ADVERTISEMENT

Fact Check: ರಾಹುಲ್ ಗಾಂಧಿ ದೇಶ ಹಾಳು ಮಾಡುತ್ತಿದ್ದಾರೆ ಎಂದು ಖರ್ಗೆ ಹೇಳಿಲ್ಲ

ಫ್ಯಾಕ್ಟ್ ಚೆಕ್
Published 9 ಸೆಪ್ಟೆಂಬರ್ 2025, 1:04 IST
Last Updated 9 ಸೆಪ್ಟೆಂಬರ್ 2025, 1:04 IST
   

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ರಾಹುಲ್ ಗಾಂಧಿ ಅವರು ದೇಶವನ್ನು ಹಾಳು ಮಾಡುತ್ತಿದ್ದಾರೆ’ ಎಂದು ಖರ್ಗೆ ಅವರು ನಿಂದಿಸಿರುವುದಾಗಿ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ವಿಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳ‍ಪಡಿಸಿದಾಗ, ಮೂಲ ವಿಡಿಯೊ ಕಾಂಗ್ರೆಸ್ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ 2024ರ ಮಾರ್ಚ್ 3ರಂದು ಅಪ್‌ಲೋಡ್ ಆಗಿರುವುದು ಕಂಡಿತು. ‘ಇಂಡಿಯಾ’ ಮೈತ್ರಿಕೂಟವು ಪಟ್ನಾದಲ್ಲಿ ಹಮ್ಮಿಕೊಂಡಿದ್ದ ‘ಜನ ವಿಶ್ವಾಸ ರ್‍ಯಾಲಿ’ಗೆ ಸಂಬಂಧಿಸಿದ ವಿಡಿಯೊ ಇದಾಗಿದೆ. ವಿಡಿಯೊದ 29ನೇ ಸೆಕೆಂಡ್‌ನಿಂದ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದ್ದಾರೆ. ‘ದೇಶಕ್ಕೆ ಹಾನಿ ಮಾಡುತ್ತಿರುವುದು ಮೋದಿ ಅವರೇ ಹೊರತು ರಾಹುಲ್ ಗಾಂಧಿ ಅಲ್ಲ’ ಎಂದು ಖರ್ಗೆ ಅವರು ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ. ವಿಡಿಯೊದಲ್ಲಿ ಖರ್ಗೆ ಅವರು ಎಲ್ಲಿಯೂ ರಾಹುಲ್ ಗಾಂಧಿ ಅವರ ಪ್ರಸ್ತಾಪ ಮಾಡಿಲ್ಲ. ಜತೆಗೆ, ಗೂಗಲ್‌ನಲ್ಲಿ ನಿರ್ದಿಷ್ಟ ಪದದ ಮೂಲಕ ಹುಡುಕಾಟ ನಡೆಸಿದಾಗ, ಖರ್ಗೆ ಅವರು ರಾಹುಲ್ ಗಾಂಧಿ ಬಗ್ಗೆ ಆ ರೀತಿ ಹೇಳಿದ್ದಾರೆ ಎನ್ನುವ ಬಗ್ಗೆ ಯಾವ ವರದಿಯೂ ಕಾಣಲಿಲ್ಲ. ಖರ್ಗೆ ಅವರು ಮೋದಿ ಅವರ ಬಗ್ಗೆ ಹೇಳಿರುವುದನ್ನೇ ಕೆಲವರು ತಿರುಚಿ, ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಫ್ಯಾಕ್ಟ್‌ಲಿ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT