ADVERTISEMENT

ಹೂಕಟ್ಟುವ ಕೈಗಳು

ಬಸ್ ಕತೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:59 IST
Last Updated 11 ಜೂನ್ 2013, 19:59 IST

ಎದುರಲ್ಲೊಂದು ಬುಟ್ಟಿ. ಬಿಡಿ ಹೂಗಳು ಒಂದೊಂದಾಗಿ ಖಾಲಿಯಾಗುತ್ತಿದ್ದವು. ದಾರ ಹಿಡಿದ ಬಿರಿದ ಬೆರಳುಗಳಿಗೆ ಬಿಡುವಿಲ್ಲ. ಚೀಟಿಗೆ ಎಂಜಲು ಮೆತ್ತುತ್ತಾ, ಬೆರಳ ಸಂದಿಗಳಲ್ಲಿ ನೋಟುಗಳನ್ನು ಜೋಡಿಸಿಟ್ಟುಕೊಂಡು ಓಡಾಡುವಾಗ, ಅಪ್ಪಿತಪ್ಪಿ ಹೂಕಟ್ಟುವ ಅಜ್ಜಿಯ ಕಾಲುಗಳಿಗೆ ತಾಕಿದರೆ ಕಂಡಕ್ಟರ್ ನಮಸ್ಕಾರ ಮಾಡುತ್ತಿದ್ದ. ಅಜ್ಜಿ ಕೂಡ ಕಣ್ಣಿಗೊತ್ತಿಕೊಳ್ಳುತ್ತಿದ್ದರು. ಕೆ.ಆರ್.ಮಾರುಕಟ್ಟೆಯಿಂದ ನಗರದ ಹೊರವಲಯದವರೆಗೆ ಸಾಗುವ ಬಸ್ ಅಜ್ಜಿಯ ನಿತ್ಯದ ಸಂಪರ್ಕ ಸಾಧನ. ಬಸ್‌ನ ಚಾಲಕ, ಕಂಡಕ್ಟರ್‌ಗೆ ನಿತ್ಯಪ್ರಯಾಣಿಕರ ಬದುಕಿನ ವಿವರಗಳೂ ಗೊತ್ತಿದ್ದವೆನ್ನಿ.

ಆಗೀಗ ಹತ್ತುವವರು ಹೂ ಬೆಲೆ ಖಾತರಿ ಪಡಿಸಿಕೊಳ್ಳುತ್ತಾ, `ಎಷ್ಟು ಕಾಸ್ಟ್ಲಿ ಆಗಿಬಿಟ್ಟಿತು' ಎಂದು ಪೇಚಾಡಿಕೊಳ್ಳುತ್ತಿದ್ದರು. ಅಜ್ಜಿಯ ಬೆರಳುಗಳಿಗೆ ಮಾತ್ರ ಬಿಡುವಿಲ್ಲ. ಮೊಲ್ಲೆ, ಮಲ್ಲಿಗೆ, ಕಾಕಡ ಬಿಡಿ ಹೂಗಳೆಲ್ಲಾ ಬಸ್ ನಿಲ್ದಾಣಗಳು ಸಾಗುತ್ತಿದ್ದಂತೆ ಮಾಲೆಗಳಾಗತೊಡಗಿದವು. ಕೆಲವು ಮಂದಿ ಅಲ್ಲಿಯೇ ಚೌಕಾಸಿಗೆ ಇಳಿದರು. ಊರಿನವರ ಮನೆದೇವರ ಮುಟ್ಟಬೇಕಾದ ಒಂದಿಷ್ಟು ಹೂಮಾಲೆಯನ್ನು ಅಜ್ಜಿ ಮೊದಲೇ ಒದ್ದೆ ಬಟ್ಟೆಯೊಳಗೆ ಜೋಪಾನ ಮಾಡಿದರು. ಮಾಲೆ ಕಟ್ಟುವಾಗಲೇ ಅಜ್ಜಿಗೆ ಸುತ್ತಮುತ್ತಲ ಊರಿನವರು ತಂತಮ್ಮ ಕಷ್ಟ-ಸುಖಗಳನ್ನು ಹೇಳುತ್ತಿದ್ದರು. ಅಜ್ಜಿಗೂ ಹೇಳಿಕೊಳ್ಳಲು ಸಾಕಷ್ಟು ವಿಷಯವಿತ್ತು. ಅಲ್ಲೊಂದು ಹಳ್ಳಿಗರ ಮಹಿಳಾ ಲೋಕವೇ ಸೃಷ್ಟಿಯಾಗಿತ್ತೆನ್ನಿ.

ಇದ್ದಕ್ಕಿದ್ದಂತೆ ಬಸ್‌ನಲ್ಲಿ ನಿಂತಿದ್ದ ಜನರಲ್ಲಿ ಆತಂಕ. `ಚೆಕಿಂಗ್... ಚೆಕಿಂಗ್' ಎಂದು ಅನೇಕರ ನಡುವೆ ಗುಸಗುಸು ಶುರುವಾಯಿತು. ಟಿಕೆಟ್ ಕೇಳುತ್ತಾ `ಚೆಕಿಂಗ್ ಅಧಿಕಾರಿ' ಬಂದೇ ಬಿಟ್ಟರು. ಕಂಡಕ್ಟರ್ ಮೊಗದಲ್ಲೂ ಆತಂಕ. ಒಂದಿಬ್ಬರನ್ನು ಹಿಡಿದೇ ಹಾಕುವ ಹುಮ್ಮಸ್ಸಿನ ಭಾವ ಅಧಿಕಾರಿಗಳಲ್ಲಿ. ಅವರ ಪಾದಗಳು ಹೂಕಟ್ಟುವ ಅಜ್ಜಿ ಇದ್ದಲ್ಲಿಗೆ ಬೆಳೆಯಿತು. ತಮ್ಮದೇ ಲೋಕದಲ್ಲಿ ಮುಳುಗಿದ್ದ ಅಜ್ಜಿ `ಟಿಕೆಟ್' ಎಂಬ ಬೇಡಿಕೆಯ ದನಿ ಕೇಳಿದೊಡನೆ ಪೆಚ್ಚಾದರು.

`ನಾ ಎಂದೂ ಟಿಕೆಟ್ ತಕಳಾದಿಲ್ಲ' ಅಜ್ಜಿಯ ಮುಗ್ಧ ದನಿಯಲ್ಲಿ ಪ್ರಾಮಾಣಿಕತೆ ಇತ್ತು. ಕೊನೆಗೆ ಅಧಿಕಾರಿಗಳ ಕೆಂಗಣ್ಣು ಕಂಡಕ್ಟರ್ ಮೇಲೆ ಬಿದ್ದಿತು. ಬಿಲ್ಲೆ ರೂಪಾಯಿಗಳನ್ನು, ಮೆತ್ತಗಾಗಿದ್ದ ನೋಟುಗಳನ್ನು ಅಜ್ಜಿ ಜೋಡಿಸತೊಡಗಿದರು. ಎಲ್ಲವನ್ನೂ ಬೊಗಸೆಯಲ್ಲಿ ಹಾಕಿಕೊಂಡು, `ಕಂಡಕ್ಟರ್‌ನ ಏನೂ ಮಾಡ್ಬೋಡಿ. ಇದನ್ನ ತಗಂಡು ಬುಟ್ಟುಬುಡಿ' ಎಂದು ಅಂಗಲಾಚಿದರು. ಅಧಿಕಾರಿಗಳಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಜನರೂ ಅಜ್ಜಿಯ ಮುಗ್ಧತೆಗೆ ಸಾಥ್ ನೀಡಿದರು. `ಲಾಸ್ಟ್ ವಾರ್ನಿಂಗ್. ಇನ್ಮೇಲೆ ಹೀಗೆ ಮಾಡಬೇಡಿ' ಎಂದು ಅಧಿಕಾರಿಗಳು ಇಳಿದುಹೋದರು. ತೇವಗೊಂಡ ಕಣ್ಣುಗಳಿಂದ ಅಜ್ಜಿ ಕಂಡಕ್ಟರ್ ಕಡೆ ನೋಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT