ADVERTISEMENT

ಬಗೆಬಗೆ ಹವ್ಯಾಸಕ್ಕೆ ಒಂದು ವೇದಿಕೆ

ವಿದ್ಯಾಶ್ರೀ ಎಸ್.
Published 26 ಜನವರಿ 2018, 19:30 IST
Last Updated 26 ಜನವರಿ 2018, 19:30 IST
ಹವ್ಯಾಸ ಕ್ಲಬ್‌
ಹವ್ಯಾಸ ಕ್ಲಬ್‌   

ಜೀವನ ನಿರ್ವಹಣೆಗೆ ವೃತ್ತಿ ಆಯ್ಕೆಯಾದರೆ, ಮನಸ್ಸಿನ ಸಂತೋಷಕ್ಕೆ ಹವ್ಯಾಸದ ಮೊರೆ ಹೋದವರು ಹಲವರು. ಹೀಗೆ ಬಗೆಬಗೆ ಹವ್ಯಾಸ ಹೊಂದಿರುವ ಹಲವರಿಗೆ ಒಂದೆಡೆ ಸೇರುವ ಅವಕಾಶ ಕಲ್ಪಿಸಿದೆ ‘ಹವ್ಯಾಸ ಕ್ಲಬ್‌’.

ವಿಮಾನ, ಹಡಗಿನ ಮಾದರಿ, ಚಿತ್ರಕಲೆ, ಅಡುಗೆ ತರಬೇತಿ, ಶಿಲ್ಪಕಲೆ, ತ್ಯಾಜ್ಯದಿಂದ ಕಲೆ ಅರಳಿಸುವವರು, ಸೋಪು ತಯಾರಿಕೆ... ಹೀಗೆ ಬಗೆಬಗೆ ಹವ್ಯಾಸ ಹೊಂದಿರುವವರಿಗೆ ಒಂದೇ ವೇದಿಕೆ ಕಲ್ಪಿಸಿ ಹವ್ಯಾಸ ಕ್ಲಬ್‌ ಪ್ರಾರಂಭಕ್ಕೆ ಮುನ್ನುಡಿ ಬರೆದವರು ಮಹೇಂದ್ರ.

ಈ ಕ್ಲಬ್ ಮೂಲಕ ಆಸಕ್ತಿಯ ಬೆನ್ನತ್ತಿ ಹೊಸತನ್ನು ತಯಾರಿಸುವ ಉಮೇದು ಹೊಂದಿರುವ ಹಲವರು, ಅದನ್ನು ಮತ್ತೊಬ್ಬರಿಗೆ ಕಲಿಸುವ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಆಕಾಶದಲ್ಲಿ ಹಾರುವ ವಿಮಾನವನ್ನು ಬೆರಗುಗಣ್ಣಿನಿಂದ ನೋಡದೆ ಬಾಲ್ಯ ಕಳೆದವರು ಸಿಗುವುದು ಅಪರೂಪ. ವಿಮಾನ ದೊಡ್ಡವರಿಂದ ಚಿಕ್ಕಮಕ್ಕಳಿಗೂ ಕುತೂಹಲದ ವಿಷಯ. ಹೀಗೆ ವಿಮಾನದ ಅಂದಕ್ಕೆ ಬೆರಗಾಗಿ ಅದರ ಮಾದರಿ ತಯಾರಿಸುವ ಪರಿಣತಿ ಪಡೆದವರು ಇವರು.

ಬಾಲ್ಯದಿಂದಲೂ ಯಾವುದಾದರೊಂದು ಹವ್ಯಾಸದಲ್ಲಿ ತೊಡಗಿಸಿಕೊಂಡು ಮನಸಿನ ನಿರಾಳತೆಯನ್ನು ಕಂಡುಕೊಳ್ಳುತ್ತಿದ್ದರು. ಚಿತ್ರ ಬಿಡಿಸುವುದು ಇವರ ಇಷ್ಟದ ಆಸಕ್ತಿಗಳಲ್ಲೊಂದು. ಎನ್‌ಸಿಸಿಯಲ್ಲಿದ್ದ ಇವರು ಅಲ್ಲಿಯೇ ವಿಮಾನ ಮಾದರಿ ತಯಾರಿಸುವುದನ್ನು ಕಲಿತರು. ವೈಮಾನಿಕ ತಾಂತ್ರಿಕತೆ ಬಗ್ಗೆ ಹೆಚ್ಚಿನ ಜ್ಞಾನ ಕಲ್ಪಿಸುವ ಈ ಕೌಶಲ ಇವರನ್ನು ಬಹುವಾಗಿ ಸೆಳೆಯಿತು. ಕಲಿತ ವಿದ್ಯೆ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಇದರಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಿ ಬಗೆಬಗೆ ಮಾದರಿ ತಯಾರಿಸತೊಡಗಿದರು. ಇವರ ಈ ಕೆಲಸಕ್ಕೆ ಇವರ ಸ್ನೇಹಿತ ಮಹೇಶ್‌ ಕೂಡ ಜೊತೆಯಾದರು.

ಇವರಿಬ್ಬರು ತಯಾರಿಸುತ್ತಿದ್ದ ಒಂದಕ್ಕಿಂತ ಒಂದು ಭಿನ್ನ ವಿಭಿನ್ನವಾಗಿರುವ ಮಾದರಿಗಳನ್ನು ಕಂಡ ಹಲವರು ತಮಗೂ ಈ ಕಲೆಯನ್ನು ಕಲಿಸುವಂತೆ ಕೇಳಿದರು. ಕಾರ್ಯಾಗಾರ ನಡೆಸಲು ಪ್ರಾರಂಭಿಸಿದರು. ವಿಮಾನದ ಇತಿಹಾಸ, ಸಂಶೋಧನೆ, ಹಾರಾಟದ ಹಿಂದಿನ ವಿಜ್ಞಾನ, ವಿಮಾನದ ಎಂಜಿನ್‌ ಬಗ್ಗೆ ಮಾಹಿತಿ, ಹಾರಾಟದಲ್ಲಿರುವ ಭೌತಶಾಸ್ತ್ರ ನಿಯಮಗಳ ಬಗೆಗಿನ ಮಾಹಿತಿ, ಪೈಲೆಟ್‌ಗಳ ಕಾರ್ಯ, ವಿಮಾನದ ಭಾಗಗಳು ಇನ್ನಿತರ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ವಿಮಾನಗಳ ಬಗೆಗಿರುವ ಕುತೂಹಲವನ್ನು ತಣಿಸುವ ಕೆಲಸ ಶುರು ಮಾಡಿದರು.

ಶಾಲೆ, ಕಾಲೇಜುಗಳಲ್ಲಿ ಮಾತ್ರವಲ್ಲದೇ, ಇತರ ಗುಂಪುಗಳು ಆಹ್ವಾನಿಸಿದಾಗಲೂ ಮಾದರಿ ತಯಾರಿಕೆ ತರಬೇತಿ ನೀಡಿದ್ದಾರೆ.

‘ನನ್ನ ಸ್ನೇಹಿತರೊಬ್ಬರು ಹಡಗಿನ ಮಾದರಿ ತಯಾರಿಸುತ್ತಿದ್ದರು. ಈಗ ಅವರೂ ನಮ್ಮ ಜೊತೆ ಸೇರಿಕೊಂಡಿದ್ದಾರೆ. ಕಾರ್ಯಾಗಾರ ನಡೆಸುವಾಗಲೇ ಹಲವರ ಪರಿಚಯವಾಯಿತು. ವಿಭಿನ್ನ ಬಗೆಯ ಹವ್ಯಾಸಗಳನ್ನು ಹೊಂದಿದ್ದ ಅವರು ನಾವು ನಡೆಸುತ್ತಿದ್ದ ಕಾರ್ಯಾಗಾರಗಳಲ್ಲಿ ಭಾಗಹಿಸುವ ಅಭಿಲಾಷೆ ವ್ಯಕ್ತಪಡಿಸಿದರು. ಹಾಗಾಗಿ ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹವ್ಯಾಸ ಕ್ಲಬ್‌ ಪ್ರಾರಂಭಿಸಲು ನಿರ್ಧರಿಸಿದೆವು’ ಎನ್ನುತ್ತಾರೆ ಮಹೇಂದ್ರ.


ಮಹೇಂದ್ರ

‘ನಗರದಲ್ಲಿ ಹವ್ಯಾಸವನ್ನು ನೆಚ್ಚಿಕೊಂಡವರು ಹಲವರಿದ್ದಾರೆ. ಅಂಥವರನ್ನು ಒಗ್ಗೂಡಿಸಬೇಕಾದ ಅಗತ್ಯವಿದೆ. ಕಲೆಯ ಆಸಕ್ತಿಯನ್ನು ಹಂಚುವುದು ನಿರಂತರ ಪ್ರಕ್ರಿಯೆಯಾಗಿರಬೇಕು. ಈ ಯೋಚನೆಯ ಫಲವಾಗಿಯೇ ಕ್ಲಬ್‌ ರೂಪುಗೊಂಡಿತು. ನಾವು ಹಣಕ್ಕಾಗಿ ಇದನ್ನು ಮಾಡುತ್ತಿಲ್ಲ. ಮನಸಿನ ಸಂತೋಷಕ್ಕಾಗಿ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ನಿರ್ದಿಷ್ಟ ಜಾಗದಲ್ಲಿ ನಿರಂತರ ಕಾರ್ಯಾಗಾರ ನಡೆಸುವ ಚಿಂತನೆಯಿದೆ’ ಎಂದು ಮುಂದಿನ ಯೋಜನೆ ಬಗ್ಗೆ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.