‘ಜೂಮ್ ಮಾಡಿ ಎಡಬದಿಗೆ ನೋಡಿ. ಒಂದು ಪುಸ್ತಕ ಇದೆ. ಅದರ ಹೆಸರು ‘How to convert India into Christian nation’ ಎಂಬುದಾಗಿದೆ. ಇದಕ್ಕಿಂತ ಬೇರೆ ಉದಾಹರಣೆಯ ಅವಶ್ಯಕತೆ ಇದೆಯೇ?’ ಎಂದು ಕೇಳಿರುವ ಬರಹದೊಂದಿಗೆ ಫೋಟೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದೇ ರೀತಿಯ ಅಭಿಪ್ರಾಯ ಇರುವ ಬರಹ ಹಾಗೂ ಫೋಟೊವನ್ನು 2021ರಿಂದಲೂ ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ತಿರುಚಲಾದ ಚಿತ್ರವಾಗಿದೆ.
2020ರ ಮೇ 27ರಂದು ಬಿಹಾರ ಚುನಾವಣೆಯನ್ನು ಉದ್ದೇಶಿಸಿ ಸೋನಿಯಾ ಗಾಂಧಿ ಅವರು ಮಾತನಾಡಿದ್ದ ವಿಡಿಯೊವನ್ನು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಆ ವಿಡಿಯೊವಿನ ಸ್ಕ್ರೀನ್‌ಶಾಟ್ ಅನ್ನು ಪಿಟಿಐ ಪ್ರಕಟಿಸಿತ್ತು. @noconversion ಟ್ವಿಟ್ಟರ್ ಖಾತೆಯು ಮೊದಲ ಬಾರಿಗೆ (2021) ಈ ಫೋಟೊವನ್ನು ಹಂಚಿಕೊಂಡಿತ್ತು. @noconversion ಹೆಸರಿಗೆ ವಾಟರ್‌ಮಾರ್ಕ್ ಕೂಡ ಆ ಚಿತ್ರದಲ್ಲಿತ್ತು. ಆದರೆ, ಈಗ ಹಂಚಿಕೆಯಾಗುತ್ತಿರುವ ಫೋಟೊದಲ್ಲಿ ಈ ಗುರುತು ಇಲ್ಲ. ಈ ಗುರುತು ಇರುವ ಕಡೆಯಿಂದ ಫೋಟೊವನ್ನು ಕತ್ತರಿಸಲಾಗಿದೆ. ಹಂಚಿಕೆಯಾಗಿರುವ ಚಿತ್ರದಲ್ಲಿ ಗುರುತು ಮಾಡಿರುವ ಪುಸ್ತಕಗಳು ಮೂಲ ಚಿತ್ರದಲ್ಲಿ ಇಲ್ಲ. ಆ ಪುಸ್ತಕಗಳನ್ನು ಎಡಿಟ್ ಮಾಡಿ ಚಿತ್ರದಲ್ಲಿ ಸೇರಿಸಲಾಗಿದೆ. ತಿರುಚಲಾದ ಚಿತ್ರವನ್ನು ಬಳಸಿಕೊಂಡು, ಸೋನಿಯಾ ಗಾಂಧಿ ಅವರ ಬಗ್ಗೆ ತಪ್ಪಾಗಿ ಪ್ರಚಾರ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.