ADVERTISEMENT

ಪ್ಲಾಸ್ಟಿಕ್‌ ತ್ಯಾಜ್ಯದಿಂದ ವಿಮಾನ ನಿಲ್ದಾಣ ರಸ್ತೆ

# ಪ್ಲಾಸ್ಟಿಕ್‌ ಬೇಕು ಅಭಿಯಾನ: ತ್ಯಾಜ್ಯದಿಂದ 50 ಕಿ.ಮೀ ರಸ್ತೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 19:45 IST
Last Updated 2 ಅಕ್ಟೋಬರ್ 2019, 19:45 IST
   

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಿರ್ಮಿಸಲಾಗುವ ರಸ್ತೆಗಳಿಗೆ ಬಳಸಿ ಬಿಸಾಕಿದ ಪ್ಲಾಸ್ಟಿಕ್‌ ಕಸವನ್ನು ಬಳಸಿಕೊಳ್ಳಲಾಗುತ್ತಿದೆ.

ವಿಮಾನ ನಿಲ್ದಾಣದ ಆವರಣದ ಒಳಗಡೆ ವಿಸ್ತಾರವಾದ ರಸ್ತೆಗಳನ್ನು ನಿರ್ಮಿಸಲು ಅನೇಕ ಟನ್‌ ಪ್ಲಾಸ್ಟಿಕ್ ತ್ಯಾಜ್ಯ ಅಗತ್ಯವಿದೆ. ಅದಕ್ಕಾಗಿ ಸಾರ್ವಜನಿಕರು, ಶಾಲೆ, ಕಾಲೇಜುಗಳು, ಕಂಪನಿಗಳು ಮತ್ತು ಸಂಘ, ಸಂಸ್ಥೆಗಳಿಂದ ಪ್ಲಾಸ್ಟಿಕ್‌ ಕಸವನ್ನು ಸಂಗ್ರಹಿಸಲು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ (ಬಿಐಎಎಲ್‌) #ಪ್ಲಾಸ್ಟಿಕ್‌ಬೇಕು ಅಭಿಯಾನ ಆರಂಭಿಸಿದೆ.

ಈ ಅಭಿಯಾನದ ಮೂಲಕ ಸಂಗ್ರಹಿಸಲಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ತನ್ನ ಆವರಣದಲ್ಲಿ ರಸ್ತೆಗಳನ್ನು ನಿರ್ಮಿಸಲು ಬಳಸಿ ಕೊಳ್ಳಲಾಗುವುದು ಎಂದು ಬಿಐಎಎಲ್‌ ಹೇಳಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ಐಟಿಸಿ ಫುಡ್ಸ್‌ ಡಿವಿಜನ್‌ ಮತ್ತು ಬಿಗ್‌ ಎಫ್ಎಂ ಕೂಡ ಕೈಜೋಡಿಸಿವೆ.

ADVERTISEMENT

ಪ್ಲಾಸ್ಟಿಕ್‌ ಹಾವಳಿಗೆ ಕಡಿವಾಣ ಹಾಕುವ ಜತೆಗೆ ಸ್ವಚ್ಛ ಮತ್ತು ಸುಸ್ಥಿರ ಪರಿಸರಕ್ಕಾಗಿ ಮೂಲದಲ್ಲಿಯೇ ಕಸ ವಿಂಗಡಣೆಯ ಬಗ್ಗೆಯೂ ಜನಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶ.

ಬಿಐಎಎಲ್‌ ಮೂರು ಶಾಲೆಗಳನ್ನು ದತ್ತು ತೆಗೆದುಕೊಂಡಿದೆ. ಬೆಟ್ಟಕೋಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ವಿಜಯಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಮಾದರಿ ಶಾಲೆ ಮತ್ತು ಅರ್ದೇಶನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ಲಾಸ್ಟಿಕ್‌ ಬೇಕು ಅಭಿಯಾನ ಆರಂಭವಾಗಲಿದೆ.

ದೇವನಹಳ್ಳಿ ತಾಲ್ಲೂಕಿನ ಐದು ಪಂಚಾಯ್ತಿಗಳು, ಖಾಸಗಿ ಶಾಲೆಗಳು, ಬೆಂಗಳೂರು ಉತ್ತರ ಭಾಗದ ಅಪಾರ್ಟ್‌ಮೆಂಟ್‌ ಹಾಗೂ ಮನೆಗಳಿಂದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬಿಐಎಎಲ್‌ ಸಂಗ್ರಹಿಸಲಿದೆ. ಐಟಿಸಿ ಲಿಮಿಟೆಡ್‌ನ ‘ಬೆಟರ್‌ ವರ್ಲ್ಡ್‌’ ಕಾರ್ಯಕ್ರಮದ ಸಹಯೋಗದಲ್ಲಿ ಬೆಂಗಳೂರಿನ 20 ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ಪ್ರತಿಯೊಬ್ಬರಿಂದಲೂ ಒಂದು ಕೆ.ಜಿ. ಪ್ಲಾಸ್ಟಿಕ್‌ಕಸ ಸಂಗ್ರಹಿಸುವ ಗುರಿ ಇದೆ.

ಕೆ.ಕೆ. ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣಾ ಸಂಸ್ಥೆಗೆಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸುವ ಗುತ್ತಿಗೆ ನೀಡಲಾಗಿದೆ. ಪ್ರತಿನಿತ್ಯ ಸಂಗ್ರಹಿಸುವ ಪ್ಲಾಸ್ಟಿಕ್‌ ಅನ್ನು ಸಂಸ್ಕರಿಸಿದ ನಂತರ ಬಿಟುಮೆನ್‌ (ಟಾರ್ ಅಥವಾ ಡಾಂಬರ್‌) ಜತೆ ಬೆರೆಸಿ ರಸ್ತೆ ನಿರ್ಮಾಣದಲ್ಲಿ ಬಳಸಲಾಗುವುದು.

ಪ್ರಾಯೋಗಿಕವಾಗಿಮೊದಲ ಹಂತದಲ್ಲಿ ವಿಮಾನ ನಿಲ್ದಾಣದ ಆವರಣದಲ್ಲಿ 50 ಕಿ.ಮೀ ರಸ್ತೆ ನಿರ್ಮಾಣದಲ್ಲಿ ಸಂಸ್ಕರಿಸಿದ ಪ್ಲಾಸ್ಟಿಕ್‌ ಬಳಸಲಾಗುವುದು.ಪಾಲಿಮರೈಸ್ಡ್‌ ರಸ್ತೆಗಳು ಎಲ್ಲ ರೀತಿಯ ವಾತಾವರಣ ಮತ್ತು ಋತುಗಳಿಗೂ ಸೂಕ್ತವಾಗಿದ್ದು, ಉಳಿದ ಸಾಮಾನ್ಯ ರಸ್ತೆಗಳಿಂತ ಹೆಚ್ಚು ಬಾಳಿಕೆ ಬರುತ್ತವೆ. ರಸ್ತೆಗಳಿಂದ ಉತ್ತಮ ಫಲಿತಾಂಶ ದೊರೆತರೆ ತನ್ನ ವ್ಯಾಪ್ತಿಯಲ್ಲಿರುವ ಎಲ್ಲವನ್ನೂ ಪಾಲಿಮರೈಸ್ಡ್‌ ರಸ್ತೆಯಾಗಿ ಪರಿವರ್ತಿಸಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.