ADVERTISEMENT

ಕೈಕೊಟ್ಟ ಟಿಕೆಟ್‌ ಮಷಿನ್‌ ಬಿಎಂಟಿಸಿ ಪರದಾಟ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 19:45 IST
Last Updated 9 ಜುಲೈ 2019, 19:45 IST
ಬಿಎಂಟಿಸಿ ಟೀಕೆಟ್‌ ಯಂತ್ರ
ಬಿಎಂಟಿಸಿ ಟೀಕೆಟ್‌ ಯಂತ್ರ   

ನಗರದ ಸಂಪರ್ಕ ಕೊಂಡಿಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ ಕಂಡಕ್ಟರ್‌ಗಳಿಗೆ ಎಲೆಕ್ಟ್ರಾನಿಕ್‌ ಟಿಕೆಟ್‌ ಮಷಿನ್‌ಗಳ (ಇಟಿಎಂ) ಕೊರತೆ ಎದುರಾಗಿದೆ. ಹೀಗಾಗಿ ನಿರ್ವಾಹಕರು ಮೊದಲಿನಂತೆಯೇ ಪ್ರಿಂಟ್‌ ಆಗಿರುವ ಟಿಕೆಟ್‌ಗಳನ್ನು ಹರಿದು ಕೊಡುತ್ತಿದ್ದಾರೆ.

ಬಿಎಂಟಿಸಿಗೆ ಹಲವಾರು ವರ್ಷಗಳಿಂದ ಸ್ವಯಂಚಾಲಿತ ಟಿಕೆಟ್‌ ಯಂತ್ರಗಳನ್ನು ಪೂರೈಸುತ್ತಿದ್ದ ಮುಂಬೈ ಮೂಲದ ಟ್ರೈಮ್ಯಾಕ್ಸ್‌ ಕಂಪನಿ ದಿವಾಳಿಯಾದ ನಂತರ ಈ ಸಮಸ್ಯೆ ಉದ್ಭವಿಸಿದೆ. ನಗರದಲ್ಲಿ 6,500 ಬಿಎಂಟಿಸಿ ಬಸ್‌ ಸಂಚರಿಸುತ್ತಿದ್ದು ಎಲ್ಲ ಕಂಡಕ್ಟರ್‌ಗಳಿಗೂ ಇಟಿಎಂ ನೀಡಲಾಗಿತ್ತು.

ಟ್ರೈಮ್ಯಾಕ್ಸ್‌ ಕಂಪನಿ ದಿವಾಳಿಯಾದ ಕಾರಣಕಳೆದ ಕೆಲವು ತಿಂಗಳಿಂದ ಶೇ 30ರಷ್ಟು ಯಂತ್ರಗಳ ನಿರ್ವಹಣೆ ಮತ್ತು ದುರಸ್ತಿ ಮಾಡಿಲ್ಲ.ದುರಸ್ತಿಯಾಗದ ಕಾರಣ ಎರಡು ಸಾವಿರಕ್ಕೂ ಹೆಚ್ಚು ಮಷಿನ್‌ಗಳನ್ನು ಸೇವೆಯಿಂದ ಹಿಂದಕ್ಕೆ ಪಡೆಯಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್‌.ವಿ. ಪ್ರಸಾದ್‌ ಅವರು ‘ಮೆಟ್ರೊ’ಗೆ ತಿಳಿಸಿದರು.

ADVERTISEMENT

ಟಿಕೆಟ್‌ ಯಂತ್ರಗಳನ್ನು ಪೂರೈಸಲು ನಾಲ್ಕು ವರ್ಷಗಳ ಹಿಂದೆ ಟ್ರೈಮ್ಯಾಕ್ಸ್‌ ಕಂಪನಿಗೆ ಟೆಂಡರ್‌ ನೀಡಲಾಗಿತ್ತು.ಹೊಸದಾಗಿ ಟೆಂಡರ್‌ ಕರೆಯಲಾಗಿದೆ. ಬೋರ್ಡ್‌ ಸಭೆಯಲ್ಲಿ ಅನುಮತಿ ಪಡೆಯಲಾಗಿದ್ದು ಶೀಘ್ರದಲ್ಲಿಯೇ ಹೊಸ ಯಂತ್ರಗಳನ್ನು ಖರೀದಿಸಲಾಗುವುದು ಎಂದರು.

ಟಿಕೆಟ್‌ ಯಂತ್ರಗಳಿಲ್ಲದೆ ಕಷ್ಟವಾಗುತ್ತಿದೆ. ಯಂತ್ರಗಳಿಗೆ ಹೋಲಿಸಿದರೆ ಟಿಕೆಟ್‌ ಹರಿದು ನೀಡುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಬಸ್‌ ಪ್ರಯಾಣಿಕರಿಂದ ತುಂಬಿರುವಾಗ ಕಷ್ಟವಾಗುತ್ತದೆ. ಪ್ರಿಂಟೆಡ್‌ ಟಿಕೆಟ್‌ ಹರಿದು ಕೊಡುವ ಅಭ್ಯಾಸ ಮರೆತು ಹೋಗಿದೆ ಎಂದು ಬಿಎಂಟಿಸಿ ನಿವಾರ್ಹಕರು ಹೆಳುತ್ತಾರೆ.

ಮೂರ‍್ನಾಲ್ಕು ತಿಂಗಳಿಂದ ಈ ಸಮಸ್ಯೆ ಉದ್ಬವಿಸಿದೆ. ದಿನೇ ದಿನೇ ಟಿಕೆಟ್‌ ಯಂತ್ರಗಳ ಸಂಖ್ಯೆ ಕಡಿಮೆಯಾಗ ತೊಡಗಿದೆ. ಡಿಪೋದಲ್ಲಿ ಈ ಬಗ್ಗೆ ಕೇಳಿದರೆ ಯಂತ್ರಗಳ ಸರಬರಾಜು ನಿಂತಿದೆ. ಪ್ರಿಂಟ್‌ ಆಗಿರುವ ಟಿಕೆಟ್‌ ಹರಿದು ನೀಡಿ ಎಂದು ಅಧಿಕಾರಿಗಳು ಸಲಹೆ ಮಾಡಿದ್ದಾರೆ ಎಂದು ನಿರ್ವಾಹಕರು ಹೇಳುತ್ತಾರೆ.

ಸದ್ಯ ಮುದ್ರಿತ ಟಿಕೆಟ್‌ ಇಲ್ಲದ ಕಾರಣ ಬಿಎಂಟಿಸಿ ನಿರ್ವಾಹಕರು ಕೆಎಸ್‌ಆರ್‌ಟಿಸಿ ಟಿಕೆಟ್‌ಗಳನ್ನೇ ಬಳಸುತ್ತಿದ್ದಾರೆ.

ಶಾಂತಿನಗರದಲ್ಲಿರುವ ತನ್ನ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಕೆಎಸ್‌ಆರ್‌ಟಿಸಿ ಪ್ರತಿದಿನ ಸಾವಿರಾರು ಟಿಕೆಟ್‌ಗಳನ್ನು ಮುದ್ರಿಸಿ ಬಿಎಂಟಿಸಿಗೆ ಪೂರೈಸುತ್ತಿದೆ.ಈ ಮೊದಲು ಕೂಡ ಕೆಎಸ್‌ಆರ್‌ಟಿಸಿಯೇ ಟಿಕೆಟ್‌ ಮುದ್ರಿಸಿ ಬಿಎಂಟಿಸಿಗೆ ನೀಡುತ್ತಿತ್ತು. ಇಟಿಎಂ ಬಳಕೆ ಹೆಚ್ಚಿದ ನಂತರ ಟಿಕೆಟ್‌ಗಳ ಮುದ್ರಣ ಕಾರ್ಯ ಕಡಿಮೆಯಾಗಿತ್ತು. ಮತ್ತೆ ಈಗ ಮೂರ‍್ನಾಲ್ಕು ತಿಂಗಳಿಂದ ಕೆಎಸ್‌ಆರ್‌ಟಿಸಿಯ ಪ್ರಿಂಟಿಂಗ್‌ ಪ್ರೆಸ್‌ ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದು 10 ಲಕ್ಷ ಟಿಕೆಟ್‌ ಮುದ್ರಿಸಿದ್ದಾರೆ.

ರೇಗುವ ನಿರ್ವಾಹಕರು

ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಪ್ರಯಾಣ ಮಾಡುವಾಗ ರಿಯಾಯಿತಿ ಇರುತ್ತದೆ. ಟಿಕೆಟ್‌ ಯಂತ್ರಗಳಲ್ಲಿ ಸ್ವಯಂಚಾಲಿತವಾಗಿ ಟಿಕೆಟ್‌ಗಳನ್ನು ಸುಲಭವಾಗಿ ಕೊಡಬಹುದಾಗಿತ್ತು. ಮುದ್ರಿತ ಟಿಕೆಟ್‌ಗಳಲ್ಲಿ ರಿಯಾಯ್ತಿ ಲೆಕ್ಕ ಹಾಕುವುದು ಕಷ್ಟವಾಗುತ್ತಿದೆ ಎಂದು ನಿರ್ವಾಹಕರು ಹೇಳುತ್ತಾರೆ.

ಜನದಟ್ಟನೆ ಸಮಯದಲ್ಲಿ ರಿಯಾಯ್ತಿ ಕೇಳಿದರೆ ನಿರ್ವಾಹಕರು ರೇಗುತ್ತಾರೆ ಎಂದು ಪ್ರಯಾಣಿಕರು ದೂರುತ್ತಿದ್ದಾರೆ.

ಮುದ್ರಿತ ಟಿಕೆಟ್‌ ನೀಡಿ ಅಭ್ಯಾಸ ಇಲ್ಲದ ನಿರ್ವಾಹಕರು ಮಾರ್ಗಮಧ್ಯೆ ಬಸ್‌ ನಿಲ್ಲಿಸಿಕೊಂಡು ಟಿಕೆಟ್‌ ನೀಡುತ್ತಿದ್ದಾರೆ. ಇದರಿಂದ ಬಸ್‌ಗಳು ವಿಳಂಬವಾಗಿ ಚಲಿಸುತ್ತಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

***

ಶೇ 30ರಷ್ಟು ಯಂತ್ರಗಳ ನಿರ್ವಹಣೆ ಮತ್ತು ದುರಸ್ತಿ ಮಾಡಿಲ್ಲ. ದುರಸ್ತಿಯಾಗದ ಕಾರಣ ಎರಡು ಸಾವಿರಕ್ಕೂ ಹೆಚ್ಚು ಮಷಿನ್‌ಗಳನ್ನು ಸೇವೆಯಿಂದ ಹಿಂದಕ್ಕೆ ಪಡೆಯಲಾಗಿದೆ.

– ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ

ಪೂರಕ ಮಾಹಿತಿ: ಪ್ರಕಾಶ ನಾಯ್ಕ್‌ ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.