ADVERTISEMENT

ಹಸಿರು ಉಸಿರು: ಮನೆ–ಮನ ತಣಿಸುವ ಸಸ್ಯಗಳು

ಚಂದ್ರಶೇಖರ
Published 14 ಏಪ್ರಿಲ್ 2023, 19:30 IST
Last Updated 14 ಏಪ್ರಿಲ್ 2023, 19:30 IST
ತೂಗು ಕುಂಡದಲ್ಲಿ ಫರ್ನ್‌
ತೂಗು ಕುಂಡದಲ್ಲಿ ಫರ್ನ್‌   

ಮನೆಯಂಗಳದಲ್ಲಿ ಕೈತೋಟವಿದ್ದರೆ ಮನೆಯ ಅಂದ ಹೆಚ್ಚುತ್ತದೆ. ಮನೆಯ ಸುತ್ತ ಮರ- ಗಿಡಗಳಿದ್ದರೆ ವಾತಾವರಣ ತಂಪಾಗಿರುತ್ತದೆ. ಮನೆ ಒಳಾಂಗಣದಲ್ಲಿ ಹೂವು- ಅಲಂಕಾರಿಕ ಗಿಡಗಳಿದ್ದರೆ ಮನೆಯೂ ತಂಪಾಗಿ ಅಹ್ಲಾದಕರವಾಗಿರುತ್ತದೆ‌. ಹಾಗಾದರೆ, ಮನೆಯೊಳಾಂಗಣ ತಂಪಾಗಿಡುವ ಹೂವಿನ ಗಿಡಗಳಾವುವು ? ಅವುಗಳನ್ನು ಬೆಳೆಸುವುದು ಹೇಗೆ ? ಎಲ್ಲಿ ಜೋಡಿಸುವುದು‌‌ – ತಿಳಿಯೋಣ ಬನ್ನಿ.

ತಂಪು ನೀಡುವ ಫರ್ನ್
’ಗಾಳಿಯ ಸಸ್ಯ’ ಎಂದೇ ಕರೆಯುವ ಫರ್ನ್‌ ಗಿಡ, ಒಂದು ಅಲಂಕಾರಿಕ ಸಸ್ಯವೂ ಹೌದು. ಸಣ್ಣ ಸಣ್ಣ ತೂಗು ಕುಂಡಗಳಲ್ಲಿ, ಕಾಯರ್‌ ಪಿತ್‌(ಕೋಕೊಪಿತ್‌) ತುಂಬಿ, ಈ ಫರ್ನ್ ಸಸ್ಯ ನೆಟ್ಟು ಬೆಳೆಸಬಹುದು. ಸುಲಭವಾಗಿ ಬೆಳೆಯುತ್ತದೆ. ಆಗಾಗ್ಗೆ ನೀರು ಚಿಮುಗಿಸುತ್ತಿದ್ದರೆ ಸಾಕು.

ಈ ಫರ್ನ್‌ ಸಸ್ಯವಿರುವ ಕುಂಡವನ್ನು ಮನೆಯೊಳಗೆ ಗಾಳಿ ಬೀಸುವ ಜಾಗದಲ್ಲಿ ತೂಗು ಹಾಕಿದರೆ. ಮನೆಯೊಳಗೆ ತಣ್ಣಗಿನ ಗಾಳಿ ಬೀಸುತ್ತದೆ. ಮನೆಯ ಒಳಾಂಗಣವೂ ಚಂದ ಕಾಣುತ್ತದೆ.

ADVERTISEMENT

ಆರ್ಕಿಡ್ ಸಸ್ಯಗಳು
ತೆಂಗಿನಕಾಯಿಯನ್ನು ಬೇರ್ಪಡಿಸಿದ ಸಿಪ್ಪೆಯನ್ನು ತೆಗೆದುಕೊಳ್ಳಿ. ಅದರ ಒಳಗಡೆ ಸ್ವಲ್ಪ ಇದ್ದಿಲನ್ನು ತುಂಬಿ. ಡೆಂಡ್ರೋಬಿಯಂ ಅಥವಾ ಇನ್ನಾವುದೇ ತಳಿಯ ಆರ್ಕಿಡ್‌ ಅನ್ನು ತೆಗೆದುಕೊಂಡು ಆರ್ಕೀಡನ್ನು ಇದರೊಳಗೆ ಬೆಳೆಸಬಹುದು. ಅದನ್ನು ಮನೆಯ ಒಳಾಂಗಣದಲ್ಲಿ ಕಿಟಕಿಯ ಬಳಿಯಲ್ಲಿ ತೂಗು ಹಾಕಿದರೆ, ಮನೆಯ ಅಂದವೂ ಹೆಚ್ಚುತ್ತದೆ. ವಾತಾವರಣವೂ ತಂಪಾಗಿರುತ್ತದೆ.

