ADVERTISEMENT

ಕೌಟುಂಬಿಕ ಕಲಹದ ಕರಾಳ ಮುಖ!

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 19:30 IST
Last Updated 8 ಜುಲೈ 2019, 19:30 IST
   

ಎರಡು ವರ್ಷದ ಹಸುಳೆಯೊಂದಿಗೆ ಏಳನೇ ಮಹಡಿಯಿಂದ ಹಾರಿಮಹಿಳೆಯೊಬ್ಬರು ಪ್ರಾಣಬಿಟ್ಟ ಘಟನೆಯನ್ನು ಕಣ್ಣಾರೆ ಕಂಡ ಆರ್‌.ಟಿ.ನಗರದ ವೈಟ್ ಹೌಸ್ ಅಪಾರ್ಟ್‌ಮೆಂಟ್‌ನಿವಾಸಿಗಳು ಆ ಆಘಾತದಿಂದ ಹೊರ ಬಂದಿಲ್ಲ. ಕಹಿ ಘಟನೆ ನಡೆದು ಒಂದು ವಾರವಾದರೂ ಆ ಘಟನೆ ಅವರನ್ನು ದುಃಸ್ವಪ್ನದಂತೆ ಕಾಡುತ್ತಿದೆ.

ಎರಡು ವರ್ಷದ ಮಗ ದೇವಂತ್ ಜತೆ 29 ವರ್ಷದ ಗೃಹಿಣಿ ಭಾವನಾ ತಾವು ವಾಸಿಸುತ್ತಿದ್ದ ವಸತಿ ಸಮುಚ್ಚಯದ ಏಳನೇ ಮಹಡಿಯಿಂದ ಬಿದ್ದು ಕಳೆದ ಮಂಗಳವಾರ ಸಾವನ್ನಪ್ಪಿದ್ದರು. ಘಟನೆ ನಡೆದು ಎರಡು ದಿನಗಳ ಬಳಿಕ ಸ್ಥಳಕ್ಕೆ‘ಮೆಟ್ರೊ’ ಭೇಟಿ ನೀಡಿತ್ತು. ಘಟನಾ ಸ್ಥಳದ ಸುತ್ತ ಯಾರೂ ಸುಳಿದಾಡದಂತೆಪೊಲೀಸರು ನಿರ್ಬಂಧಿಸಿದ್ದರು. ತಾಯಿ ಮತ್ತು ಮಗನ ರಕ್ತದ ಕಲೆಗಳು ಇನ್ನೂ ಸಂಪೂರ್ಣವಾಗಿ ಅಳಿಸಿರಲಿಲ್ಲ. ಸಂಜೆ ವಾಯು ವಿಹಾರ ಮಾಡುತ್ತಿದ್ಗ ಹಿರಿಯರು, ಮಹಿಳೆಯರು ಮತ್ತು ಆಟವಾಡುತ್ತಿದ್ದ ಮಕ್ಕಳು ಕೂಡ ಈ ಹೃದಯವಿದ್ರಾವಕ ಘಟನೆಯ ಬಗ್ಗೆ ಮಾತನಾಡುತ್ತಿದ್ದರು.

ಅರಿಹಂತ ಮತ್ತು ಭಾವನಾ ದಂಪತಿ ತಮ್ಮ ಪುಟ್ಟ ಕಂದಮ್ಮನೊಂದಿಗೆ ಈ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.ತಾಯಿ ಹಾಗೂ ಮಗ ಒಟ್ಟಿಗೆ ಕೆಳಗೆ ಬಿದ್ದಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ದೇವಂತ್ ಸ್ಥಳದಲ್ಲೇ ಮೃತಪಟ್ಟ ಎಂದು ಪ್ರತ್ಯಕ್ಷದರ್ಶಿಗಳು ಘಟನೆಯ ದಿನವನ್ನು ವಿವರಿಸಿದರು.

ADVERTISEMENT

ಗಾಯಗೊಂಡು ನರಳಾಡುತ್ತಿದ್ದ ಭಾವನಾ ಅವರನ್ನು ಸ್ಥಳೀಯರೇ ಸಮೀಪದ ಬ್ಯಾಪ್ಟಿಸ್‌ ಆಸ್ಪತ್ರೆಗೆ ಕರೆದೊಯ್ದಿದ್ದರು.ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ಅಲ್ಲಿಯ ವೈದ್ಯರು ಹೇಳಿದರು ಎಂದು ಸ್ಥಳೀಯರು ವಿವರಿಸಿದರು. ಆದರೆ, ಭಾವನಾ ಪೋಷಕರು ಹೇಳುವುದೇ ಬೇರೆ. ಮಗಳಿಗೆ ಆಕೆಯ ಪತಿ ಕಿರುಕುಳ ನೀಡುತ್ತಿದ್ದ. ಅದೇ ತಮ್ಮ ಮಗಳ ಸಾವಿಗೆ ಕಾರಣ ಎಂದು ಆಪಾದಿಸಿದ್ದಾರೆ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿದ್ದ ಭಾವನಾ ಹೊರಗಡೆ ಕಾಣಿಸಿಕೊಳ್ಳುತ್ತಿದ್ದದು ತುಂಬಾ ಕಡಿಮೆ ಎಂದು ನೆರೆಹೊರೆಯವರು ನೆನಪಿಸಿಕೊಳ್ಳುತ್ತಾರೆ. ಇಂತಹ ಘಟನೆ ಅಪಾರ್ಟ್‌ಮೆಂಟ್‌ನಲ್ಲಿ ಹಿಂದೆಂದೂ ನಡೆದಿರಲಿಲ್ಲ ಎಂದು ಭಾವನಾ ಪಕ್ಕದ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿರುವ ಅರ್ಚನಾ ಹೇಳುತ್ತಾರೆ. ಇನ್ನೂ ಅವರ ಮುಖದಲ್ಲಿ ಆತಂಕ ಮಾಯವಾಗಿರಲಿಲ್ಲ.

ಘಟನೆಯನ್ನು ಕಣ್ಣಾರೆ ನೋಡಿದ ಹತ್ತನೇ ತರಗತಿ ಬಾಲಕ ಅಂದು ರಾತ್ರಿ ನಿದ್ದೆ ಮಾಡಲಿಲ್ಲ. ಜೋಡಿ ಸಾವು ಆತನನ್ನು ದುಃಸ್ವಪ್ನದಂತೆ ಕಾಡುತ್ತಿವೆ. ಇದು ಆತನ ಎಳೆಯ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ವಿದ್ಯಾವಂತೆಯಾಗಿದ್ದರೂ ಭಾವನಾ ಕೌಟುಂಬಿಕ ದೌರ್ಜನ್ಯದ ಬಗ್ಗೆ ಯಾರ ಬಳಿಯೂ ಹಂಚಿಕೊಂಡಿರಲಿಲ್ಲ. ಯಾರ ನೆರವೂ ಕೇಳಿರಲಿಲ್ಲ. ಎಲ್ಲರೂ ಅವರದ್ದು ಸುಖಿ ಕುಟುಂಬ ಎಂದು ಭಾವಿಸಿದ್ದರು.

‘ವಿದ್ಯಾವಂತೆಯಾಗಿದ್ದ ಆಕೆಗೆ ಕೆಲಸ ಹುಡುಕಿಕೊಳ್ಳುವುದು ಕಷ್ಟವಾಗಿರಲಿಲ್ಲ. ಕೌಟುಂಬಿಕ ಸಮಸ್ಯೆ ಅಥವಾ ದೌರ್ಜನ್ಯ ನಡೆದಲ್ಲಿ ಆಕೆ ಯಾರ ನೆರವನ್ನಾದರೂ ಪಡೆಯಬಹುದಿತ್ತು’ ಎನ್ನುವುದು ಅಪಾರ್ಟ್‌ಮೆಂಟ್‌ ಮಹಿಳೆಯರ ಅಭಿಪ್ರಾಯ.

