
ಪಾಕಿಸ್ತಾನದ ವಿರುದ್ಧ ನಡೆಸಲಾದ ‘ಆಪರೇಷನ್ ಸಿಂಧೂರ’ದಲ್ಲಿ ಭಾರತದ ಸೇನೆಗೆ ಆದ ನಷ್ಟದ ಬಗ್ಗೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಇತ್ತೀಚೆಗೆ ಪುಟ್ಟಪರ್ತಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ ಎಂದು ಹೇಳಿಕೊಳ್ಳುತ್ತಾ, ಐಶ್ವರ್ಯಾ ರೈ ಅವರು ಮಾತನಾಡುತ್ತಿರುವ ವಿಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ‘ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ನಾವು ಆರು ವಿಮಾನಗಳನ್ನು ಏಕೆ ಕಳೆದುಕೊಂಡೆವು? ನಾಲ್ಕು ರಫೇಲ್‌ಗಳನ್ನು ಕಳೆದುಕೊಂಡಿದ್ದಾದರೂ ಏಕೆ? ಎರಡು ಎಸ್–400 ವ್ಯವಸ್ಥೆಗಳು, 300 ಸೈನಿಕರು ಮತ್ತು ಕಾಶ್ಮೀರ, ರಾಜಸ್ಥಾನದಲ್ಲಿ ನಮ್ಮ ಭೂಮಿಯನ್ನು ಕಳೆದುಕೊಳ್ಳಲು ಕಾರಣವೇನು’ ಎಂದು ಐಶ್ವರ್ಯಾ ರೈ ಪ್ರಶ್ನಿಸುತ್ತಿರುವುದು ವಿಡಿಯೊ ತುಣುಕಿನಲ್ಲಿದೆ. ಆದರೆ. ಇದು ಸುಳ್ಳು
ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಡಿದಾಗ ಆ ವಿಡಿಯೊ ತುಣುಕು, ಪುಟ್ಟಪರ್ತಿಯಲ್ಲಿ ಇದೇ 19ರಂದು ನಡೆಸಿದ್ದ ಸತ್ಯ ಸಾಯಿ ಬಾಬಾ ಅವರ ಶತಮಾನೋತ್ಸವ ಸಮಾರಂಭದಲ್ಲಿ ಐಶ್ವರ್ಯಾ ರೈ ಅವರ ಭಾಷಣಕ್ಕೆ ಸಂಬಂಧಿಸಿದ್ದು ಎಂಬುದು ಖಚಿತವಾಯಿತು. ಆ ಸಮಾರಂಭದ ಪೂರ್ಣ ವಿಡಿಯೊ ಸಾಯಿಬಾಬಾ ಅವರ ಸಂಸ್ಥೆಗೆ ಸಂಬಂಧಿಸಿದ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರವಾಗಿತ್ತು. ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಅದರಲ್ಲಿ ಭಾಗ್ವಹಿಸಿದ್ದರು. ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಅವರು ಮಾಡಿದ ಭಾಷಣವನ್ನು ಕೇಳಿದಾಗ, ಅವರೆಲ್ಲೂ ಆಪರೇಷನ್ ಸಿಂಧೂರ ವಿಚಾರದಲ್ಲಿ ಮೋದಿ ಅವರನ್ನು ಪ್ರಶ್ನಿಸಿದ್ದು ಕಂಡುಬರಲಿಲ್ಲ. ಅನುಮಾನ ಬಂದು ವಿಡಿಯೊ ತುಣುಕಿನಲ್ಲಿನ ಧ್ವನಿಯನ್ನು ರಿಸೆಂಬಲ್ ಎಐ ಎಂಬ ಎಐ ಪತ್ತೆ ಟೂಲ್ ಮೂಲಕ ಪರಿಶೀಲನೆಗೆ ಒಳಪಡಿಸಿದಾಗ, ಅದು ತಿರುಚಿದ ಧ್ವನಿ ಎಂಬುದು ದೃಢಪಟ್ಟಿತು. ಡೀಪ್‌ಫೇಕ್ ತಂತ್ರಜ್ಞಾನದ ಮೂಲಕ ಐಶ್ವರ್ಯಾ ರೈ ಅವರ ಭಾಷಣವನ್ನು ತಿರುಚಿ ತಪ್ಪಾದ ವಿಡಿಯೊ ಹಂಚಿಕೊಳ್ಳಲಾಗುತ್ತಿದೆ ಎಂದು ಪಿಟಿಐ ಫ್ಯಾಲ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.