ADVERTISEMENT

ಚುನಾವಣಾಪ್ರಚಾರ ವಾಹನದೊಳಗೆ ಕುಳಿತ ಗಂಭೀರ್,ಹೊರಗೆ ನಿಂತು ಕೈಬೀಸಿದ ವ್ಯಕ್ತಿ ಯಾರು?

​ಪ್ರಜಾವಾಣಿ ವಾರ್ತೆ
Published 12 ಮೇ 2019, 16:31 IST
Last Updated 12 ಮೇ 2019, 16:31 IST
   

ನವದೆಹಲಿ: ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾಜಿ ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಚುನಾವಣಾ ಪ್ರಚಾರದ ವೇಳೆ ತನ್ನಂತೆಯೇ ಹೋಲುವ ವ್ಯಕ್ತಿಯನ್ನು ಬಳಸಿಕೊಂಡಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗಿದೆ.

ಚುನಾವಣಾ ಪ್ರಚಾರ ವಾಹನದೊಳಗೆ ಆರಾಮವಾಗಿ ಕುಳಿತಿರುವ ಗೌತಮ್ ಗಂಭೀರ್, ವಾಹನದ ಮೇಲ್ಭಾಗದಲ್ಲಿ ನಿಂತು ಜನರತ್ತ ಕೈ ಬೀಸುತ್ತಿರುವುದು ಗಂಭೀರ್‌ನ್ನು ಹೋಲುತ್ತಿರುವ ವ್ಯಕ್ತಿ! ಈ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕ್ರಿಕೆಟ್ ಮ್ಯಾಚ್‌ನಲ್ಲಿ ಪಂದ್ಯದ ವೇಳೆ ಗಾಯವಾದಾಗ ರನ್ನರ್ ಬಳಸುವಂತೆ ಗಂಭೀರ್ ಕೂಡಾ ಇಲ್ಲಿಡ್ಯೂಪ್ ಬಳಸಿದ್ದಾರೆ. ಬಿಸಿಲಿನ ತಾಪ ತಾಳಲಾರದೆ ಗಂಭೀರ್ ಕಾರಿನೊಳಗೆ ಕುಳಿತು ತನ್ನ ಪ್ರತಿರೂಪದ ವ್ಯಕ್ತಿಯನ್ನು ಬಿಸಿಲಲ್ಲಿ ನಿಲ್ಲಿಸಿ ಚುನಾವಣಾ ಪ್ರಚಾರ ಮಾಡಿದ್ದಾರೆ ಎಂಬ ಟೀಕೆಗಳು ಕೇಳಿಬಂದಿವೆ.

ADVERTISEMENT

ಗಂಭೀರ್ ಚುನಾವಣಾ ಪ್ರಚಾರದ ಫೋಟೊ ಶೇರ್ ಮಾಡಿದ ಎಎಪಿ ಸೋಷ್ಯಲ್ ಮೀಡಿಯಾ ಮುಖ್ಯಸ್ಥ ಕಪಿಲ್ , 2 ಮತದಾರರ ಗುರುತಿನ ಚೀಟಿ, ಇಬ್ಬರು ಗೌತಮ್ ಗಂಭೀರ್ ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ನೇತಾರ ಗೌರವ್ ಅರೋರ ಎಂಬಾತ ಗೌತಮ್ ಗಂಭೀರ್‌ಗಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎಂದು ಎಎಪಿ ಜಂಟಿ ಕಾರ್ಯದರ್ಶಿ ಅಕ್ಷಯ್ ಮರಾಠೆ ಟ್ವೀಟಿಸಿದ್ದರು.

ಬಿಸಿಲಿನ ಝಳದಿಂದ ರಕ್ಷಿಸಿಕೊಳ್ಳುವ ಸಲುವಾಗಿಗಂಭೀರ್ ಮತ್ತು ಅವರ ಪಕ್ಷ ಡ್ಯುಪ್ಲಿಕೇಟ್ ವ್ಯಕ್ತಿಯನ್ನು ಬಳಸಿದ್ದಾರೆ ಎಂದು ದುರ್ಗೇಶ್ ಪಾಠಕ್ ಅವರು ಮಾಡಿದಟ್ವೀಟ್‌ನ್ನು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರಿಟ್ವೀಟ್ ಮಾಡಿದ್ದಾರೆ. ಹಿಂದಿ ಸುದ್ದಿ ವಾಹಿನಿ ಟಿವಿ9ನ ಪತ್ರಕರ್ತ ಕುಂದನ್ ಕುಮಾರ್ ಈ ಚಿತ್ರವನ್ನು ಮೊದಲು ಟ್ವೀಟ್ ಮಾಡಿದ್ದರು.

ಫ್ಯಾಕ್ಟ್‌ಚೆಕ್
ಈ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡಿದ ಆಲ್ಟ್ ನ್ಯೂಸ್, ಗಂಭೀರ್ ಮುಖವನ್ನು ಹೋಲುವ ವ್ಯಕ್ತಿ ಬಿಜೆಪಿಯೊಂದಿಗೆ ನಂಟು ಹೊಂದಿದವರೇ ಆಗಿದ್ದಾರೆ ಎಂದು ವರದಿ ಮಾಡಿದೆ.ಆ ವ್ಯಕ್ತಿಯ ಹೆಸರು ಗೌರವ್ ಅರೋರ.ಅರೋರ ಗೌತಮ್ ಗಂಭೀರ್ ಜತೆಗಿರುವ ಹಲವಾರು ವಿಡಿಯೊ, ಫೋಟೊಗಳು ಇವೆ, ಇವೆಲ್ಲವೂ ಗಂಭೀರ್ ಬಿಜೆಪಿಗೆ ಸೇರುವ ಮುನ್ನ ತೆಗೆದ ಚಿತ್ರಗಳಾಗಿವೆ.



ಗಂಭೀರ್ ಬದಲಿಯಾಗಿ ಬಂದಿದ್ದರೇ ಗೌರವ್ ಅರೋರ
ಗಂಭೀರ್ ಮತ್ತು ಅರೋರ ಚುನಾವಣಾ ಪ್ರಚಾರದ ಹಲವಾರು ಚಿತ್ರಗಳು ಆಲ್ಟ್ ನ್ಯೂಸ್‍ಗೆ ಲಭಿಸಿದೆ. ವೈರಲ್ ಆಗಿರುವ ಚಿತ್ರದಲ್ಲಿ ಅರೋರ ಜನರತ್ತ ಕೈ ಬೀಸುತ್ತಿದ್ದಾರೆ.ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಅರೋರ ಬಿಟ್ಟರೆ ಅವರೊಂದಿಗೆ ಇರುವ ಯಾವೊಬ್ಬ ವ್ಯಕ್ತಿಯೂ ಕೈ ಬೀಸುತ್ತಿಲ್ಲ.

ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆಲ್ಟ್ ನ್ಯೂಸ್, ದಿ ಇಂಡಿಯನ್ ಎಕ್ಸ್‌ಪ್ರೆಸ್ ಛಾಯಾಗ್ರಾಹಕ ಅಭಿನವ್ ಸಾಹಾ ಅವರನ್ನು ಸಂಪರ್ಕಿಸಿದೆ.ಸಾಹಾ ಅವರು ಈ ಸುದ್ದಿಯನ್ನು ವರದಿ ಮಾಡಿದ್ದರು.ಸಾಹಾ ಹೇಳಿದಂತೆ, 'ತಾನು ಮೊದಲ ಫೋಟೊ ಕ್ಲಿಕ್ ಮಾಡುವ ವೇಳೆ ಗಂಭೀರ್ ಪ್ರಚಾರ ವಾಹನದ ಮೇಲಿದ್ದರು, ಆಮೇಲೆ ತಾನು ಕಟ್ಟಡದ ಮೂರನೇ ಮಹಡಿಗೆ ಹೋದೆ. ಅಲ್ಲಿ ನನ್ನೊಂದಿಗೆ ಹಿರಿಯ ವ್ಯಕ್ತಿಯೊಬ್ಬರು ಇದ್ದರು.ಆದಾಗ್ಯೂ, ಅಷ್ಟು ಹೊತ್ತಿಗೆ ಗಂಭೀರ್ ಅವರ ಸ್ಥಾನದಲ್ಲಿ ಅರೋರ ಇದ್ದರು.ನಾನು ಫೋಟೊ ಕ್ಲಿಕ್ ಮಾಡಲು ಶುರು ಮಾಡಿದೆ.ಕಟ್ಟಡದಲ್ಲಿದ್ದ ಆ ಹಿರಿಯ ವ್ಯಕ್ತಿ ಮತ್ತು ಅವರ ವ್ಯಕ್ತಿ ಗಂಭೀರ್ ಪ್ರಚಾರ ಮೆರವಣಿಗೆಯನ್ನೇ ನೋಡುತ್ತಿದ್ದರು. ಗಂಭೀರ್ ತಮ್ಮತ್ತ ಕೈ ಬೀಸಿದರು ಎಂದು ಆ ಹಿರಿಯ ದಂಪತಿಗಳು ಖುಷಿಯಾಗಿದ್ದರು.ಅರೋರ ಎಲ್ಲರತ್ತ ಕೈ ಬೀಸುತ್ತಿದ್ದರೆ, ಜನರೆಲ್ಲರೂ ಗಂಭೀರ್ ಈ ರೀತಿ ಕೈ ಬೀಸುತ್ತಿದ್ದಾರೆ ಎಂದು ಅಂದುಕೊಂಡಿದ್ದರು. ಗಂಭೀರ್ ವಾಹನದ ಮೇಲೆ ನಿಂತಿದ್ದಾಗ ಅರೋರ ಅಲ್ಲಿ ನಿಂತಿರಲಿಲ್ಲ.ಗಂಭೀರ್ ವಾಹನದೊಳಗೆ ಬಂದು ಕುಳಿತ ನಂತರವೇ ಅರೋರ ವಾಹನದ ಮೇಲೆ ಏರಿದ್ದು.ನಾನು ಈ ಎಲ್ಲ ಫೋಟೊಗಳನ್ನು ಕ್ಲಿಕ್ಕಿಸಿ, ಅದನ್ನು ಜೂಮ್ ಮಾಡಿ ನೋಡಿದಾಗಲೇ ಗೊತ್ತಾಗಿದ್ದು, ನಾನು ಕ್ಲಿಕ್ ಮಾಡಿದ ಫೋಟೊ ಗಂಭೀರ್‌ದ್ದು ಅಲ್ಲ ಎಂದು!'.

ಇದೇ ಪ್ರಚಾರದ ವೇಳೆ ಅಲ್ಲಿ ಉಪಸ್ಥಿತರಿದ್ದ ಇನ್ನೊಬ್ಬ ಪತ್ರಕರ್ತರಲ್ಲಿಯೂ ಆಲ್ಟ್ ನ್ಯೂಸ್ ಮಾತನಾಡಿಸಿದೆ.ತಮ್ಮ ಹೆಸರನ್ನು ಬಹಿರಂಗಪಡಿಸುವುದಕ್ಕೆ ಇಚ್ಛಿಸದ ಆ ಪತ್ರಕರ್ತರು ಹೇಳಿದ್ದು ಹೀಗೆ-'ಗಂಭೀರ್ ವಾಹನದ ಮೇಲೆ ನಿಂತಿದ್ದರು.ಅರೋರ ಇನ್ನೊಂದು ಕಾರಿನಲ್ಲಿದ್ದರು. ರ‍್ಯಾಲಿ ಮಧ್ಯೆ ಗಂಭೀರ್ ವಾಹನದ ಮುಂದಿನ ಸೀಟಿನಲ್ಲಿ ಬಂದು ಕುಳಿತರು. ಅಷ್ಟೊತ್ತಿಗೆ ಅರೋರ ಪ್ರಚಾರ ವಾಹನದ ಮೇಲೆ ಇದ್ದರು. ಸುಮಾರು ಅರ್ಧ ಗಂಟೆ ಕಾಲ ಅರೋರ ವಾಹನದ ಮೇಲೆ ನಿಂತು ಕೈ ಬೀಸುತ್ತಿದ್ದರು. ಗಂಭೀರ್ ಅವರ ಹಿಂದಿನ ರ‍್ಯಾಲಿಗಳನ್ನು ನೋಡಿದ್ದೆ. ಅದರಲ್ಲಿ ಅವರು ಈ ರೀತಿ ವರ್ತಿಸಿರಲಿಲ್ಲ. ಈ ಸಂದೇಹದಿಂದ ನಾನು ಅವರ ಹತ್ತಿರ ಹೋದೆ. ಆಗಲೇ ಗೊತ್ತಾಗಿದ್ದು ಅದು ಅರೋರ, ಗೌತಮ್ ಗಂಭೀರ್ ಅಲ್ಲ ಎಂಬ ವಿಷಯ.'

