
ಶ್ರೇಯಸ್ ಅಯ್ಯರ್
ಭಾರತ ಕ್ರಿಕೆಟ್ ತಂಡದ ಶ್ರೇಯಸ್ ಅಯ್ಯರ್ ಅವರು 2025ರ ಅ.25ರಂದು ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡುವಾಗ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ, ಅವರು ಆಸ್ಪತ್ರೆಯ ಮಂಚದ ಮೇಲೆ ಕುಳಿತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವರು ತೀವ್ರ ನಿಗಾ ಘಟಕದಿಂದ ಹೊರಬಂದಿದ್ದಾರೆ ಎಂದೂ, ಅವರ ಆರೋಗ್ಯ ಸ್ಥಿರವಾಗಿದೆ ಎಂದೂ ಚಿತ್ರವನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಅದು ನಾಲ್ಕು ವರ್ಷಗಳ ಹಿಂದಿನ ಚಿತ್ರ.
ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಇದೇ ಚಿತ್ರವನ್ನು ಹಲವರು ಇದೇ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿರುವುದು ಕಂಡಿತು. ಮತ್ತಷ್ಟು ಹುಡುಕಾಟ ನಡೆಸಿದಾಗ, ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯಲ್ಲಿ 2021ರ ಏ.8ರಂದು ಇದೇ ಚಿತ್ರ ಪ್ರಕಟವಾಗಿರುವುದು ಕಂಡುಬಂತು. ಅದಕ್ಕೆ ಕೆಲವು ವಾರಗಳ ಮುಂಚೆ ನಡೆದಿದ್ದ ಇಂಗ್ಲೆಂಡ್–ಭಾರತ ಏಕದಿನ ಸರಣಿಯಲ್ಲಿ ಆಡುವಾಗ ಅವರ ಭುಜಕ್ಕೆ ಪೆಟ್ಟಾಗಿತ್ತು. ಗಾಯಗೊಂಡಿದ್ದ ಅವರು ಮಧ್ಯದಲ್ಲಿಯೇ ಸರಣಿಯಿಂದ ನಿರ್ಗಮಿಸಿದ್ದರು. ಅವರೇ ಆಸ್ಪತ್ರೆಯಲ್ಲಿದ್ದ ತಮ್ಮ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಚಿತ್ರವನ್ನು ಈಗ ಹಂಚಿಕೊಳ್ಳುವ ಮೂಲಕ ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.