ADVERTISEMENT

ಫ್ಯಾಕ್ಟ್‌ ಚೆಕ್‌ | ವೇದಿಕೆ ಮೇಲೆ ವಿಮಾನಯಾನ ಸಚಿವರ ನೃತ್ಯ; ವಿಡಿಯೊ ಸುಳ್ಳು

ಫ್ಯಾಕ್ಟ್ ಚೆಕ್
Published 12 ಡಿಸೆಂಬರ್ 2025, 0:31 IST
Last Updated 12 ಡಿಸೆಂಬರ್ 2025, 0:31 IST
   

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮ್‌ ಮೋಹನ್‌ ನಾಯ್ಡು ಅವರು ವೇದಿಕೆಯೊಂದರಲ್ಲಿ ನೃತ್ಯ ಮಾಡುತ್ತಿರುವ ವಿಡಿಯೊವನ್ನು ‘ಎಕ್ಸ್‌’ ಬಳಕೆದಾರರೊಬ್ಬರು ಪೋಸ್ಟ್‌ ಮಾಡಿದ್ದಾರೆ. ‘ಇಂಡಿಗೊ ಬಿಕ್ಕಟ್ಟಿನಿಂದಾಗಿ ವಿಮಾನಗಳ ಹಾರಾಟ ವಿಳಂಬವಾಗಿರುವಾಗ, ವಿಮಾನ ನಿಲ್ದಾಣಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವಾಗ ವಿಮಾನಯಾನ ಸಚಿವ ನೃತ್ಯ ಮಾಡುತ್ತಿದ್ದಾರೆ. ಈ ಸರ್ಕಾರಕ್ಕೆ ಆಡಳಿತಕ್ಕಿಂತಲೂ ಮನರಂಜನೆಯೇ ಮುಖ್ಯ. ನೃತ್ಯ ನಿಲ್ಲಿಸಿ, ನೀವು ಸೃಷ್ಟಿಸಿರುವ ಗೊಂದಲವನ್ನು ಸರಿಪಡಿಸಿ’ ಎಂದು ಆ ಪೋಸ್ಟ್‌ನಲ್ಲಿ ಹೇಳಲಾಗಿದೆ. ಆದರೆ, ಇದು ಸುಳ್ಳು.

ವಿಡಿಯೊದ ಕೀ ಫ್ರೇಮ್‌ ಒಂದನ್ನು ಗೂಗಲ್‌ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ ಹಲವರು ಇದೇ ವಿಡಿಯೊವನ್ನು ಹಂಚಿಕೊಂಡಿರುವುದು ಕಂಡು ಬಂತು. ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಾಟ ನಡೆಸಿದಾಗ ಇದೇ ವಿಡಿಯೊವನ್ನು ಈ ಟಿವಿ ಆಂಧ್ರಪ್ರದೇಶ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ವರ್ಷದ ಜುಲೈ 29ರಂದು ಪೋಸ್ಟ್‌ ಮಾಡಿದ್ದು ತಿಳಿದು ಬಂತು. ವಿಜಯನಗರ ಜಿಲ್ಲೆಯ ಭೋಗಾಪುರಂನಲ್ಲಿ ನಡೆದ ಸಂಬಂಧಿಯೊಬ್ಬರ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಸಚಿವರು ನೃತ್ಯ ಮಾಡುತ್ತಿರುವುದರ ಬಗ್ಗೆ ವಿಡಿಯೊದಲ್ಲಿ ಮಾಹಿತಿ ಇತ್ತು. ಇದು ಈಗಿನ ವಿಡಿಯೊ ಅಲ್ಲ ಎಂಬುದು ಇದರಿಂದ ಸ್ಪಷ್ಟವಾಯಿತು. ಬೇರೆ ಯೂಟ್ಯೂಬ್‌ ಚಾನೆಲ್‌ಗಳಲ್ಲೂ ಈ ವಿಡಿಯೊ ಪೋಸ್ಟ್‌ ಮಾಡಲಾಗಿದೆ. ಹಳೆಯ ವಿಡಿಯೊವನ್ನು ಪೋಸ್ಟ್‌ ಮಾಡಿ ಇಂಡಿಗೊ ಬಿಕ್ಕಟ್ಟಿನ ಸಂದರ್ಭದಲ್ಲಿ ಸಚಿವರು ನೃತ್ಯ ಮಾಡುತ್ತಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಇವೆರಡಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT