
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮುಖಾಮುಖಿಯಾಗಿ ನಿಂತು ಪರಸ್ಪರ ಕೈತೋರಿ ವಾಗ್ವಾದ ಮಾಡುತ್ತಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೊಹಮ್ಮದ್ ವಾರಿಸ್ ಅಲಿ ಎಂಬವರು ಫೇಸ್‌ಬುಕ್‌ನಲ್ಲಿ ಈ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ಆದರೆ, ಇದು ಸುಳ್ಳು.
ಫೋಟೊವನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ ಹಲವರು ಇದೇ ಫೋಟೊವನ್ನು ಹಂಚಿಕೊಂಡಿರುವುದು ಕಂಡು ಬಂತು. ಆ ಘಟನೆಯ ಬಗ್ಗೆ ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಿದಾಗ, ವಿಶ್ವಾಸಾರ್ಹ ಮಾಧ್ಯಮ ವರದಿಗಳು ಸಿಗಲಿಲ್ಲ. ಚಿತ್ರವನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಿದಾಗ ಅದು ಎಐ ಚಿತ್ರ ಆಗಿರಬಹುದೇ ಎನ್ನುವ ಅನುಮಾನ ಬಂತು.
ಇಬ್ಬರೂ ವಾಗ್ವಾದ ನಡೆಸುವುದನ್ನು ಕ್ಯಾಮೆರಾ ಸಿಬ್ಬಂದಿ ಚಿತ್ರೀಕರಿಸುವುದು ಅದರಲ್ಲಿ ಕಾಣಿಸುತ್ತದೆ. ಸದನದಲ್ಲಿ ಈ ರೀತಿ ವಿಡಿಯೊ ಚಿತ್ರೀಕರಣಕ್ಕೆ ಅವಕಾಶ ಇಲ್ಲ. ಚಿತ್ರದಲ್ಲಿರುವುದು ಸಂಸತ್ತಿನ ಹಳೆಯ ಕಟ್ಟಡದ ಲೋಕಸಭೆಯ ಸಭಾಂಗಣ.
ಈಗ ಅಧಿವೇಶನ ನಡೆಯುತ್ತಿರುವುದು ಸಂಸತ್ತಿನ ಹೊಸ ಕಟ್ಟಡದಲ್ಲಿ. ಇದರ ಆಧಾರದಲ್ಲಿ ಫೋಟೊವನ್ನು ಎಐ ಕಂಟೆಂಟ್ ಪತ್ತೆ ಟೂಲ್ ‘ಹೈವ್ ಮಾಡರೇಷನ್’ ಮೂಲಕ ಪರಿಶೀಲನೆಗೆ ಒಳಪಡಿಸಿದಾಗ ಅದು ಎಐ ಚಿತ್ರ ಎಂಬುದು ದೃಢಪಟ್ಟಿತು ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.