ADVERTISEMENT

Fact Check:ಯುಜಿಸಿ ನಿಯಮ ಜಾರಿಗಾಗಿ ವಿದ್ಯಾರ್ಥಿಗಳ ಪ್ರತಿಭಟನೆಯ ವಿಡಿಯೊ ಸುಳ್ಳು

ಫ್ಯಾಕ್ಟ್ ಚೆಕ್
Published 10 ಫೆಬ್ರುವರಿ 2026, 0:30 IST
Last Updated 10 ಫೆಬ್ರುವರಿ 2026, 0:30 IST
   
ರಸ್ತೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿರುವ, ವಾಹನಗಳ ಸಂಚಾರವನ್ನು ತಡೆದಿರುವ ವಿಡಿಯೊ ತುಣುಕೊಂದನ್ನು ಸಾಮಾಜಿಕ ಕಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ‘ಇದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ರೂಪಿಸಿರುವ ಹೊಸ ನಿಯಮಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಬಿಹಾರದ ಪಟ್ನಾದಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ದೃಶ್ಯ. ಈ ಪ್ರತಿಭಟನೆಯನ್ನು ಮುಖ್ಯವಾಹಿನಿಯ ಮಾಧ್ಯಮಗಳು ನಿರ್ಲಕ್ಷಿಸಿವೆ’ ಎಂದು ಪೋಸ್ಟ್‌ಗಳಲ್ಲಿ ಪ್ರತಿಪಾದಿಸಲಾಗುತ್ತಿದೆ. ಆದರೆ, ಇದು ಸುಳ್ಳು.

ವಿಡಿಯೊ ತುಣುಕಿನಿಂದ ಕೀಫ್ರೇಮ್‌ ಒಂದನ್ನು ಪ್ರತ್ಯೇಕಿಸಿ ರಿವರ್ಸ್‌ ಸರ್ಚ್‌ ವಿಧಾನದಲ್ಲಿ ಗೂಗಲ್‌ ಲೆನ್ಸ್‌ ಬಳಸಿ ಹುಡುಕಿದಾಗ, 2025ರ ಸೆಪ್ಟೆಂಬರ್‌ 21ರಂದು ‘ಮಹಾರಿಯಾಪ್ರಹ್ಲಾದ್‌’ ಎಂಬುವವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದೇ ವಿಡಿಯೊ ಪೋಸ್ಟ್‌ ಆಗಿತ್ತು. ಅದರಲ್ಲಿದ್ದ ಶೀರ್ಷಿಕೆಯ ಪ್ರಕಾರ, ಈ ವಿಡಿಯೊ ತುಣುಕನ್ನು ಅಸ್ಸಾಂನ ಗುವಾಹಟಿಯಲ್ಲಿ ಚಿತ್ರೀಕರಿಸಲಾಗಿದೆ. ‌ಮೃತಪಟ್ಟಿದ್ದ ಅಸ್ಸಾಂನ ಗಾಯಕ ಜುಬಿನ್‌ ಗರ್ಗ್‌ ಅವರಿಗೆ ಅಂತಿಮ ನಮನ ಸಲ್ಲಿಸಲು ಸೇರಿದ್ದ ಜನಸ್ತೋಮದ ವಿಡಿಯೊ ಅದು. ಇದರ ಆಧಾರದಲ್ಲಿ ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಾಟ ನಡೆಸಿದಾಗ ವಿವಿಧ ಮಾಧ್ಯಮಗಳಲ್ಲಿ ಸೆಪ್ಟೆಂಬರ್‌ 11, 23ರಂದು ಇದೇ ವಿಡಿಯೊ ಹಾಗೂ ಫೋಟೊ ಸಹಿತ ವರದಿಗಳು ಪ್ರಕಟವಾಗಿದ್ದವು. ಹಳೆಯ ವಿಡಿಯೊವನ್ನು ಯುಜಿಸಿ ನಿಯಮ ಜಾರಿಗೆ ಒತ್ತಾಯಿಸಿ ನಡೆದ ಪ್ರತಿಭಟನೆಯ ವಿಡಿಯೊ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್‌ ಚೆಕ್ ವರದಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.