ADVERTISEMENT

ಕೌಶಲ ವೃದ್ಧಿಸುವುದೇ ಇವರ ಕಾಯಕ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 22 ನವೆಂಬರ್ 2018, 19:45 IST
Last Updated 22 ನವೆಂಬರ್ 2018, 19:45 IST
ಸ್ನೇಹಾ ರಾಕೇಶ್‌
ಸ್ನೇಹಾ ರಾಕೇಶ್‌   

ನಿರುದ್ಯೋಗ ನಮ್ಮ ಮುಂದಿರುವ ಬಹುದೊಡ್ಡ ಸಮಸ್ಯೆ. ಅದು ನೀಗಬೇಕಾದರೆ ಏನು ಮಾಡಬೇಕು? ಸರ್ಕಾರ ಕೆಲಸ ಕೊಡಬೇಕು ಎಂದು ಕಾದು ಕುಳಿತರೆ ಸಾಕೇ? ಹೀಗೆ ಚಿಂತಿಸಿದವರು ಸ್ನೇಹಾ ರಾಕೇಶ್. ಯುವಜನತೆಗೆ ಕೌಶಲ್ಯಾಭಿವೃದ್ಧಿಯ ಬಗ್ಗೆ ತಿಳಿಸಬೇಕು, ತಂತ್ರಜ್ಞಾನವನ್ನು ಬಳಸಿ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದು ನಿಶ್ಚಯಿಸಿದ ಅವರು ಸಾವಿರಾರು ನಿರುದ್ಯೋಗಿಗಳಿಗೆ ತಂತ್ರಜ್ಞಾನದ ಬಗ್ಗೆ ಉಚಿತ ತರಬೇತಿ ನೀಡಿದ್ದಾರೆ.

ಪ್ರಸ್ತುತ 'ಆಕಾರ್ ಮ್ಯಾಕ್ಸ್‌' ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಸ್ನೇಹಾ ರಾಕೇಶ್‌, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹುಳ್ಳೇನಹಳ್ಳಿ ಗ್ರಾಮದವರು. ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಸಮಾಧಾನಕರವಾಗಿಲ್ಲದ ಕಾರಣ ಇವರು ಡಿಪ್ಲೊಮೊ ಕೋರ್ಸ್‌ ಮುಗಿಸಿ, ಪಾರ್ಟ್‌ಟೈಮ್‌ ಕೆಲಸವೊಂದಕ್ಕೆ ಸೇರಿಕೊಂಡುಬಿ-ಟೆಕ್‌ ಕೋರ್ಸ್‌ಗೆ ಸಂಜೆ ಕಾಲೇಜಿನಲ್ಲಿ ಪ್ರವೇಶ ಪಡೆದರು.

ಇವರು ಕೆಲಸ ಮಾಡುತ್ತಿದ್ದ ಸಂಸ್ಥೆಯವರು ಪರೀಕ್ಷಾ ಸಮಯದಲ್ಲೂ ರಜೆ ನೀಡದ ಕಾರಣ, ಕೆಲಸ ಕಳೆದುಕೊಂಡು, ಮತ್ತೆ ಬೇರೆ ಕೆಲಸಕ್ಕೆ ಹುಡುಕಾಟ ಶುರುವಾಗುತ್ತದೆ. ಸರಿಯಾದ ಕೆಲಸ ಸಿಗದಿರುವಾಗ, ಬೇಸತ್ತ ಸ್ನೇಹಾ ರಾಕೇಶ್‌ ಬೇರೊಬ್ಬರ ಕೈಕೆಳಗೆ ಕೆಲಸ ಮಾಡುವುದು ಬೇಡವೆಂದು ನಿರ್ಧರಿಸಿ, ಇತರರಿಗೆ ಕೆಲಸ ಕೊಡಲು ಪಣತೊಟ್ಟರು.

ADVERTISEMENT

ಅವರ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದರೂ ತನ್ನ ತಾತ ಸೋಮೇಗೌಡನ ನೆರವಿನಿಂದ ಬ್ಯಾಂಕ್‌ನಲ್ಲಿ ಸಾಲ ಪಡೆದು2015 ಜುಲೈನಲ್ಲಿ ಆಕಾರ್ ಮ್ಯಾಕ್ಸ್ ಕಂಪನಿ ಸ್ಥಾಪಿಸಿದರು.ಸತತ ಪ್ರಯತ್ನ ಮತ್ತು ಹೊಸ ಅನ್ವೇಷಣೆಗಳಿಂದ ಕಂಪನಿ ನಡೆಸುತ್ತಾ ಹಲವರಿಗೆ ಉದ್ಯೋಗ ನೀಡಿದ್ದಾರೆ.

ಕಂಪನಿ ಪ್ರಾರಂಭಿಸಿದ ಮೇಲೆ ಎಂ.ಎಸ್‌.ರಾಮಯ್ಯ ಸ್ಕೂಲ್‌ ಆಫ್‌ ಅಡ್ವಾನ್ಸ್ಡ್‌ ಸ್ಟಡೀಸ್‌ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಹಾಗೂ ನೆಟ್‍ವರ್ಕಿಂಗ್‍ ವಿಷಯದ ಬಗ್ಗೆ ಸ್ನಾತಕೋತ್ತರ ಪದವಿಯನ್ನು ಪಡೆದರು.

ಸ್ನೇಹಾ ಅವರು ತನಗಾದ ಅವಮಾನಗಳು ಬೇರೆಯವರಿಗೆ ಆಗಬಾರದೆಂದರೆ, ತನಗೆ ತಿಳಿದಿರುವ ತಂತ್ರಜ್ಞಾನ ಕಲೆಯ ಬಗ್ಗೆ ಯುವಜನರಿಗೆ ತಿಳಿಸಬೇಕೆಂದು ಎಂದು 2017ರಲ್ಲಿ ‘ಸಮಗ್ರಾಭಿವೃದ್ಧಿ ಟ್ರಸ್ಟ್‌‘ ಆರಂಭಿಸಿದರು. ಇದರಲ್ಲಿ ಆ್ಯಪ್‌ ಅಭಿವೃದ್ಧಿ, ವೆಬ್‌ಸೈಟ್‌ ಅಭಿವೃದ್ಧಿ, ಡಿಜಿಟಲ್‌ ಮಾರುಕಟ್ಟೆ, ವ್ಯಾಪಾರ ಕೌಶಲ, ಮಾಲೀಕತ್ವ ಕೌಶಲ, ವ್ಯಾಪಾರ ವಿಸ್ತರಣೆ ಹೀಗೆ ತಂತ್ರಜ್ಞಾನದ ಬಗ್ಗೆ ಉಚಿತವಾಗಿ ತರಬೇತಿ ನೀಡಲು ಆರಂಭಿಸಿದರು.

ಪ್ರಸ್ತುತ ಈ ತರಬೇತಿಯನ್ನು ವಾರಾಂತ್ಯ ತರಗತಿಗಳಲ್ಲಿ ನೀಡುತ್ತಿದ್ದು, ಒಂದು ಬ್ಯಾಚ್‌ಗೆ 15 ಮಂದಿಯಂತೆ ತರಬೇತಿ ಪಡೆಯುತ್ತಿದ್ದಾರೆ. ಒಂದೊಂದು ತರಬೇತಿಯೂ 16 ವಾರಗಳ ಅವಧಿಯದ್ದಾಗಿರುತ್ತದೆ. ಇಲ್ಲಿಯವರೆಗೆ ಸುಮಾರು 2000 ನಿರುದ್ಯೋಗಿಗಳು ಈ ತರಬೇತಿಯನ್ನು ಪಡೆದಿದ್ದಾರೆ. ಇನ್ನು ಹೆಚ್ಚಿನ ಮಂದಿ ತರಬೇತಿಗೆ ಬಂದು ವಾರದ ದಿನದಲ್ಲೂ ಕೇಳಿದರೆ ತರಬೇತಿ ನೀಡಲು ಸಿದ್ದವಾಗಿದ್ದೇವೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಸ್ನೇಹಾ.

ಈ ತರಬೇತಿ ಪಡೆಯಬೇಕಾದರೆ ಹೆಚ್ಚಿನ ಓದೇನೂ ಬೇಕಾಗಿಲ್ಲ. ಎಸ್‌ಎಸ್‌ಎಲ್‌ಸಿ ಓದಿದ್ದು ಇಂಗ್ಲಿಷ್‌ ಅರ್ಥಮಾಡಿಕೊಂಡು ನಾವು ಹೇಳಿಕೊಡವುದನ್ನು ಗ್ರಹಿಸಿದರೆ ಸಾಕು. ಯುವಜನರಿಗೆ ಕೌನ್ಸೆಲಿಂಗ್‌ ಮಾಡಿ ಅವರಿಗೆ ಸರಿಹೊಂದುವಂತಹ ತರಬೇತಿಯನ್ನು ನೀಡಲಾಗುತ್ತದೆ ಎನ್ನುತ್ತಾರೆ ಸ್ನೇಹಾ.

ಇಂದು ಹೆಚ್ಚಿನ ಯುವಜನತೆಗೆ ‘ಉದ್ಯೋಗ ಹುಡಕಬೇಡಿ ಉದ್ಯೋಗ ಸೃಷ್ಟಿಸಿ‘ ಎಂಬ ಕಿವಿ ಮಾತು ಹೇಳಬೇಕಿದೆ ಎನ್ನುವುದು ಸ್ನೇಹಾರವರ ಅಭಿಮತ. ಇವರ ಕಾರ್ಯಸಾಧನೆಯನ್ನು ಗಮನಿಸಿ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ. ಸಂಪರ್ಕ–9880678662

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.