ಹೂ ಪಕಳೆಗಳು
ಅಗಲ ಬಾಯಿಯ ಮಣ್ಣಿನ ಪಾತ್ರೆಯಲ್ಲಿ ಪರಿಮಳ ಸೂಸುವ, ತಿಳಿ ಬಣ್ಣದ ಹೂವಿನ ಪಕಳೆಗಳನ್ನು ಹಾಕಿಡಿ. ಉದಾಹರಣೆಗೆ; ಗುಲಾಬಿ, ಪ್ಲುಮೆರಿಯಾ, ಚೆಂಡು ಹೂವು, ಮಲ್ಲಿಗೆ.. ಇಂಥವು. ಮನೆಯ ಪ್ರವೇಶ ದ್ವಾರದಲ್ಲೋ, ಪಡಸಾಲೆಯಲ್ಲೋ ಅಥವಾ ಎಲ್ಲಿ ಅನುಕೂಲವೋ, ಅಲ್ಲಿ ಈ ಪಾತ್ರೆಯನ್ನು ಇಡಿ. ಇಡೀ ದಿನ ಮನೆ ಒಳಾಂಗಣದಲ್ಲಿ ಪರಿಮಳ ಪಸರಿಸಿರುತ್ತದೆ. ಇದರಿಂದ, ಮನೆ ತಂಪಾಗುವ ಜೊತೆಗೆ, ಮನಸ್ಸಿಗೂ ಹಿತವಾಗಿರುತ್ತದೆ. ಕೆಲವರು ಈ ಹೂ ಪಾತ್ರೆಯನ್ನು ಅಂಗಳದಲ್ಲಿಡುತ್ತಾರೆ. ಇನ್ನೂ ಕೆಲವರು ಎತ್ತರಿಸಿದ ಪೈಪ್‌ ಗಳ ಮೇಲೂ ಜೋಡಿಸುತ್ತಾರೆ. ಕೆಲವರು ದೀಪದ ಕಂಬದ ಕೆಳಭಾಗದಲ್ಲಿಡುತ್ತಾರೆ.

ಜಲಸಸ್ಯಗಳನ್ನು ಬೆಳೆಸಿ
ಮಣ್ಣಿನ ಮಡಿಕೆಯ ತಳಕ್ಕೆ ಸ್ವಲ್ಪ ಮಣ್ಣು, ನೀರು ಹಾಕಿ, ಅದರೊಳಗೆ ಗೆಡ್ಡೆಗಳನ್ನು ಊರಿ ವಾಟರ್‌ ಲಿಲ್ಲಿಯಂತಹ ಸಸ್ಯಗಳನ್ನು ಬೆಳೆಸಬಹುದು. ಇವೇ ಜಲ ಸಸ್ಯಗಳು. ವಾಟರ್‌ ಲೆಟ್ಯೂಸ್‌ ತರಹ ಜಲ ಸಸ್ಯಗಳನ್ನೂ ಮಣ್ಣಿನ ಮಡಿಕೆಗಳಲ್ಲಿ ಹಾಕಿ ಮನೆ ಒಳಗಡೆ ಇಡಬಹುದು. ಮನೆಯ ಅಂಗಳ ಸ್ವಲ್ಪ ವಿಶಾಲವಾಗಿದ್ದರೆ, ಇಂಥ ಜಲಸಸ್ಯಗಳನ್ನು ಬೆಳೆಸಲು, ಚಂದವಾಗಿ ಜೋಡಿಸಲು ಅನುಕೂಲವಾಗುತ್ತದೆ.

ಚಿತ್ರಗಳು : ಸೌಗಂಧಿಕ ಚಂದ್ರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.