ಉತ್ತರಿಸಲು ನಿರಾಕರಿಸಿದ ಬಿಜೆಪಿ
ಪ್ರಚಾರ ವಾಹನದ ಮೇಲೆ ನಿಂತು ಜನರತ್ತ ಕೈ ಬೀಸಿದ್ದು ಗೌರವ್ ಅರೋರ ಹೌದೋ ಅಲ್ಲವೋ ಎಂಬುದನ್ನು ದೃಢೀಕರಿಸುವುದಕ್ಕಾಗಿ ಆಲ್ಟ್ ನ್ಯೂಸ್,ಅರೋರ ಅವರನ್ನು ಸಂಪರ್ಕಿಸಿದರೂ, ಈ ಬಗ್ಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ.

ಗಂಭೀರ್‌ನಂತೆಯೇ ಹೋಲುವ ವ್ಯಕ್ತಿಯನ್ನು ಪ್ರಚಾರಕ್ಕೆ ಬಳಸಲಾಗಿದೆ ಎಂಬ ಆರೋಪವನ್ನು ಬಿಜೆಪಿ ನಿರಾಕರಿಸಿದ್ದು, ಗಂಭೀರ್ ಅಸ್ವಸ್ಥರಾದ ಕಾರಣ ಅವರು ಕಾರಿನ ಮುಂದಿನ ಸೀಟಲ್ಲಿ ಬಂದು ಕುಳಿತಿದ್ದರು ಎಂದಿದೆ.

ಈ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡಿದ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಮೇಲ್ವಿಚಾರಕ ರಾಜೀವ್ ಬಬ್ಬರ, ಪ್ರಚಾರದ ವೇಳೆ 10-15 ನಿಮಿಷಗಳ ಕಾಲ ಗಂಭೀರ್ ಅಸ್ವಸ್ಥರಾಗಿದ್ದರು.ಬಿಸಿಲು ತಾಳಲಾರದೆ ಅವರುಮುಂದಿನ ಸೀಟಲ್ಲಿ ಕುಳಿತಾಗ ಅವರ ಬೆಂಬಲಿಗರು ವಾಹನದ ಮೇಲೆ ನಿಂತು ಜನರತ್ತ ಕೈ ಬೀಸಿದರು. ಪ್ರಚಾರ ವಾಹನದ ಮೇಲೆ ನಿಂತು ಬೆಂಬಲಿಗರು ಕೈ ಬೀಸುವುದು ಸರ್ವೇ ಸಾಮಾನ್ಯ ಎಂದಿದ್ದಾರೆ.

ಒಟ್ಟಿನಲ್ಲಿ ವಿಷಯ ಏನೆಂದರೆ ಅರೋರ ಅವರು ಗಂಭೀರ್ ಜತೆ ತುಂಬಾ ವರ್ಷದಿಂದ ನಂಟುಹೊಂದಿದ್ದಾರೆ ಎಂಬುದು ಫೋಟೊಗಳನ್ನು ನೋಡಿದರೆ ತಿಳಿಯುತ್ತದೆ. ಪ್ರಚಾರದ ಫೋಟೊ ಕ್ಲಿಕ್ಕಿಸಿದಛಾಯಾಗ್ರಾಹಕರು ಅರೋರ ಅವರು ಕೂಡಾ ಗಂಭೀರ್‌ನಂತೆಯೇ ಉಡುಗೆ ತೊಟ್ಟಿದ್ದರಿಂದ ಗಂಭೀರ್ ಯಾರು? ಅರೋರ ಯಾರು? ಎಂಬುದನ್ನು ಪತ್ತೆ ಹಚ್ಚುವಲ್ಲಿ ಗೊಂದಲಕ್ಕೊಳಗಾಗಿದ್ದಾರೆ. ಅಷ್ಟೇ ಅಲ್ಲದೆ ಅರೋರ ಅವರು ಕೂಡಾ ಹೂವಿನಹಾರವನ್ನು ಸ್ವೀಕರಿಸಿ ಜನರತ್ತ ಕೈ ಬೀಸಿದ್ದು ಇನ್ನಷ್ಟು ಗೊಂದಕ್ಕೊಳಗಾಗುವಂತೆ ಮಾಡಿತು. ಅಂದಹಾಗೆ ಇದು ಪೂರ್ವಯೋಜಿತವೋ ಅಥವಾ ಕಾಕತಾಳೀಯವೋ ಎಂಬುದು ಸದ್ಯ ತಿಳಿದುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.