ADVERTISEMENT

Fact Check: ಪವನ್ ಕಲ್ಯಾಣ್ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದಾರೆ ಎಂಬುದು ಸುಳ್ಳು

ಫ್ಯಾಕ್ಟ್ ಚೆಕ್
Published 13 ಮಾರ್ಚ್ 2025, 23:30 IST
Last Updated 13 ಮಾರ್ಚ್ 2025, 23:30 IST
   

ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ, ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಬಿಳಿ ಟೋಪಿ ಧರಿಸಿ, ಮುಸ್ಲಿಂ ಕುಟುಂಬವೊಂದರಲ್ಲಿ ಆಹಾರ ಸೇವಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೊ ಅನ್ನು ಹಂಚಿಕೊಳ್ಳುತ್ತಿರುವವರು, ಎನ್‌ಡಿಎ ಪಾಲುದಾರ ಪಕ್ಷದ ಮುಖಂಡ ಪವನ್ ಕಲ್ಯಾಣ್ ಅವರು ರಂಜಾನ್ ತಿಂಗಳ ಸಲುವಾಗಿ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದರು ಎಂದು ಪ್ರತಿ‍ಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ವಿಡಿಯೊ ಅನ್ನು ಇನ್‌ವಿಡ್ ಟೂಲ್ ಮತ್ತು ಗೂಗಲ್ ಲೆನ್ಸ್ ಬಳಸಿ ಪರಿಶೀಲನೆ ಮಾಡಿದಾಗ, ಅದೇ ವಿಡಿಯೊ ಅನ್ನು ಬಹುತೇಕರು ಇಂಥದ್ದೇ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿರುವುದು ಕಂಡುಬಂತು. ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ‘ಹನ್ಸ್ ಇಂಡಿಯಾ’ ವೆಬ್‌ಸೈಟ್‌ನಲ್ಲಿ ‌2019ರ ಮಾ. 25ರಂದು ಈ ಚಿತ್ರದ ಜತೆಗೆ ಇಂಥ ಮತ್ತಷ್ಟು ಚಿತ್ರಗಳು ಪ್ರಕಟವಾಗಿದ್ದು ಕಂಡಿತು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಗುಂಟೂರಿನಲ್ಲಿ ಪವನ್ ಕಲ್ಯಾಣ್ ಅವರು ತಮ್ಮ ಮುಸ್ಲಿಂ ಸ್ನೇಹಿತರ ಮನೆಯಲ್ಲಿ ಬಿರಿಯಾನಿ ಸವಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. 6 ವರ್ಷಗಳ ಹಳೆಯ ವಿಡಿಯೊ ಅನ್ನು ಕೆಲವರು ಸುಳ್ಳು ಪ್ರತಿಪಾದನೆಗಳೊಂದಿಗೆ ಈಗ ಹಂಚಿಕೊಳ್ಳುತ್ತಿದ್ದಾರೆ ಎಂದು ಪಿಟಿಐ ಫ್ಯಾಕ್‌ ಚೆಕ್ ವರದಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT