ADVERTISEMENT

Fact Check|‘ಭೂಮಿಯಲ್ಲಿರುವ ಕೊನೆಯ, ಉತ್ತಮ ಆಶಾಕಿರಣ ಮೋದಿ’ ಎಂಬ ವರದಿ ನಿಜವೇ?

​ಪ್ರಜಾವಾಣಿ ವಾರ್ತೆ
Published 25 ಜೂನ್ 2023, 23:30 IST
Last Updated 25 ಜೂನ್ 2023, 23:30 IST
   

‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅಮೆರಿಕದ ‘ದಿ ನ್ಯೂಯಾರ್ಕ್‌ ಟೈಮ್ಸ್‌’ ಪ್ರತಿಕೆಯು ‘ಭೂಮಿಯಲ್ಲಿರುವ ಕೊನೆಯ, ಉತ್ತಮ ಆಶಾಕಿರಣ’ ಎಂಬ ತಲೆಬರಹದೊಂದಿಗೆ ಮುಖಪುಟದಲ್ಲಿ ಬರಹ ಪ್ರಕಟ ಮಾಡಿದೆ’ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪತ್ರಿಕೆಯ ತುಣುಕಿನ ಚಿತ್ರವು ವಾಟ್ಸ್‌ಆ್ಯಪ್‌ ಹಾಗೂ ಫೇಸ್‌ಬುಕ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಂಚಿಕೆಯಾಗಿದೆ. ಇದೇ ಪತ್ರಿಕೆಯ ತುಣುಕು 2021ರ ಸೆಪ್ಟೆಂಬರ್‌ನಲ್ಲಿಯೂ ಹರಿದಾಡಿತ್ತು. ಆಗ ಪ್ರಧಾನಿ ಮೋದಿ ಅವರು ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದರು. 2023ರ ಜೂನ್‌ನಲ್ಲಿ ಮೋದಿ ಅವರು ಮತ್ತೊಮ್ಮೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಇದೇ ಸಂದರ್ಭದಲ್ಲಿ ಮತ್ತೊಮ್ಮೆ ಇದೇ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ, ಇದು ಸುಳ್ಳು ಸುದ್ದಿ.

‘ಇದೊಂದು ತಿರುಚಲಾದ ಮುಖಪುಟವಾಗಿದೆ. ಇಂಥ ಯಾವುದೇ ವರದಿಯನ್ನು ನಾವು ಪ್ರಕಟಿಸಿಲ್ಲ’ ಎಂದು ಖುದ್ದು ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ 2021ರಲ್ಲಿಯೇ ಸ್ಪಷ್ಟನೆ ನೀಡಿತ್ತು. ಈ ಪತ್ರಿಕೆಯ ತುಣುಕಿನಲ್ಲಿ ಬಳಸಲಾಗಿರುವ ಪ್ರಧಾನಿ ಮೋದಿ ಅವರ ಚಿತ್ರವನ್ನು 2021ರ ಮಾರ್ಚ್‌ 12ರಂದು ತೆಗೆಯಲಾಗಿದೆ. ದಂಡಿ ಯಾತ್ರೆಗೆ 90 ವರ್ಷ ಸಂದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸಬರಮತಿ ಆಶ್ರಮಕ್ಕೆ ತೆರಳಿದ್ದರು. ಆಗ ಅವರು ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅಭಿಪ್ರಾಯ ಬರೆದಿದ್ದರು. ಈ ವೇಳೆ ಈ ಚಿತ್ರವನ್ನು ಸೆರೆಹಿಡಿಯಲಾಗಿತ್ತು. ಈ ಚಿತ್ರವನ್ನು ಈಗ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT