ಖೈಬರ್ ಫಖ್ತುಂಖ್ವಾ, ಪಂಜಾಬ್, ಸಿಂಧ್, ಬಲೂಚಿಸ್ತಾನ ಸೇರಿದಂತೆ ಪಾಕಿಸ್ತಾನದ ಹಲವು ಪ್ರದೇಶಗಳು ಪ್ರವಾಹಪೀಡಿತವಾಗಿದ್ದು, ಜನ ತತ್ತರಿಸಿಹೋಗಿದ್ದಾರೆ. ಇದಕ್ಕೆ ಸಂಬಂಧಿಸಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಪಾಕಿಸ್ತಾನ ಪ್ರವಾಹಕ್ಕೆ ಸಿಲುಕಿದ್ದು, ಅದಕ್ಕೆ ಕೇವಲ ಹವಾಮಾನವಾಗಲಿ ಅಥವಾ ಮಳೆಯಾಗಲಿ ಕಾರಣವಲ್ಲ. ಭಾರತವು ಕಾಶ್ಮೀರದಲ್ಲಿ ತನ್ನ ಅಣೆಕಟ್ಟುಗಳ ಬಾಗಿಲುಗಳನ್ನು ತೆಗೆದಿದ್ದೇ ಇದಕ್ಕೆಲ್ಲ ಕಾರಣ. ಇದು ಅನ್ಯಾಯ ಮತ್ತು ಅಪಾಯಕಾರಿ’ ಎಂದು ಅವರು ಹೇಳಿರುವುದಾಗಿ ವಿಡಿಯೊ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ಇನ್‌ವಿಡ್ ಟೂಲ್ ಮೂಲಕ ವಿಡಿಯೊ ಕೀಫ್ರೇಮ್ ವಿಂಗಡಿಸಿ, ಅದನ್ನು ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದಾಗ, ಒಂದೇ ವಿಡಿಯೊ ಅನ್ನು ಹಲವರು ಹಂಚಿಕೊಂಡಿರುವುದು ಕಂಡಿತು. ನಿರ್ದಿಷ್ಟ ಪದದ ಮೂಲಕ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ, ಯಾವ ಮಾಧ್ಯಮದಲ್ಲಿಯೂ ಅವರ ಹೇಳಿಕೆಯ ಬಗ್ಗೆ ವರದಿಗಳು ಕಾಣಲಿಲ್ಲ. ಬದಲಿಗೆ, ನೀರ್ಗಲ್ಲು ಕರಗಿದ್ದು ಮತ್ತು ಅರಣ್ಯನಾಶವೇ ಪಾಕಿಸ್ತಾನದಲ್ಲಿನ ಪ್ರವಾಹಕ್ಕೆ ಕಾರಣ ಎಂದು ವರದಿಗಳು ಪ್ರಕಟವಾಗಿರುವುದು ಕಂಡಿತು. ಎಐ ಪತ್ತೆ ಸಾಧನವಾದ ಹೈವ್ ಮಾಡರೇಷನ್ ಮೂಲಕ ಪರಿಶೀಲಿಸಿದಾಗ, ಅದು ಡೀಪ್‌ಫೇಕ್ ವಿಡಿಯೊ ಎನ್ನುವುದು ಖಚಿತವಾಯಿತು ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.