ADVERTISEMENT

ನಾಯಿ ತಿನ್ನದ ಬಿಸ್ಕೆಟ್ ಅನ್ನು ರಾಹುಲ್ ಕಾರ್ಯಕರ್ತನಿಗೆ ಕೊಟ್ಟರು ಎಂಬುದು ಸುಳ್ಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2024, 12:52 IST
Last Updated 9 ಫೆಬ್ರುವರಿ 2024, 12:52 IST
<div class="paragraphs"><p>ರಾಹುಲ್ ಗಾಂಧಿ ಬಿಸ್ಕೆಟ್‌ ನೀಡುತ್ತಿರುವುದು</p></div>

ರಾಹುಲ್ ಗಾಂಧಿ ಬಿಸ್ಕೆಟ್‌ ನೀಡುತ್ತಿರುವುದು

   

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ನಾಯಿ ತಿನ್ನದ ಬಿಸ್ಕೆಟ್‌ ಅನ್ನು ತಮ್ಮ ಪಕ್ಷದ ಕಾರ್ಯಕರ್ತನಿಗೆ ನೀಡಿದ್ದಾರೆ ಎಂಬ ಆರೋಪ ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿ ಬಂದಿದೆ.

ರಾಹುಲ್‌ ಅವರು ಭಾರತ್‌ ಜೋಡೊ ನ್ಯಾಯ ಯಾತ್ರೆ ವೇಳೆ ನಾಯಿಯೊಂದಕ್ಕೆ ಬಿಸ್ಕೆಟ್‌ ತಿನ್ನಿಸಲು ಯತ್ನಿಸುವ ವಿಡಿಯೊವನ್ನು ತಮ್ಮ ಎಕ್ಸ್‌/ಟ್ವಿಟರ್‌ (@SumanSharma_BJP) ಖಾತೆಯಲ್ಲಿ ಹಂಚಿಕೊಂಡಿರುವ ಬಿಜೆಪಿಯ ಸುಮನ್‌ ಶರ್ಮಾ ಎಂಬವರು, 'ಸ್ವಾಭಿಮಾನವುಳ್ಳ ಯಾರೊಬ್ಬರೂ ಕಾಂಗ್ರೆಸ್‌ನಲ್ಲಿ ಉಳಿಯದಿರುವುದು ಇದೇ ಕಾರಣಕ್ಕೆ. ರಾಹುಲ್‌ ಅವರು ಬಿಸ್ಕೆಟ್‌ ಅನ್ನು ಮೊದಲು ನಾಯಿಗೆ ತಿನ್ನಿಸಲು ನೋಡುತ್ತಾರೆ. ನಾಯಿ ತಿನ್ನಲು ನಿರಾಕರಿಸಿದಾಗ, ಅದೇ ಬಿಸ್ಕೆಟ್‌ ಅನ್ನು ತಮ್ಮ ಪಕ್ಷದ ಕಾರ್ಯಕರ್ತನಿಗೆ ಕೊಡುತ್ತಾರೆ' ಎಂದು ಬರೆದುಕೊಂಡಿದ್ದಾರೆ.

ADVERTISEMENT

ಇದೇ ರೀತಿ ಇನ್ನೂ ಹಲವರು ರಾಹುಲ್‌ ಹಾಗೂ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದ್ದಾರೆ.

ಆದರೆ, ರಾಹುಲ್‌ ಅವರು ನಾಯಿ ತಿನ್ನದ ಬಿಸ್ಕೆಟ್‌ ಅನ್ನು ತಮ್ಮ ಪಕ್ಷದ ಕಾರ್ಯಕರ್ತನಿಗೆ ನೀಡಿಲ್ಲ. ಬಳಿಕ ತಿನ್ನಿಸುವುದಕ್ಕಾಗಿ ಆ ನಾಯಿಯ ಮಾಲೀಕನಿಗೆ ಕೊಟ್ಟರು ಎಂದು 'ಇಂಡಿಯಾ ಟುಡೇ' ವೆಬ್‌ಸೈಟ್‌ ಫ್ಯಾಕ್ಟ್‌ಚೆಕ್‌ ಮಾಡಿದೆ.

ತಮ್ಮ ವಿರುದ್ಧ ಮಾಡಲಾಗಿರುವ ಆರೋಪದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ರಾಹುಲ್‌, ಬಿಸ್ಕೆಟ್‌ ತಿನ್ನಿಸಲು ಮುಂದಾದಾಗ ನಾಯಿಯು ಭಯದಿಂದ ನಡುಗುತ್ತಿತ್ತು. ಹಾಗಾಗಿ, ಅದರ ಮಾಲೀಕನೇ ತಿನ್ನಿಸಲಿ ಎಂಬ ಕಾರಣಕ್ಕೆ ಅವರಿಗೆ ಕೊಟ್ಟೆ. ನಾಯಿಯು ಅವರ ಕೈಯಲ್ಲಿ ಬಿಸ್ಕೆಟ್‌ ತಿಂದಿತು ಎಂದು ಹೇಳಿದ್ದಾರೆ.

ನಾಯಿಯ ಮಾಲೀಕ, ಧನಬ್‌ ನಿವಾಸಿಯಾಗಿರುವ ಜೀತೇಂದ್ರ ಕುಮಾರ್‌ ಅವರನ್ನೂ 'ಇಂಡಿಯಾ ಟುಡೇ' ಸಂಪರ್ಕಿಸಿದೆ. ರಾಹುಲ್‌ ಭೇಟಿಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, ಕಾಂಗ್ರೆಸ್‌ ನಾಯಕ ಬಿಸ್ಕೆಟ್‌ ಕೊಟ್ಟದ್ದು ನಾಯಿಗಾಗಿ ಎಂದಿದ್ದಾರೆ. ಹಾಗೆಯೇ, ತಾವು ಕಾಂಗ್ರೆಸ್‌ನೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ರಾಹುಲ್‌ ಅವರು ನಾಯಿ ತಿನ್ನದೇ ಬಿಟ್ಟ ಬಿಸ್ಕೆಟ್‌ ಅನ್ನು ಪಕ್ಷದ ಕಾರ್ಯಕರ್ತನಿಗೆ ಕೊಟ್ಟಿದ್ದಾರೆ ಎಂಬುದು ಆಧಾರರಹಿತ ಆರೋಪವೆಂಬುದು ಖಚಿತವಾಗಿದೆ.

ರಾಹುಲ್‌ ಗಾಂಧಿ ಹಾಗೂ ನಾಯಿಯ ಮಾಲೀಕನ ಸ್ಪಷ್ಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.