ADVERTISEMENT

ಕ್ರಿಸ್‌ಮಸ್‌ ಕೇಕ್!

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 19:40 IST
Last Updated 18 ಡಿಸೆಂಬರ್ 2019, 19:40 IST
ಕೇಕ್‌
ಕೇಕ್‌   

ಕ್ರಿ ಸ್‌ಮಸ್‌ ಎಂದರೆ ನೆನಪಾಗುವುದೇ ಸ್ವಾದಿಷ್ಟ ಕೇಕ್‌. ನಗರದ ಹಲವೆಡೆ ಬೃಹತ್‌ ಕೇಕ್‌ ಪ್ರದರ್ಶನಗಳು ಕೂಡ ನಡೆಯುತ್ತವೆ. ಕೇಕ್‌ ಎನ್ನುವುದು ನಮ್ಮ ರುಚಿ, ಸ್ವಾದಕ್ಕೆ ಸಂಬಂಧಿಸಿದ ಒಂದು ವಿಶೇಷ ಖಾದ್ಯವಾಗಿ ಯಾವತ್ತೂ ಸೆಳೆಯುವಂಥದು.ಈ ಕೇಕ್‌ ಅನ್ನು ಹೇಗೆ ತಯಾರು ಮಾಡುತ್ತಾರೆ! ಅದರಲ್ಲೂ ಹಬ್ಬಕ್ಕೆಂದೇ ವಿಶಿಷ್ಟ ಬಗೆಯ ಕೇಕ್‌ ತಯಾರಿಸುವುದು ಹೇಗೆ ಎನ್ನುವ ಕುತೂಹಲ ಸಹಜ.

ಹಿಡನ್ ಫ್ರುಟ್‌ ಕೇಕ್ (Hidden Fruit Cake) ಎನ್ನುವುದು ಕ್ರಿಸ್‌ಮಸ್‌ ಹಬ್ಬಕ್ಕೆ ತಯಾರಿಸಲ್ಪಡುವ ಒಂದು ವಿಶೇಷ ಕೇಕ್‌. ಅದರ ರೆಸಿಪಿ ಏನು, ಅದನ್ನು ತಯಾರು ಮಾಡುವ ವಿಧಾನಗಳೇನು ಎನ್ನುವ ಬಗ್ಗೆ ವಿವರವಾದ ಮಾಹಿತಿ ನಿಮ್ಮೊಂದಿಗೆ. ಕೇಕ್‌ ರೆಸಿಪಿ ನಗರದ ಕೇಕ್‌ಮೇಕರ್‌ ಸಾರಾ ಅವರದು.

ರೆಸಿಪಿ: ಸಾರಾ

ADVERTISEMENT

ನೆನೆಸಿಡುವುದಕ್ಕಾಗಿ
ಒಣಹಣ್ಣು- 1/2 ಕಪ್ (ಒಣ ಖರ್ಜೂರ, ಚೆರಿ, ಆರೆಂಜ್ ಸಿಪ್ಪೆ)
ರಮ್ - 1/4 ಕಪ್

ಸಕ್ಕರೆ ಪಾಕಕ್ಕಾಗಿ (ಕ್ಯಾರಮೆಲ್)

1/2 ಕಪ್ ಸಕ್ಕರೆ
1 ಟೇಬಲ್ ಚಮಚ ನೀರು
1/4 ಕಪ್ ಬಿಸಿ ನೀರು

ಕೇಕ್ ತಯಾರಿಗಾಗಿ ಬೇಕಾಗಿರುವ ವಸ್ತುಗಳು

ಮೈದಾ ಹಿಟ್ಟು: 100 ಗ್ರಾಂ
ಮೊಟ್ಟೆ- 2
ಬೆಲ್ಲದ ಪುಡಿ/ ಬ್ರೌನ್ ಶುಗರ್- 100 ಗ್ರಾಂ
ಉಪ್ಪಿಲ್ಲದ ಬೆಣ್ಣೆ- 125 ಗ್ರಾಂ
ಬೇಕಿಂಗ್ ಪೌಡರ್- 3/4 ಟೀ ಚಮಚ
ಬೇಕಿಂಗ್ ಸೋಡಾ- 1 ಚಿಟಿಕೆ
1/4 ಕಪ್ ಗೋಡಂಬಿ ಮತ್ತು ಬಾದಾಮಿ - ಚಿಕ್ಕದಾಗಿ ಹೆಚ್ಚಿರುವುದು (ಅಗತ್ಯವಿದ್ದರೆ ಮಾತ್ರ)
ವೆನಿಲಾ ಸತ್ವ - 1 ಟೀ ಚಮಚ

ಮಸಾಲೆ

ದಾಲ್ಛಿನ್ನಿ - 1 ಚಿಕ್ಕ ತುಂಡು
ಲವಂಗ - 3
ಜಾಯಿಕಾಯಿ - 1 ಚಿಕ್ಕ ತುಂಡು

ಮಾಡುವ ವಿಧಾನ

ಎಲ್ಲ ಒಣಹಣ್ಣುಗಳನ್ನು ಬಾಟಲಿಯಲ್ಲಿ ಹಾಕಿ ನಿಮಗಿಷ್ಟದ ರಮ್‌ನಲ್ಲಿ ಕನಿಷ್ಠ ಏಳು ದಿನ ನೆನೆಸಿಡಿ. ಈ ಏಳು ದಿನಗಳಲ್ಲಿ ಆಗಾಗೊಮ್ಮೆ ಬಾಟಲಿಯಲ್ಲಿ ಕುಲುಕುತ್ತಿರಿ. ಎಲ್ಲ ಒಣಹಣ್ಣುಗಳು ರಮ್‌ನಲ್ಲಿ ಚೆನ್ನಾಗಿ ಮುಳುಗಿ ನೆನೆಯಲಿ ಎಂಬ ಕಾರಣಕ್ಕಾಗಿ.

ಸಕ್ಕರೆ ಪಾಕ ಮಾಡುವ ವಿಧಾನ

ಅಗಲವಾದ ಪಾತ್ರೆಯಲ್ಲಿ ಅಥವಾ ಸಾಸ್ ಪ್ಯಾನ್‌ನಲ್ಲಿ ಅರ್ಧ ಕಪ್ ಸಕ್ಕರೆ ಮತ್ತು ಒಂದು ಟೇಬಲ್ ಚಮಚ ನೀರು ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಸಕ್ಕರೆ ಕರಗಲು ಬಿಡಿ. ಸಕ್ಕರೆ ಪಾಕ ಕಡು ಕಂದು ಬಣ್ಣಕ್ಕೆ ತಿರುಗಿದಾಗ ಪಾತ್ರೆಯನ್ನು ಒಲೆ ಮೇಲಿಂದ ತೆಗೆದು 1/4 ಕಾಲು ಕಪ್ ಬಿಸಿ ನೀರು ಸೇರಿಸಿ. ಈ ರೀತಿ ಬಿಸಿ ನೀರು ಸೇರಿಸುವಾಗ ನೀರು ಸಿಡಿಯದಂತೆ ಎಚ್ಚರ ವಹಿಸಿ. ಆಮೇಲೆ ಒಲೆ ಮೇಲಿಟ್ಟು 3-4 ನಿಮಿಷ ಕುದಿಸಿ. ಒಲೆಯ ಮೇಲಿಂದ ತೆಗೆದು ಪೂರ್ತಿ ತಣಿಯಲು ಬಿಡಿ.
ಮಸಾಲೆ ಪುಡಿ ತಯಾರಿಸಲು ಎಲ್ಲ ಮಸಾಲೆಗಳನ್ನು ನುಣ್ಣನೆ ಪುಡಿ ಮಾಡಿ ತೆಗೆದಿಟ್ಟುಕೊಳ್ಳಿ

ಕೇಕ್ ತಯಾರಿಸುವ ವಿಧಾನ

ಬೇಕ್ ಮಾಡುವ ಮುನ್ನ ಮೈಕ್ರೋವೇವ್ ಓವೆನ್‌ನ್ನು 10-15 ನಿಮಿಷ ಕಾಲ 180 ಡಿಗ್ರಿ ಸೆಲ್ಶಿಯಸ್ ನಲ್ಲಿ ಪ್ರೀಹೀಟ್ ಮಾಡಿಕೊಳ್ಳಿ.

1. ರಮ್‌ನಲ್ಲಿ ನೆನೆಸಿಟ್ಟ ಎಲ್ಲ ಒಣಹಣ್ಣುಗಳನ್ನು ಮಿಕ್ಸರ್ ಜಾರ್‌ನಲ್ಲಿ ಎರಡು ಸುತ್ತು ತಿರುಗಿಸಿ ಪಕ್ಕಕ್ಕಿಟ್ಟುಬಿಡಿ.

2. ಪಾತ್ರೆಯೊಂದರಲ್ಲಿ ಮೈದಾ ಹಿಟ್ಟಿಗೆ ಬೇಕಿಂಗ್ ಪೌಡರ್ ಮತ್ತು ಬೇಕಿಂಗ್ ಸೋಡಾ ಹಾಕಿ

3. ಬೇರೊಂದು ಪಾತ್ರೆಯಲ್ಲಿ ಮೊಟ್ಟೆ ಒಡೆದು ಬಿಳಿ ಮತ್ತು ಮೊಟ್ಟೆಯ ಹಳದಿಯನ್ನು ಬೇರೆ ಬೇರೆ ಇಡಿ. ಮೊಟ್ಟೆಯ ಬಿಳಿ ಪದಾರ್ಥವನ್ನು ಮಾತ್ರ ಬೇರೆ ಪಾತ್ರೆಗೆ ಹಾಕಿ ಬಿಳಿ ನೊರೆ ಬರುವ ವರೆಗೆ ಕೈಯಾಡಿಸಿ. (ಬೀಟ್ ಮಾಡಿ)

4. ಮೊಟ್ಟೆಯ ಹಳದಿ ಭಾಗಕ್ಕೆ ವೆನಿಲಾ ಸತ್ವ ಸೇರಿಸಿ ಚೆನ್ನಾಗಿ ಕದಡಿ.

5.ಬೆಣ್ಣೆ ಮತ್ತು ಸಕ್ಕರೆಯನ್ನು ಬೇರೊಂದು ಪಾತ್ರೆಗೆ ಸುರಿದು ಎಲೆಕ್ಟ್ರಿಕ್ ಬೀಟರ್ ಬಳಸಿ ಚೆನ್ನಾಗಿ ಮಿಶ್ರಮಾಡಿ ಕ್ರೀಮ್ ತಯಾರಿಸಿ. ಹೀಗೆ ಮಾಡುವಾಗ ಮೊಟ್ಟೆಯ ಹಳದಿಯನ್ನು ಸ್ವಲ್ಪ ಸ್ವ ಲ್ಪವೇ ಹಾಕುತ್ತಾ ಮಿಶ್ರ ಮಾಡಿ. ಈ ಮಿಶ್ರಣ ತುಂಬಾ ನುಣುಪಾಗಬೇಕು.

6. ಇದನ್ನು ಸಕ್ಕರೆ ಪಾಕಕ್ಕೆ ಸುರಿದು, ಮಸಾಲೆ ಪುಡಿ ಹಾಕಿ. ಆಮೇಲೆ ಬೀಟರ್ ಬಳಸಿ ಚೆನ್ನಾಗಿ ಮಿಶ್ರ ಮಾಡಿ.

7. ಹಿಟ್ಟನ್ನು ಸ್ವಲ್ವ ಸ್ವಲ್ಪವೇ ಸುರಿದು ಮರದ ಸೌಟಿನಲ್ಲಿ ನಿಧಾನವಾಗಿ ಮಿಶ್ರ ಮಾಡಿ.

8. ಮೊಟ್ಟೆಯ ಬಿಳಿ ಪದಾರ್ಥದಿಂದ ತಯಾರಿಸಿದ ನೊರೆಯನ್ನು ಎರಡು ಬಾರಿ ಹಾಕಿ ಮಿಶ್ರ ಮಾಡಿ. ಈ ಮಿಶ್ರಣದಲ್ಲಿ ಬಿಳಿ ನೊರೆಗಳು ಕಾಣಬಾರದು.

9. ಮಿಕ್ಸರ್‌ನಲ್ಲಿ ಪುಡಿ ಮಾಡಿದ ಒಣಹಣ್ಣು, ಸಣ್ಣಗೆ ಹೆಚ್ಚಿದ ಬಾದಾಮಿ ಮತ್ತು ಗೋಡಂಬಿ ಸೇರಿಸಿ

10. ಬೇಕಿಂಗ್ ಮಾಡುವ ಪಾತ್ರೆಗೆ ಚೆನ್ನಾಗಿ ಎಣ್ಣೆ ಸವರಿ ಬೇಕಿಂಗ್ ಪೇಪರ್ ಇರಿಸಿ

11. ಕೇಕ್ ಮಿಶ್ರಣವನ್ನು ಬೇಕಿಂಗ್ ತಟ್ಟೆಗೆ ನಿಧಾನವಾಗಿ ಸುರಿಯಿರಿ.

12. ಪ್ರೀ ಹೀಟ್ ಆಗಿರುವ ಓವೆನ್‌ನಲ್ಲಿ 40- 45 ನಿಮಿಷಗಳ ಕಾಲ ಬೇಕ್ ಮಾಡಿ. ಕೇಕ್ ಬೆಂದಿದೆಯಾ ಎಂದು ನೋಡಲು ಚಿಕ್ಕ ಕಡ್ಡಿ ಚುಚ್ಚಿ ನೋಡಿ. ಕಡ್ಡಿಯಲ್ಲಿ ಕೇಕ್ ಅಂಟಿಕೊಳ್ಳದೇ ಇದ್ದರೆ ಬೆಂದಿದೆ ಎಂದು ಅರ್ಥ. ಕೇಕ್ ಬೇಕ್ ಆಗಲು ಇರುವ ಸಮಯ ಬಳಸಿದ ಬೇಕಿಂಗ್ ತಟ್ಟೆ ಮತ್ತು ಓವೆನ್ ಮೇಲೆ ಅವಲಂಬಿಸಿರುತ್ತದೆ.

ರಮ್ ಬಳಸದೆ ಮಾಡುವುದಾದರೆ ಹೀಗೆ ಮಾಡಿ

ರಮ್ ಬದಲು ತಾಜಾ ಆರೆಂಜ್ ರಸ ಬಳಸಿ. ಆರೆಂಜ್ ರಸದಲ್ಲಿ ಮೇಲೆ ಹೇಳಿರುವ ಒಣಹಣ್ಣುಗಳನ್ನು ಹಾಕಿ ಒಂದು ರಾತ್ರಿ ನೆನೆಸಿಟ್ಟರೆ ಸಾಕು.

ಸ್ಮೋಕ್‌ಹೌಸ್‌ನಲ್ಲಿ ಆಹಾರೋತ್ಸವ

ಹಸಿ ತರಕಾರಿ, ಹಣ್ಣುಗಳನ್ನು ಬಳಸಿ ಮಾಡಿದ ಗ್ರೀಸ್‌ ಆ್ಯಪಲ್‌, ಕ್ಯಾಂಡಿಡ್‌ ಕ್ಯಾನ್‌ಬೆರಿ ಸಲಾಡ್‌ನಂತಹ ಅಪರೂಪದ ತಿನಿಸುಗಳನ್ನು ಸ್ಮೋಕ್‌ ಹೌಸ್‌ ಡೆಲಿ ರೆಸ್ಟೊರೆಂಟ್‌ನಲ್ಲಿ ಸವಿಯಬಹುದು.

ಮಿಕ್ಸ್‌ಡ್‌ ಮಶ್ರೂಮ್‌ ರಿಸಟ್ಟೊ ಹಾಗೂ ರೋಸ್ಟೆಡ್‌ ಪೋರ್ಕ್‌ ಅನ್ನು ಸ್ಮೋಕ್‌ಡ್‌ ಸಾಸೆಜ್‌ ಪುಲಾವ್‌ ಜೊತೆ ಸವಿದರೆ ರುಚಿಯೇ ಅದ್ಭುತ. ಸ್ಮೋಕ್‌ ಹೌಸ್‌, ಕ್ರಿಸ್‌ಮಸ್‌ ಸಂದರ್ಭದಲ್ಲಿ ಗ್ರಾಹಕರಿಗೆ ಬಗೆ ಬಗೆ ಖಾದ್ಯಗಳನ್ನು ಪರಿಚಯಿಸುತ್ತಿದೆ.

ಸಿಹಿ ಇಷ್ಟಪಡುವವರು ಕ್ರಿಸ್‌ಮಸ್‌ ಫ್ರುಟ್‌, ಓಟ್ಸ್‌ ಪೈ ರೂಬಿ ಚಾಕಲೇಟ್‌ ಐಸ್‌ಕ್ರೀ, ಕ್ಯಾನ್‌ಬೆರಿ ಜೆಲ್ಲಿ, ಮಿಲ್ಕ್‌ ಚಾಕಲೇಟ್‌ ಮುಸ್ಸೆಗಳನ್ನು ಸವಿಯಬಹುದು. ಫ್ಯೂಜನ್‌ ಮುಲ್ಡ್‌ ವೈನ್‌, ಆ್ಯಪಲ್‌ ಬೆರ‍್ರಿ ಸ್ಯಾಂಗ್ರಿಯದಂತಹ ಕಾಕ್‌ಟೇಲ್‌ಗಳ ಜೊತೆ ಬಾಯಲ್ಲಿ ನೀರೂರಿಸುವಂತಹ ಬಗೆ ಬಗೆ ಖಾದ್ಯಗಳಿವೆ.

ಲ್ಯಾವಲ್ಲೆ ರಸ್ತೆ ಹಾಗೂ ಇಂದಿರಾನಗರದ ಶಾಖೆಗಳಲ್ಲಿ ಲಭ್ಯ. ಡಿ.18ರಿಂದ 31ರವರೆಗೆ ಈ ಆಹಾರೋತ್ಸವ ನಡೆಯಲಿದೆ.

ಫೋರಂ ಮಾಲ್‌ನಲ್ಲಿ ಕ್ರಿಸ್‌ಮಸ್ ಮಾರುಕಟ್ಟೆ

ನಿಮ್ಮ ಕ್ರಿಸ್‌ಮಸ್ಶಾಪಿಂಗ್ ಅನುಭವಕ್ಕೆ ಡಿ.22ರವರೆಗೆಕೋರಮಂಗಲದ ಫೋರಂ ಮಾಲ್ ಸಜ್ಜಾಗಿದೆ. ಇಲ್ಲಿ ಗೃಹಾಲಂಕಾರ, ಆಭರಣ, ಉಡುಗೊರೆ ವಸ್ತುಗಳು, ಉಡುಪುಗಳ ಆಯ್ಕೆ ಮಾಡಬಹುದು. ವಾರಾಂತ್ಯಗಳಲ್ಲಿ ಸಾಂಟಾನನ್ನು ಭೇಟಿ ಮಾಡಿ ಶುಭಾಶಯವನ್ನೂ ಹೇಳಬಹುದು.ಅತ್ಯಂತ ದೊಡ್ಡ ಕ್ರಿಸ್‌ಮಸ್ ಗಿಡ, ಸಾಂತಾ ಟೋಪಿಗಳು ಪ್ರಮುಖ ಆಕರ್ಷಣೆ.

ದಿನಾಂಕ: ಡಿ13ರಿಂದ ಆರಂಭ ಗೊಂಡಿರುವ ಈ ವಿಶೇಷ ಶಾಪಿಂಗ್‌ 22ರವರೆಗೆ ಮುಂದುವರಿಯಲಿದೆ.

ಸ್ಥಳ: ಫೋರಂ ಮಾಲ್, ಕೋರಮಂಗಲ. ಬೆಳಿಗ್ಗೆ 10ರಿಂದ ರಾತ್ರಿ 8. ಪ್ರವೇಶ ಉಚಿತ.

ನಿರೂಪಣೆ: ರಶ್ಮಿ .ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.