‘ಈ ಘಟನೆ ನಡೆದದ್ದು (ಜುಲೈ 2ರಂದು) ಅಮವಾಸ್ಯೆಯಂದು. ಅಮವಾಸ್ಯೆಯಂದು ಮನುಷ್ಯ ಉದ್ರೇಕಗೊಳ್ಳುತ್ತಾನೆ. ಖಿನ್ನತೆ, ಮಾನಸಿಕ ಕ್ಷೋಭೆಗೆ ಒಳಗಾದವರು ಸ್ಥಿಮಿತ ಕಳೆದುಕೊಂಡು ದುಡುಕಿನ ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಅಲ್ಲಿದ್ದ ಮತ್ತೊಬ್ಬ ಮಹಿಳೆ ಧ್ವನಿಗೂಡಿಸಿದರು.

ಗಂಡನ ಅತಿರೇಕದ ವರ್ತನೆ

ಮನೆಯಲ್ಲಿ ಹಿರಿಯರು ನಿಶ್ಚಯ ಮಾಡಿದ್ದ ಹುಡುಗನ ಜತೆ ಮದುವೆಯಾದ 26 ವರ್ಷದ ಯುವತಿಗೆ ಹಲವು ತಿಂಗಳಲ್ಲಿಯೇ ಗಂಡನ ಬಗ್ಗೆ ಅಸಮಾಧಾನ ಸುರುವಾಯಿತು. ಮನೆಯ ವ್ಯವಹಾರಗಳ ಬಗ್ಗೆ ಆತ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಲು ಆರಂಭಿಸಿದಳು.‘ ಮನೆಯ ಎಲ್ಲ ವ್ಯವಹಾರಗಳನ್ನು ನೀನೆ ನಿಭಾಯಿಸು.ಯಾವುದಕ್ಕೂನನ್ನನ್ನು ಕೇಳಬೇಡ’ ಎಂದು ಗಂಡ ಆಕೆಗೆ ಖಂಡತುಂಡವಾಗಿ ಹೇಳಿದ್ದ. ಬರುಬರುತ್ತಾ ಆಕೆಯ ಉಡುಪು, ಮಾತುಗಳ ಮೇಲೆ ನಿಯಂತ್ರಣ ಹೇರ ತೊಡಗಿದ.ಯಾರನ್ನು ಭೇಟಿಯಾಗಬೇಕು, ಯಾರನ್ನು ಭೇಟಿಯಾಗಬಾರದು. ಯಾರ ಜತೆ ಮಾತನಾಡಬೇಕು ಮತ್ತು ಯಾರ ಜತೆ ಮಾತನಾಡಬಾರದು ಎಂಬ ಕಟ್ಟಳೆ ವಿಧಿಸಿದ. ಪತ್ನಿಗೆ ವಿವಾಹೇತರ ಸಂಬಂಧ ಇದೆ ಎಂಬ ಅನುಮಾನ ಆತನನ್ನು ಕಾಡತೊಡಗಿತ್ತು. ಇದರಿಂದ ಹೆಂಡತಿಯ ಪ್ರತಿ ಹೆಜ್ಜೆಯನ್ನೂ ಆತ ಶಂಕಿಸತೊಡಗಿದ. ಇದರಿಂದ ಮಾನಸಿಕವಾಗಿ ಕುಗ್ಗಿಹೋದ ಪತ್ನಿ ಕೈಗೆ ಸಿಕ್ಕ ನಿದ್ರೆ ಮಾತ್ರೆ ನುಂಗಿದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಬದುಕುಳಿದಳು.

ಪ್ರತಿದಿನ ನೆರವು ಕೋರಿ ಹತ್ತು ಮಹಿಳೆಯರು ಮೊರೆ

ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾದ ಸುಶಿಕ್ಷಿತ ಮಹಿಳೆಯರಲ್ಲಿ ಭಾವನಾ ಮೊದಲಿಗಳೂ ಅಲ್ಲ, ಕೊನೆಯೂ ಅಲ್ಲ. ಇಂತಹ ಚಿತ್ರಹಿಂಸೆ ಮತ್ತು ನರಕಯಾತನೆಯನ್ನು ಮೌನವಾಗಿ ಅನುಭವಿಸುತ್ತಿರುವ ಅನೇಕ ಮಹಿಳೆಯರು ರಹಸ್ಯವಾಗಿ ಪೊಲೀಸರ ನೆರವು ಕೋರುತ್ತಿದ್ದಾರೆ. ಪ್ರತಿನಿತ್ಯ ಕನಿಷ್ಠ ಹತ್ತು ಮಹಿಳೆಯರು ಪೊಲೀಸ್‌ ಇಲಾಖೆ ತೆರೆದಿರುವ ವನಿತಾ ಸಹಾಯವಾಣಿಗೆ ಕರೆ ಮಾಡುತ್ತಾರೆ ಎಂದು ಹಿರಿಯ ಸಮಾಲೋಚಕರು ಹೇಳುತ್ತಾರೆ.

ಆ ಪೈಕಿ ಗಂಡ ಮತ್ತು ಆತನ ಮನೆಯವರ ನೀಡುತ್ತಿರುವ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ, ಕಿರುಕಳಕ್ಕೆ ಒಳಗಾದವರ ಸಂಖ್ಯೆಯೇ ಹೆಚ್ಚು. ಹೀಗೆ ನೆರವು ಕೋರಿ ಸಹಾಯವಾಣಿಗೆ ಕರೆ ಮಾಡುವ ಹೆಚ್ಚಿನವರಲ್ಲಿ ‘ಆತ್ಮಹತ್ಯಾ ಪ್ರವೃತ್ತಿ‘ ಕಂಡು ಬರುತ್ತದೆ. ಅವರಲ್ಲಿ ಹೆಚ್ಚಿನವರು 30–40 ವರ್ಷ ವಯೋಮಾನದವರು.

‘ಆರ್ಥಿಕ ಅಡಚಣೆ, ಹೊಂದಾಣಿಕೆ ಕೊರತೆ, ಅತಿಯಾದ ಪ್ರೀತಿ, ಅವಲಂಬನೆ ಮುಂತಾದವು ಕುಟುಂಬ ಕಲಹಕ್ಕೆ ಕಿಡಿ ಹಚ್ಚುತ್ತವೆ. ಕೌಟುಂಬಿಕ ದೌರ್ಜನ್ಯಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳಿಗೆ ಹಲವು ಆಯಾಮಗಳಿರುತ್ತವೆ‘ ಎನ್ನುವುದು ನಿಮ್ಹಾನ್ಸ್‌ನ ಮಾನಸಿಕ ರೋಗ ತಜ್ಞ ಡಾ. ಸೆಂಥಿಲ್‌ ಕುಮಾರ್‌ ರೆಡ್ಡಿ ಅವರ ಅಭಿಪ್ರಾಯ. ಆತ್ಮಹತ್ಯಾ ಪ್ರವೃತ್ತಿ ಸೇರಿದಂತೆ ಹಲವು ಬಗೆಯ ಮಾನಸಿಕ ಕಾಯಿಲೆಗಳಿಗೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಇಂತಹ ಘಟನೆಗಳಲ್ಲಿ ಪರ್ಯಾವಸನಗೊಳ್ಳುತ್ತವೆ ಎನ್ನುತ್ತಾರೆ ಡಾ. ರೆಡ್ಡಿ.

ಸಹಾಯಕ್ಕೆ ಕರೆ ಮಾಡಿ: ವನಿತಾ ಸಹಾಯವಾಣಿ: 080–26676050, ಮಾನಸ: 9900542739, ಆಪ್ಟಿಮಾ ಕ್ಲಿನಿಕ್‌: 99800 94600

ಗಂಡ–ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು

26 ವರ್ಷದ ಪತ್ನಿ ಮತ್ತು 30 ವರ್ಷದ ಪತಿಯ ದಾಂಪತ್ಯಕ್ಕೆ ಅಡ್ಡಿಯಾಗಿದ್ದು ಗಂಡನ ಕಡುಕೋಪ. ಕ್ಷುಲ್ಲಕ ಕಾರಣಕ್ಕೆ ಆರಂಭವಾಗುವ ದಂಪತಿ ಜಗಳ ಪರಸ್ಪರ ದೂಷಾರೋಪಣೆಗೆ ತಿರುತ್ತದೆ. ಮಾನಸಿಕ ಸ್ಥಿಮಿತ ಕಳೆದುಕೊಂಡರೆ ಪತ್ನಿಯನ್ನುಸಾರ್ವಜನಿಕವಾಗಿ ಥಳಿಸಲು ಹಿಂದೆಮುಂದೆ ನೋಡದ ಗಂಡ. ಇದಕ್ಕೆಲ್ಲ ಕಚೇರಿಯಲ್ಲಿಯ ಒತ್ತಡ ಕಾರಣ ಎನ್ನುವುದು ಆತನ ಸಮಜಾಯಿಷಿ. ವೈವಾಹಿಕ ಜೀವನದಿಂದ ಹೊರ ಬರದಂತೆ ಪೋಷಕರ ಒತ್ತಡ. ದಂಪತಿ ಜಗಳದಲ್ಲಿ ಬಡವಾದ ಕೂಸು. ವಿಚ್ಛೇದನದ ಹೊರತು ಆಕೆಯ ಮುಂದೆ ಬೇರೆ ದಾರಿ ಉಳಿದಿಲ್ಲ.

ಖಿನ್ನತೆಗೆ ಒಳಗಾದ ಟೆಕ್ಕಿ

ಹುಷಾರಿಲ್ಲದೆ ಮಲಗಿದರು ಗಂಡ ತನ್ನನ್ನು ಗಮನಿಸುವುದಿಲ್ಲ. ಆರೈಕೆ ಮಾಡುವುದಿಲ್ಲ ಎನ್ನುವುದು ಸಾಫ್ಟವೇರ್‌ ಹೆಂಡತಿಯ ಅಳಲು. ಗಂಡ ಕಚೇರಿಯ ಮಹಿಳಾ ಸಿಬ್ಬಂದಿ ಜತೆಗೆ ಸ್ನೇಹದಿಂದ ಇರುತ್ತಾನೆ. ಮನೆಯಲ್ಲಿ ತನ್ನ ಬಗ್ಗೆ ಮಾತ್ರ ನಿರ್ಲಕ್ಷ್ಯ ಮತ್ತು ಉಡಾಫೆಯ ಮನೋಭಾವ. ಈ ಬಗ್ಗೆ ಪ್ರಶ್ನಿಸಿದರೆ ‘ಸಂಕುಚಿತ ಸ್ವಭಾವದವಳು’ ಎಂಬ ಮೂದಲಿಕೆ. ದಾಂಪತ್ಯ ಜೀವನದ ಸಮಸ್ಯೆಗಳಿಗೆ ತೇಪೆ ಹಾಕಲು ವಿಫಲವಾದ ಪತ್ನಿ ಖಿನ್ನತೆಗೆ ಒಳಗಾಗಿದ್ದಾಳೆ. ಮಾನಸಿಕ ತಜ್ಞರ ಬಳಿ ಚಿಕಿತ್ಸೆ ಪಡೆಯುತ್ತಿದ್ದು, ಸುಧಾರಿಸಿಕೊಳ್ಳುತ್ತಿದ್ದಾಳೆ.

ಸಮಾಲೋಚನೆಗೆ ಹಿಂಜರಿಯುವ ಗಂಡಂದಿರು

ದಾಂಪತ್ಯ ಚಿಕಿತ್ಸೆ ಸವಾಲಿನ ಕೆಲಸ ಎನ್ನುವುದು ಆಸ್ಟರ್ ಸಿಎಂಐ ಮನೋರೋಗ ತಜ್ಞೆ ಡಾ. ದಿವ್ಯಶ್ರೀ ಕೆ.ಆರ್‌. ಅವರ ಅನುಭವದ ಮಾತು.

ಒಂದು ವಾರದಲ್ಲಿ ಕೌಟುಂಬಿಕ ಸಮಸ್ಯೆ ಹೊತ್ತು ಎರಡರಿಂದ ಮೂವರು ಮಹಿಳೆಯರು ಚಿಕಿತ್ಸೆಗೆ ತಮ್ಮಲ್ಲಿ ಬರುತ್ತಾರೆ. ಅವರೆಲ್ಲರೂ ಸುಶಿಕ್ಷಿತರು ಎನ್ನುವುದು ಗಮನಿಸಬೇಕಾದ ಸಂಗತಿ. ಅವರೆಲ್ಲ ಉತ್ತಮ ಉದ್ಯೋಗದಲ್ಲಿದ್ದು, ಕೈತುಂಬಾ ಸಂಬಳ ಪಡೆಯುತ್ತಿದ್ದಾರೆ.

ಹೊರ ಜಗತ್ತಿಗೆ ಅತ್ಯಂತ ಸೌಮ್ಯ ಮತ್ತು ಒಳ್ಳೆಯ ಸ್ವಭಾವದವರಂತೆ ಕಾಣುವ ಅವರ ಗಂಡಂದಿರು ಮನೆಯಲ್ಲಿ ನೀಡುವ ಕಿರುಕುಳ, ಚಿತ್ರಹಿಂಸೆಗೆ ಕೊನೆ ಇಲ್ಲ. ಅವರೆಲ್ಲರೂ ಸಮಾಜದಲ್ಲಿ ಉನ್ನತ ಸ್ಥಾನಮಾನದಲ್ಲಿದ್ದಾರೆ. ಉಳಿದವರೆ ಜತೆ ಅತ್ಯಂತ ಒಳ್ಳೆಯ ರೀತಿಯಲ್ಲಿ ವ್ಯವಹರಿಸುವ ಇವರು ಹೆಂಡತಿಯ ವಿಷಯಕ್ಕೆ ಬಂದರೆ ಮಾತ್ರ ರೌದ್ರಾವತಾರ ತಾಳುತ್ತಾರೆ ಎನ್ನುತ್ತಾರೆ ಡಾ. ದಿವ್ಯಶ್ರೀ.

ಈ ಸ್ವಭಾವದ ಬಹುತೇಕ ಗಂಡಸರು ಮಾನಸಿಕ ತಜ್ಞರ ಬಳಿ ಸಮಾಲೋಚನೆ ಮತ್ತು ಚಿಕಿತ್ಸೆಗೆ ಬರಲು ಹಿಂಜರಿಯುತ್ತಾರೆ. ಕೌಟುಂಬಿಕ ಸಮಾಲೋಚನೆಗೂ ದಾಂಪತ್ಯ ಸರಿ ಹೋಗದಿದ್ದರೆ ವಿಚ್ಛೇದನೆವೊಂದೇ ಪರಿಹಾರ ಅನ್ನುವುದು ಅವರ ಸಲಹೆ.

ಕೌಟುಂಬಿಕ ಸಮಸ್ಯೆಗಳನ್ನು ಪತ್ತೆ ಹಚ್ಚುವ ಬಗೆ

– ಸಂಗಾತಿಯ ಜೀವನದ ಎಲ್ಲ ನಿರ್ಧಾರಗಳ ಮೇಲೆ ಹತೋಟಿ ಸಾಧಿಸಲು ಪ್ರಯತ್ನಿಸುವುದು

– ಸಂಗಾತಿಯ ಆತ್ಮವಿಶ್ವಾಸವನ್ನು ಸಂದೇಹಿಸುವುದು ಇಲ್ಲವೇ ಕುಗ್ಗಿಸುವುದು

– ಪ್ರತಿಯೊಂದು ಸಮಸ್ಯೆಗೂ ಸಂಗಾತಿಯನ್ನೇ ದೂಷಿಸುವುದು

– ಕಠಿಣ ಸವಾಲು, ಸಮಸ್ಯೆ ಎದುರಾದಾಗಲೆಲ್ಲ ಅನಗತ್ಯವಾಗಿ ಕೋಪಗೊಳ್ಳುವುದು

– ‘ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ಅದಕ್ಕೆ ಹೀಗೆ‘ ಎಂದು ತಮ್ಮ ವರ್ತನೆಯನ್ನು ಸಮರ್ಥಿಸಿಕೊಳ್ಳುವುದು

ದೌರ್ಜನ್ಯಕ್ಕೆ ನಾಂದಿಯಾಗುವ ಕಾರಣಗಳೇನು?

– ನಿರ್ದಿಷ್ಟ ಕಾರಣಗಳಿಲ್ಲ.

– ಅತಿಯಾದ ಕಾಳಜಿ

– ಪಾರದರ್ಶಕತೆ ಕೊರತೆ

– ದಬ್ಬಾಳಿಕೆ ವರ್ತನೆ

( ಕೃಪೆ: ವನಿತಾ ಸಹಾಯವಾಣಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.