ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರು ಮಾತನಾಡುತ್ತಿರುವ 27 ಸೆಕೆಂಡುಗಳ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಆಪರೇಷನ್ ಸಿಂಧೂರದ ಸಮಯದಲ್ಲಿ ಮೋದಿ ಸರ್ಕಾರವು ರಾಜಕೀಯ ಕಾರಣಗಳಿಗಾಗಿ ಪಾಕಿಸ್ತಾನಕ್ಕೆ ಬಲವಾದ ಏಟು ನೀಡಲು ಅನುಮತಿ ನೀಡದೇ ಇದ್ದುದರಿಂದ ಭಾರತೀಯ ವಾಯುಪಡೆ ತುಂಬಾ ನಷ್ಟವನ್ನು ಅನುಭವಿಸಬೇಕಾಯಿತು’ ಎಂದು ಆ ವಿಡಿಯೊದಲ್ಲಿ ಹೇಳುವುದು ಕೇಳಿಸುತ್ತಿದೆ. ಆದರೆ. ಇದು ಸುಳ್ಳು.
ಆಗಸ್ಟ್ 26ರಂದು ನಡೆದ ಹೊಸ ಯುದ್ಧ ನೌಕೆಗಳಾದ ಐಎನ್‌ಎಸ್ ಉದಯಗಿರಿ ಮತ್ತು ಐಎನ್‌ಎಸ್ ಹಿಮಗಿರಿಗಳ ಸೇರ್ಪಡೆ ಕಾರ್ಯಕ್ರಮದಲ್ಲಿ ತ್ರಿಪಾಠಿ ಅವರು ಮಾಡಿದ್ದ ಭಾಷಣವನ್ನು ಭಾರತೀಯ ನೌಕಾ ಪಡೆಯ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗಿತ್ತು. ಆ ಭಾಷಣವನ್ನು ಕೇಳಿದಾಗ ಮೊದಲಾರ್ಧದಲ್ಲಿ ಆಪರೇಷನ್ ಸಿಂಧೂರದ ಬಗ್ಗೆ ಅವರು ಪ್ರಸ್ತಾಪಿಸುತ್ತಾರೆ. ಆದರೆ, ಎಲ್ಲೂ ಅವರು ಈ ಕಾರ್ಯಾಚರಣೆ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿ ಮಾತನಾಡುವುದಿಲ್ಲ. ವಿಡಿಯೊ ತುಣುಕಿನ ಸತ್ಯಾಸತ್ಯತೆಯನ್ನು ತಿಳಿಯುವುದಕ್ಕಾಗಿ ಡೀಪ್‌ಫೇಕ್ ಅನ್ನು ಪತ್ತೆ ಹಚ್ಚುವ ಡೀಪ್‌ಫೇಕ್–ಒ–ಮೀಟರ್ ಮತ್ತು ರೆಸೆಂಬಲ್ ಎಐ ಎಂಬ ಎಐ ಧ್ವನಿ ಪತ್ತೆ ಟೂಲ್ ಅನ್ನು ಬಳಸಲಾಯಿತು. ವಿಡಿಯೊವನ್ನು ಎಐ ಮೂಲಕ ತಿರುಚಿರುವುದು ಮತ್ತು ಎಐ ಧ್ವನಿಯನ್ನು ಸೇರ್ಪಡೆಗೊಳಿಸಿರುವುದನ್ನು ಈ ಟೂಲ್‌ಗಳು ಪತ್ತೆ ಹಚ್ಚಿದವು. ಎಐ ತಂತ್ರಜ್ಞಾನ ಬಳಸಿಕೊಂಡು ತಿರುಚಿದ ವಿಡಿಯೊ ಆಡಿಯೊವನ್ನು ಪೋಸ್ಟ್ ಮಾಡಿ ನೌಕಾಪಡೆ ಮುಖ್ಯಸ್ಥರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಬೂಮ್ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.