ADVERTISEMENT

ಫ್ಯಾಕ್ಟ್ ಚೆಕ್: ಕುಂಭಮೇಳದಲ್ಲಿ ಅಕ್ಷಯ್ , ಶ್ರಾಫ್ ಭಾಗಿಯಾಗಿದ್ದಾರೆಯೇ?

ಫ್ಯಾಕ್ಟ್ ಚೆಕ್
Published 16 ಫೆಬ್ರುವರಿ 2025, 23:52 IST
Last Updated 16 ಫೆಬ್ರುವರಿ 2025, 23:52 IST
   

ಹಿಂದಿ ಚಿತ್ರನಟರಾದ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅವರ ವಿಡಿಯೊ ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಭಾಗವಹಿಸಿದ್ದರು ಎಂದು ವಿಡಿಯೊ ಹಂಚಿಕೊಳ್ಳುತ್ತಿರುವವರು ಪ್ರತಿಪಾದನೆ ಮಾಡುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ. 

ಇನ್‌ವಿಡ್ ಟೂಲ್ ಮೂಲಕ ವಿಡಿಯೊ ಅನ್ನು ಪರಿಶೀಲಿಸಿದಾಗ ಹಲವು ಕೀಫ್ರೇಮ್‌ಗಳು ಕಂಡುಬಂದವು. ಅವುಗಳ ಪೈಕಿ ಒಂದು ಕೀಫ್ರೇಮ್ ಅನ್ನು ಗೂಗಲ್ ಲೆನ್ಸ್ ಮೂಲಕ ಪರೀಕ್ಷೆಗೊಳಪಡಿಸಿದಾಗ ಒಂದೇ ವಿಡಿಯೊ ಅನ್ನು ಅನೇಕರು ಇದೇ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿರುವುದು ಕಂಡುಬಂತು. ಈ ಬಗ್ಗೆ ಮತ್ತಷ್ಟು ಹುಡುಕಾಟ ನಡೆಸಿದಾಗ, 2024ರ ಏ.10ರಂದು ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿ ಸಿಕ್ಕಿತು. ವರದಿಯಲ್ಲಿ ಇರುವ ಚಿತ್ರಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಕೀಫ್ರೇಮ್‌ನ ಚಿತ್ರಕ್ಕೂ ಹೋಲಿಕೆ ಕಂಡುಬಂತು. ‘ಬಡೇ ಮಿಯಾ ಛೋಟೇ ಮಿಯಾ’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಮತ್ತು ಜಾಕಿ ಶ್ರಾಫ್ ಅವರು ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರಕ್ಕೆ ಭೇಟಿ ನೀಡಿದ್ದ ವೇಳೆ ತೆಗೆದ ಚಿತ್ರ ಇದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅಕ್ಷಯ್ ಕುಮಾರ್ ಅವರು 2024ರ ಏ.9ರಂದು ಇದೇ ವಿಡಿಯೊ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲೂ ಅಪ್‌ಲೋಡ್ ಮಾಡಿದ್ದಾರೆ. ಹಳೆಯ ವಿಡಿಯೊ ಅನ್ನು ಕೆಲವರು ಸುಳ್ಳು ಪ್ರತಿಪಾದನೆಗಳೊಂದಿಗೆ ಈಗ ಹಂಚಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT