರಿಯರ ರಂಗಪ್ರವೇಶ   

ಬುಧವಾರ ನಿಖಿಲಾ ಮತ್ತು ಅಖಿಲಾ ಸಹೋದರಿಯರ ರಂಗಪ್ರವೇಶ. ಅತಿಥಿಗಳು: ಎಸ್.ಐ. ಭಾವಿಕಟ್ಟಿ, ಡಾ. ಸೂರ್ಯಪ್ರಸಾದ್, ಎಚ್.ಎಂ. ರೇವಣ್ಣ, ಪ್ರಸನ್ನ ಶರ್ಮಾ, ಶ್ಯಾಮಲಾ ಜಾಗೀರ್‌ದಾರ್.

ಈ ಸೋದರಿಯರು ಕೆ. ಮಧುಸೂದನ್ ರಾವ್ ಮತ್ತು ದಿವಂಗತ ಉಷಾ ರಾವ್ ಅವರ ಪುತ್ರಿಯರು. ಯಲಹಂಕದ ಆರಾಧನಾ ಸ್ಕೂಲ್ ಆಫ್ ಡಾನ್ಸ್‌ನ ವಿದ್ಯಾರ್ಥಿಗಳು. ವಿದ್ವಾನ್ ನಾಗಭೂಷಣ ಇವರಿಬ್ಬರ ಗುರು.

24 ವರ್ಷದ ನಿಖಿಲಾ ಹತ್ತು ವರ್ಷಗಳಿಂದ ಭರತನಾಟ್ಯ ಕಲಿಯುತ್ತಿದ್ದಾರೆ. ಎಂಜಿನಿಯರಿಂಗ್ ಮುಗಿಸಿ ಟಿಸಿಎಸ್‌ನಲ್ಲಿ ಉದ್ಯೋಗ ಮಾಡುತ್ತಿರುವ ಈಕೆ ಎಳೆಯರಿಗೆ ನೃತ್ಯ ತರಬೇತಿಯನ್ನೂ ನೀಡುತ್ತಿದ್ದಾರೆ.

22 ವರ್ಷದ ಅಖಿಲಾ 10ರ ಎಳವೆಯಲ್ಲೇ ಅಕ್ಕನ ಜತೆ ನೃತ್ಯ ಕಲಿಯಲು ಆರಂಭಿಸಿದವರು. ಸದ್ಯ ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೋಮಾ ಮುಗಿಸಿದ್ದಾರೆ. ಭರತನಾಟ್ಯವೂ ಸೇರಿದಂತೆ ನೃತ್ಯದ ಕುರಿತು ಅಪಾರವಾಗಿ ಓದಿಕೊಂಡಿದ್ದಾರೆ. ನೃತ್ಯ ಮಾಡುವಾಗ ಪ್ರಾಯೋಗಿಕ ಜ್ಞಾನದ ಜೊತೆ ನೃತ್ಯದ ಸೂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ಉತ್ಕೃಷ್ಟ ಪ್ರದರ್ಶನ ನೀಡುತ್ತಾರೆ. ಅವರ ಮೈಮನಗಳಲ್ಲಿ ನೃತ್ಯವೇ ತುಂಬಿದೆ.

ಹಂಪಿ ಉತ್ಸವ, ಕಿತ್ತೂರು ಉತ್ಸವ, ಕನ್ನಡ ರಾಜ್ಯೋತ್ಸವ, ಚಿತ್ರದುರ್ಗದಲ್ಲಿ ನಡೆದ ನೃತ್ಯ ರೂಪಕೋತ್ಸವ ಸೇರಿದಂತೆ ಹಲವು ವೇದಿಕೆಗಳಲ್ಲಿ ಈ  ಸಹೋದರಿಯರು ಕಾರ್ಯಕ್ರಮ ನೀಡಿದ್ದಾರೆ. ಹಲವು ಪ್ರಶಸ್ತಿ, ಪುರಸ್ಕಾರಗಳು ಅವರನ್ನು ಅರಸಿಕೊಂಡು ಬಂದಿವೆ.

ಕಲಾಕ್ಷೇತ್ರದ ಶೈಲಿಯ ನೃತ್ಯಕ್ಕೆ ಹೆಸರಾದ ಉಷಾ ದಾತಾರ್ ಮತ್ತು ಗೀತಾ ಅನಂತನಾರಾಯಣನ್ ಗರಡಿಯಲ್ಲಿ ತಯಾರಾದ ಗುರು ವಿದ್ವಾನ್ ನಾಗಭೂಷಣ, ಭರತನಾಟ್ಯ ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಹೆಸರು. ಯಲಹಂಕದಲ್ಲಿ ಆರಾಧನಾ ನೃತ್ಯ ಶಾಲೆ ಸ್ಥಾಪಿಸಿ ಎರಡು ದಶಕಗಳಿಂದ ಯುವ ಪ್ರತಿಭೆಗಳಿಗೆ ತಮ್ಮ ಜ್ಞಾನ ಧಾರೆ ಎರೆಯುತ್ತ ಬಂದಿದ್ದಾರೆ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ.  ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.