ADVERTISEMENT

Fact Check: ಮಹಿಳೆ ಮೇಲೆ ಚಿನ್ಮಯಿ ದಾಸ್ ಅತ್ಯಾಚಾರವೆಸಗಿದ್ದಾರೆ ಎಂಬುದು ಸುಳ್ಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2024, 12:50 IST
Last Updated 30 ನವೆಂಬರ್ 2024, 12:50 IST
<div class="paragraphs"><p>ಪೊಲೀಸರ ವಶದಲ್ಲಿ&nbsp;ಚಿನ್ಮಯಿ ಕೃಷ್ಣದಾಸ್‌ (ರಾಯಿಟರ್ಸ್‌ ಚಿತ್ರ) ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ವಿರುದ್ಧ ಹರಿದಾಡುತ್ತಿರುವ ಸುಳ್ಳು ಸುದ್ದಿಯ ಪೋಸ್ಟ್‌ (ಒಳಚಿತ್ರ)</p></div>

ಪೊಲೀಸರ ವಶದಲ್ಲಿ ಚಿನ್ಮಯಿ ಕೃಷ್ಣದಾಸ್‌ (ರಾಯಿಟರ್ಸ್‌ ಚಿತ್ರ) ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ವಿರುದ್ಧ ಹರಿದಾಡುತ್ತಿರುವ ಸುಳ್ಳು ಸುದ್ದಿಯ ಪೋಸ್ಟ್‌ (ಒಳಚಿತ್ರ)

   

ಬೆಂಗಳೂರು: ಬಾಂಗ್ಲಾದೇಶದಲ್ಲಿ ಹಿಂದೂ ಸಂಘಟನೆಯ ಮುಖಂಡ ಚಿನ್ಮಯಿ ಕೃಷ್ಣದಾಸ್‌ ಅವರನ್ನು ನವೆಂಬರ್‌ 25ರಂದು ಬಂಧಿಸಲಾಗಿದೆ.

ಬಾಂಗ್ಲಾ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಕ್ಕಾಗಿ ದೇಶದ್ರೋಹದ ಆರೋಪ ಎದುರಿಸುತ್ತಿರುವ 'ಸಮ್ಮಿಲಿತ್‌ ಸನಾತನಿ ಜಾಗರಣ ಜೋತೆ' ಸಂಘಟನೆಯ ಮುಖಂಡ ಕೃಷ್ಣದಾಸ್‌ ಅವರನ್ನು ಢಾಕಾದಲ್ಲಿ ಸೋಮವಾರ ಬಂಧಿಸಲಾಗಿತ್ತು. ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬಾಂಗ್ಲಾದೇಶದ ನ್ಯಾಯಾಲಯ ವಜಾಗೊಳಿಸಿದ್ದು, ಸದ್ಯ ಜೈಲಿಗೆ ಕಳುಹಿಸಲಾಗಿದೆ.‌

ADVERTISEMENT

ಕೃಷ್ಣದಾಸ್‌ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಹಿಂದೂ ಸಂಘಟನೆಗಳು ಭಾರತ ಹಾಗೂ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸುತ್ತಿವೆ.

ಈ ಬೆಳವಣಿಗೆಯ ನಡುವೆ, ಕೃಷ್ಣದಾಸ್‌ ಅವರು ಹಿಂದೂ ಮಹಿಳೆಯೊಬ್ಬರಿಗೆ ಕಾರಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಟ್ವಿಟರ್‌/ಎಕ್ಸ್‌ ಬಳಕೆದಾರರೊಬ್ಬರು ವಿಡಿಯೊ ಹಂಚಿಕೊಂಡಿದ್ದು, 'ಬಾಂಗ್ಲಾದೇಶ ಇಸ್ಕಾನ್‌ ಮುಖಂಡ ಚಿನ್ಮಯಿ ಕೃಷ್ಣದಾಸ್, ಸಿಲ್ಹೆಟ್‌ನಲ್ಲಿ ಹಿಂದೂ ಯುವತಿಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸುತ್ತಿರುವುದು ಸೆರೆಯಾಗಿದೆ. ಭಯೋತ್ಪಾದಕ ಸಂಘಟನೆ ಇಸ್ಕಾನ್‌ನಿಂದ ಸ್ಥಳೀಯ ಹಿಂದೂಗಳು ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂಬುದನ್ನು ಈ 'ಹಿಂದೂ ರಕ್ಷಕ' ಸಾಬೀತು ಮಾಡಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

ವಾಸ್ತವವೇನು?

ಈ ಬಗ್ಗೆ 'ನ್ಯೂಸ್‌ಮೀಟರ್‌' (NewsMeter) ಸುದ್ದಿ ಸಂಸ್ಥೆ ಸತ್ಯಶೋಧ ನಡೆಸಿದೆ. ವಿಡಿಯೊ ಕೃಷ್ಣದಾಸ್‌ ಅವರಿಗೆ ಸಂಬಂಧಿಸಿದ್ದಲ್ಲ. ಅದು ರಾಜಸ್ಥಾನದ ಬಾಬಾ ಬಾಲಕನಾಥ್‌ ಅವರದ್ದು ಎಂದು ತಿಳಿಸಿದೆ.

ವಿಡಿಯೊದಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ರಿವರ್ಸ್‌ ಇಮೇಜ್ ಸರ್ಚ್‌ ನಡೆಸಿರುವ ನ್ಯೂಸ್‌ಮೀಟರ್‌, ಈ ವಿಡಿಯೊ ಕುರಿತು 'ಎನ್‌ಡಿಟಿವಿ', 'ಹಿಂದೂಸ್ತಾನ್‌ ಟೈಮ್ಸ್‌', 'ಎಬಿಪಿ ನ್ಯೂಸ್‌', 'ಫಸ್ಟ್‌ ಇಂಡಿಯಾ ನ್ಯೂಸ್‌' ಮತ್ತು 'ರಾಜಸ್ಥಾನ ಪತ್ರಿಕಾ' ಕಳೆದ ತಿಂಗಳು ವರದಿ ಪ್ರಕಟಿಸಿದ್ದವು. ಅವುಗಳ ಪ್ರಕಾರ, ಈ ಘಟನೆ ರಾಜಸ್ಥಾನದ ಸಿಕಾರ್‌ನಲ್ಲಿ ನಡೆದಿದೆ. ಕಾರಿನ ಚಾಲಕ ವಿಡಿಯೊ ಸೆರೆ ಹಿಡಿದಿದ್ದಾರೆ ಎಂದು ಖಚಿತಪಡಿಸಿದೆ.

'ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ ಎಂಬುದಾಗಿ ಹೇಳಿ, ನನ್ನನ್ನು ಬಾಬಾ ಬಾಲಕನಾಥ್‌ಗೆ ಪರಿಚಯಿಸಲಾಗಿತ್ತು' ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ. 'ಮಾದಕ ವಸ್ತು ಬೆರೆಸಿದ ಸಿಹಿ ತಿನ್ನಿಸಿ, ನಂತರ ನನ್ನ ಮೇಲೆ ಮೂರು ಬಾರಿ ಅತ್ಯಾಚಾರವೆಸಗಲಾಗಿದೆ' ಎಂದೂ ಆಕೆ ದೂರಿದ್ದಾರೆ ಎಂದು ಅಕ್ಟೋಬರ್‌ 22ರಂದು ಎನ್‌ಡಿಟಿವಿ ಪ್ರಕಟಿಸಿರುವ ವರದಿಯಲ್ಲಿ ಉಲ್ಲೇಖವಾ‌ಗಿದೆ.

ಹಿಂದೂಸ್ತಾನ್‌ ಟೈಮ್ಸ್‌, 'ಖೇದಿ ದತುಂಜಲದಲ್ಲಿರುವ ಕ್ಷೇತ್ರಪಾಲ್‌ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ರಾಜೇಶ್‌ ಎಂಬಾತ ಮಹಿಳೆಯನ್ನು ಬಾಬಾ ಬಾಲಕನಾಥ್‌ಗೆ ಪರಿಚಯಿಸಿದ್ದ. ಆ ವೇಳೆ ಆಕೆಯ ಕುಟುಂಬದ ಸಮಸ್ಯೆಗಳನ್ನು ಧಾರ್ಮಿಕ ಆಚರಣೆ 'ತಂತ್ರ ವಿದ್ಯೆ' ಮೂಲಕ ಪರಿಹರಿಸುವುದಾಗಿ ಬಾಲಕನಾಥ್ ಭರವಸೆ ನೀಡಿದ್ದ. ಘಟನೆ ನಡೆದ ದಿನ, ಮಹಿಳೆಗೆ ಪದೇ ಪದೇ ಮಾದಕವಸ್ತು ನೀಡಿ, ಹಲವು ಬಾರಿ ಅತ್ಯಾಚಾರವೆಸಗಲಾಗಿದೆ. ಅದನ್ನು, ಕಾರಿನ ಚಾಲಕ ಯೋಗೇಶ್‌ ಚಿತ್ರೀಕರಿಸಿದ್ದಾರೆ' ಎಂದು ಅಕ್ಟೋಬರ್ 23ರಂದು ವರದಿ ಪ್ರಕಟಿಸಿದೆ.

ಹಾಗಾಗಿ, 'ಬಾಂಗ್ಲಾದೇಶದಲ್ಲಿ ಚಿನ್ಮಯಿ ಅವರು ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದು ಸುಳ್ಳು. ವಿಡಿಯೊದಲ್ಲಿರುವುದು ಬಾಬಾ ಬಾಲಕನಾಥ್‌. ಮಹಿಳೆಗೆ ಮತ್ತು ಬರುವಂತೆ ಮಾಡಿ ರಾಜಸ್ಥಾನದ ಸಿಕಾರ್‌ನಲ್ಲಿ ಕೃತ್ಯವೆಸಗಲಾಗಿದೆ' ಎಂದು 'ನ್ಯೂಸ್‌ಮೀಟರ್‌' ಸ್ಪಷ್ಟವಾಗಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.