
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ನಗರ ಪಾಲಿಕೆ ಚುನಾವಣೆಯಲ್ಲಿ ಮತಗಟ್ಟೆಯೊಂದರಲ್ಲಿ ಸ್ವಾಮೀಜಿಗಳು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ ಎಂದು ಪ್ರತಿಪಾದಿಸುತ್ತಾ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದನ್ನು ಹಂಚಿಕೊಳ್ಳುತ್ತಿದ್ದಾರೆ. ‘ಟೊಪ್ಪಿ ಮತ್ತು ಬುರ್ಕಾ ಧರಿಸಿದವರು ಮತದಾನ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ, ಇದನ್ನೂ ನೋಡಿ’ ಎಂಬ ಒಕ್ಕಣೆಯನ್ನು ವಿಡಿಯೊದಲ್ಲಿ ಬರೆಯಲಾಗಿದೆ. ಆದರೆ, ಇದು ಸುಳ್ಳು.
ವಿಡಿಯೊದ ಕೀ ಫ್ರೇಮ್ ಒಂದನ್ನು ರಿವರ್ಸ್ ಇಮೇಜ್ ಸರ್ಚ್ ವಿಧಾನದ ಮೂಲಕ ಆನ್‌ಲೈನ್‌ನಲ್ಲಿ ಹುಡುಕಿದಾಗ 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದೇ ವಿಡಿಯೊ ಅಪ್‌ಲೋಡ್ ಆಗಿದ್ದು ಕಂಡು ಬಂತು. ಆಗಲೂ ಹಲವರು ಈ ವಿಡಿಯೊವನ್ನು ಹಂಚಿಕೊಂಡಿದ್ದರು. ಅದು ಗುಜರಾತ್ ವಡೋದರಾದಲ್ಲಿನ ಮತಗಟ್ಟೆಗೆ ಸಂಬಂಧಿಸಿದ ವಿಡಿಯೊ ಆಗಿತ್ತು. ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮತಗಟ್ಟೆಯ ಗೋಡೆಯಲ್ಲಿ ಗುಜರಾತಿ ಭಾಷೆಯಲ್ಲಿ ಬರೆದಿರುವುದು ಕಂಡು ಬರುತ್ತದೆ. ಇದರ ಆಧಾರದಲ್ಲಿ ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಿದಾಗ ಸ್ವಾಮಿನಾರಾಯಣ ಸಂಪ್ರದಾಯದ ಸನ್ಯಾಸಿಗಳು 2024 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಗುಜರಾತ್‌ನ ವಡೋದರಾದ ಮತಗಟ್ಟೆಯೊಂದರಲ್ಲಿ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ಫೋಟೊಗಳು ಮತ್ತು ವಿಡಿಯೊಗಳು ಸಿಕ್ಕಿದವು. ಆಕಾಶವಾಣಿ (ಆಲ್ ಇಂಡಿಯಾ ರೇಡಿಯೊ) ಕೂಡ ತನ್ನ ಎಕ್ಸ್ ಖಾತೆಯಲ್ಲಿ 2019ರ ಚುನಾವಣೆಯಲ್ಲಿ ಸ್ವಾಮಿನಾರಾಯಣ ಪರಂಪರೆಯ ಸ್ವಾಮೀಜಿಗಳು ಮತದಾನ ಮಾಡಲು ಮತಗಟ್ಟೆಗೆ ಬಂದಿರುವ ಫೋಟೊವನ್ನು ಹಂಚಿಕೊಂಡಿತ್ತು. ಇದು ಗುಜರಾತ್‌ಗೆ ಸಂಬಂಧಿಸಿದ್ದ ವಿಡಿಯೊವಾಗಿದ್ದು, ಹಳೆಯದು. ಈಗ ಜಾಲತಾಣಗಳಲ್ಲಿ ಮಹಾರಾಷ್ಟ್ರದ ವಿಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.